ಹಾವೇರಿ: ‘ಜಿಲ್ಲೆಯಲ್ಲಿ ಬರಗಾಲದಿಂದ ಅಂತರ್ಜಲ ಕುಸಿತಗೊಂಡಿದ್ದು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಳೆಗಳು ಒಣಗುತ್ತಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಬರಬೇಕು’ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
‘ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸಾವಿರಾರು ಎಕರೆ ಕಬ್ಬು ಒಣಗಿವೆ. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಮತ್ತು ಸಕ್ಕರೆ ಸಚಿವರು, ಜನಪ್ರತಿನಿಧಿಗಳೊಂದಿಗೆ ರೈತ ಮುಖಂಡರ ಸಭೆ ಕರೆಯಬೇಕು. ಬೆಳೆ ನಷ್ಟದಿಂದ ನೊಂದಿರುವ ರೈತರಿಗೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮವಹಿಸಬೇಕು. ಮಳೆ ಪ್ರಮಾಣ ಕಡಿಮೆಯಾಗಿ ಕೊಳವೆ ಬಾವಿಗಳು ಬತ್ತಿವೆ,ಕಬ್ಬು ಅಡಿಕೆ ತೆಂಗು ತರಕಾರಿ ಬೆಳೆದ ರೈತರು ನೀರಿಲ್ಲದೆ ಪರದಾಡುವಂಥಾಗಿದೆ’ ಎಂದು ತಿಳಿಸಿದ್ದಾರೆ.
‘ಕೃಷಿ ಪಂಪ್ ಸೆಟ್ ನಂಬಿ ಬೆಳೆ ಹಾಕಿರುವ ರೈತರು ಜಮೀನುಗಳಲ್ಲಿ ಕೊಳವೆಬಾವಿ ನೀರಿನ ಪ್ರಮಾಣ ಕಡಿಮೆಯಾಗಿವೆ ಸಮರ್ಪಕ ವಿದ್ಯುತ್ ಕೊರತೆ ಒಂದಡೆಯಾದರೆ ಅಂತರ್ಜಲ ಕುಸಿತ ರೈತರನ್ನು ಸಂಕಷ್ಟಕೀಡು ಮಾಡಿದೆ,ಸರ್ಕಾರ ಕೂಡಲೇ ಜಮೀನುಗಳಲ್ಲಿ ಹಾನಿಯಾದ ಬೆಳೆಗಳನ್ನು ಸಮೀಕ್ಷೆ ಮಾಡಿಸಿ ರೈತರಿಗೆ ಕಬ್ಬು ಬೆಳೆಗಾರರಿಗೆ ಸಂಪೂರ್ಣ ನಷ್ಟ ಒದಗಿಸಿ ಕೊಡಬೇಕು. ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿ ಬರಗಾಲ ಬಿದ್ದು ಎಂಟು ತಿಂಗಳಾದರು. ಸರ್ಕಾರ ಬರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಈ ಹಿಂದೆ ಹಾವೇರಿ ಜಿಲ್ಲೆಯಿಂದ ಬರ ಪರಿಹಾರಕ್ಕಾಗಿ ಸುಮಾರು 18 ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ನಮಗೆ ಪರಿಹಾರಕ್ಕಾಗಿ ಯಾವ ಒಬ್ಬ ರೈತನು ಅರ್ಜಿ ಕೊಟ್ಟಿಲ್ಲವೆಂದು ಉಡಾಫೆ ಮಾತನ್ನು ಮಾತನಾಡುತ್ತಿದ್ದಾರೆ. ಈಗಾಗಲೇ ದಾಖಲೆ ಸಮೇತ ಬರ ಪರಿಹಾರಕ್ಕೆ ಅರ್ಜಿಯನ್ನು ಕೊಡಲಾಗಿದೆ’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.