ಹಾವೇರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೀಡಿರುವುದು ಕಾನೂನುಬಾಹಿರ. ರಾಜ್ಯಪಾಲರು ಕೂಡಲೇ ಶೋಕಾಸ್ ಹಿಂಪಡೆಯಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಹಾಗೂ ಅಹಿಂದ ಮುಖಂಡರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಜಿಲ್ಲಾ ಘಟಕ ಹಾಗೂ ಅಹಿಂದ ಸಂಘಟನೆ ನೇತೃತ್ವದಲ್ಲಿ ಜಂಟಿಯಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪುರಸಿದ್ದೇಶ್ವರ ದೇವಸ್ಥಾನ ಬಳಿ ಸೇರಿದ್ದ ಪ್ರತಿಭಟನಕಾರರು, ಅಲ್ಲಿಂದ ಹೊಸಮನಿ ಸಿದ್ಧಪ್ಪ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಮೆರವಣಗೆಯುದ್ದಕ್ಕೂ ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ’, ‘ಮುಖ್ಯಮಂತ್ರಿ ಜನಪ್ರಿಯತೆಗೆ ಮಂಕಾದ ಬಿಜೆಪಿ–ಜೆಡಿಎಸ್’, ‘ಹಿಂದುಳಿದ ವರ್ಗಗಳ ನಾಯಕನ ವಿರುದ್ಧ ಕುತಂತ್ರ’, ‘ಬಿಜೆಪಿ ಕೈಗೊಂಬೆಯಾದ ರಾಜ್ಯಪಾಲ’, ‘ರಾಜ್ಯ ಸರ್ಕಾರ ಉರುಳಿಸುವ ಹುನ್ನಾರ’ ಎಂಬ ಘೋಷಣಾ ಫಲಕಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು. ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮೆರವಣಿಗೆ ಅಂತ್ಯಗೊಳಿಸಿದ ಪ್ರತಿಭಟನಕಾರರು, ವಾಹನಗಳ ಸಂಚಾರ ತಡೆದು ಪ್ರತಿಭಟನೆ ಮುಂದುವರಿಸಿದರು.
‘ಗ್ಯಾರಂಟಿ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜ್ಯದ ಜನರ ಮನಗೆದ್ದಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಜನರು ಹೊಗಳುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಇಲ್ಲಸಲ್ಲದ ಆರೋಪ ಮಾಡಿ ಮುಖ್ಯಮಂತ್ರಿ ಅವರ ಹೆಸರಿಗೆ ಧಕ್ಕೆ ತರುತ್ತಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.
‘ಬಿಜೆಪಿ– ಜೆಡಿಎಸ್ ಮುಖಂಡರು ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಈಗ ಸಿದ್ದರಾಮಯ್ಯ ಅವರ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಹಿಂದ ಸಮುದಾಯದವರು ಸಹಿಸುವುದಿಲ್ಲ. ಎಲ್ಲರೂ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
‘ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಪುನಃ ಅಧಿಕಾರಕ್ಕೆ ಬರಲಿದೆ. ಇದು ಗೊತ್ತಾಗುತ್ತಿದ್ದಂತೆ, ಬಿಜೆಪಿ ಹಾಗೂ ಜೆಡಿಎಸ್‌ನವರು ಒಳಸಂಚು ಮಾಡಿ ಸರ್ಕಾರ ಬೀಳಿಸಲು ಹೊರಟಿದ್ದಾರೆ. ಇದು ಅವರ ಭ್ರಮೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿಯೂ ಜನರ ಪರವಾಗಿ ಕೆಲಸ ಮುಂದುವರಿಸಲಿದೆ’ ಎಂದು ಪ್ರತಿಭಟನಕಾರರು ಹೇಳಿದರು.
ಶೋಕಾಸ್ ಹಿಂಪಡೆಯದಿದ್ದರೆ ಹೋರಾಟ: ‘ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲ, ಅಧಿಕಾರ ದುರುಪಯೋಗಪಡಿಸಿಕೊಂಡು ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೀಡಿದ್ದಾರೆ. ಇದು ಕಾನೂನು ಬಾಹಿರ. ಈ ಶೋಕಾಸ್ ಹಿಂಪಡೆಯದಿದ್ದರೆ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
‘ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಆರೋಪಗಳಿಲ್ಲ. ಅವರು ಎಲ್ಲವನ್ನೂ ಕಾನೂನುಬದ್ಧವಾಗಿ ಮಾಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಅವರದ್ದು ಸುಳ್ಳು ಆರೋಪ ಎನ್ನುವುದು ರಾಜ್ಯದ ಜನರಿಗೂ ಗೊತ್ತಿದೆ’ ಎಂದು ಪ್ರತಿಭಟನಕಾರರು ಹೇಳಿದರು.
ಶಾಸಕರಾದ ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಯು.ಬಿ. ಬಣಕಾರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮುಖಂಡರಾದ ಎಸ್.ಎಫ್.ಎನ್. ಗಾಜೀಗೌಡ್ರ, ಸೈಯದ್ ಅಜ್ಜಂಪೀರ ಖಾದ್ರಿ, ಆರ್. ಶಂಕರ್, ಯಾಸೀರಅಹ್ಮದ್ ಖಾನ್ ಪಠಾಣ, ಹನುಮಂತ ಬಂಡಿವಡ್ಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.