ಮಂಗಳವಾರ, ಫೆಬ್ರವರಿ 18, 2020
29 °C
ರಾಜ್ಯಮಟ್ಟದ ಜಾನಪದ ಜಾತ್ರೆಗೆ ಅದ್ಧೂರಿ ಚಾಲನೆ: ಮೆರುಗು ತಂದ ಕಲಾತಂಡಗಳು

ಜಾನಪದ ಸಂಸ್ಕೃತಿಗೆ ಸಾವಿಲ್ಲ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕನ್ನಡ ಮತ್ತು ಜಾನಪದ ಎಂದಿಗೂ ನಶಿಸಿ ಹೋಗುವುದಿಲ್ಲ. ಮನುಕುಲ ಇರುವವರೆಗೂ ಶಾಶ್ವತವಾಗಿ ಇರುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. 

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಜಾನಪದ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಜಾನಪದಕ್ಕೆ ಲಿಪಿಯಿಲ್ಲ. ಇದು ತನ್ನದೇ ಆದ ತಾಯಿಭಾಷೆಯನ್ನು ಹೊಂದಿದೆ. ಇದು ಹೃದಯದಿಂದ ಹೃದಯಕ್ಕೆ ಬಾಂಧವ್ಯ ಬೆಸೆಯುತ್ತದೆ. ಸಂತೋಷ, ದುಃಖ, ಸಿಟ್ಟು ಇದ್ದಾಗ ಮನುಷ್ಯ ಜಾನಪದ ಬಳಸುತ್ತಾನೆ. ಬದುಕು ಮತ್ತು ಜಾನಪದ ಒಂದಕ್ಕೊಂದು ಹಾಸುಹೊಕ್ಕಾಗಿದೆ. ಇದಕ್ಕೆ ಶಿಸ್ತು, ಆಯಾಮ ತರಲು ಕೆಲವರು ಪ್ರಯತ್ನಿಸುತ್ತಾರೆ. ಶಿಸ್ತಿಗೆ ಒಳಪಡಿಸಿದರೆ ಜಾನಪದವೇ ಇರುವುದಿಲ್ಲ. ಅದು ಸಹಜವಾಗಿ, ಆ ಕ್ಷಣಕ್ಕೆ ಮೂಡುವಂಥದ್ದು ಎಂದು ಬಣ್ಣಿಸಿದರು. 

ಜಾನಪದ ಒಂದು ಒರಿಜಿನಲ್ ಸಾಫ್ಟ್‌ವೇರ್‌ ಇದ್ದಂತೆ. ಹಾಡು, ನೃತ್ಯ, ವೇಷಭೂಷಣದ ಮೂಲಕ ಸಂದೇಶ ನೀಡುತ್ತದೆ. ನಾಡು– ನುಡಿಯ ಬಗ್ಗೆ ಅಭಿಮಾನವಿರಲಿ. ಮುಖ್ಯವಾಗಿ ಸಕಾರಾತ್ಮಕ ಧೋರಣೆಯಿರಲಿ. ಚಿಂತನೆ, ಮೌಲ್ಯ, ಸಂಬಂಧಗಳಲ್ಲಿ ಆದ ಬದಲಾವಣೆಯೇ ಸಂಸ್ಕೃತಿ ಎಂದು ಹೇಳಿದರು. 

ಬಿಎಸ್‌ವೈ ಕೊಡುಗೆ ಜಾನಪದ ವಿ.ವಿ: ಜಾನಪದ ವಿಶ್ವವಿದ್ಯಾಲಯವನ್ನು ಸಿಎಂ ತವರುಕ್ಷೇತ್ರ ಶಿಕಾರಿಪುರಕ್ಕೆ ನೀಡಿ, ಯಡಿಯೂರಪ್ಪ ಅವರನ್ನು ಖುಷಿಗೊಳಿಸಲು ಅಧಿಕಾರಿಗಳು ಸಿದ್ಧರಾಗಿದ್ದರು. ಕಡೇ ಕ್ಷಣದಲ್ಲಿ ನಮ್ಮ ತಾಲ್ಲೂಕು ಶಿಗ್ಗಾವಿಗೆ ಬೇಕು ಎಂದು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದಾಗ, ಅವರು ಪ್ರೀತಿಯಿಂದಲೇ ಒಪ್ಪಿಗೆ ನೀಡಿದರು. ಗವರ್ನರ್‌ ಅವರಿಂದಲೂ ಅಂಕಿತ ಸಿಕ್ಕಿತು ಎಂದು ಹೇಳಿದರು. 

ಉತ್ತರ ಕರ್ನಾಟಕದ ಬಗ್ಗೆ ಯಡಿಯೂರಪ್ಪ ಅವರಿಗೆ ಅಪಾರ ಪ್ರೀತಿಯಿದೆ. ಅದರ ಧ್ಯೋತಕವೇ ಜಾನಪದ ವಿ.ವಿ ಕೊಡುಗೆ. ಇದು ನೌಕರ ಕೊಡುವ ವಿವಿಯಲ್ಲ, ಬದುಕು ಕಂಡುಕೊಳ್ಳುವ, ಸಂಸ್ಕೃತಿ ಕಟ್ಟಿಕೊಡುವ ವಿಶ್ವವಿದ್ಯಾಲಯ. ಇಲ್ಲಿ ಪ್ರತಿ ವರ್ಷ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ ಎಂದರು. 

ಹಾವೇರಿಗೆ ಒಳ್ಳೆ ದಿನಗಳು: ಕನಕದಾಸರ ಬಾಡ ಗ್ರಾಮದಂತೆ, ಶರೀಫರ ಶಿಶುವಿನಹಾಳ, ಗಳಗನಾಥರ ಗ್ರಾಮ ಮತ್ತು ಸರ್ವಜ್ಞರ ಅಬಲೂರನ್ನು ಸಮಗ್ರ ಅಭಿವೃದ್ಧಿ ಪಡಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು. 2012ರಲ್ಲಿ ಕೈ ತಪ್ಪಿ ಹೋಗಿದ್ದ ಮೆಡಿಕಲ್‌ ಕಾಲೇಜು ಮತ್ತೆ ಜಿಲ್ಲೆಗೆ ಸಿಕ್ಕಿದೆ. ₹2 ಸಾವಿರ ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಕಾಮಗಾರಿಗಳು ಆರಂಭವಾಗಬೇಕಿದೆ. ಹಾವೇರಿಗೆ ಒಳ್ಳೆ ದಿನಗಳು ಬಂದಿವೆ. ಅದು ಬಿಎಸ್‌ವೈ ಅವರಿಂದ ಎಂದು ಗುಣಗಾನ ಮಾಡಿದರು. 

ವಿಜೃಂಭಣೆಯ ಅಕ್ಷರ ಜಾತ್ರೆ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಂದೆಂದೂ ಕಾಣದಂಥ ರೀತಿಯಲ್ಲಿ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಮಾಡುತ್ತೇವೆ. ಅದಕ್ಕೆ ಅಗತ್ಯ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುತ್ತೇವೆ. ಅದರ ಮುನ್ನಡಿಯಾಗಿ ಈ ಜಾನಪದ ಜಾತ್ರೆ ನಡೆಯುತ್ತಿದೆ ಎಂದು ಹೇಳಿದರು. 

ಶಾಸಕ ನೆಹರೂ ಓಲೇಕಾರ, ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಸಿಇಒ ರಮೇಶ ದೇಸಾಯಿ ಇತರ ಗಣ್ಯರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು