ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ನಗರದಲ್ಲಿ ಅಕ್ಷರ ಜಾತ್ರೆ ಜ.27ರಿಂದ

ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರಾಗಿ ಗಂಗಾಧರ ನಂದಿ ಆಯ್ಕೆ
Last Updated 21 ಜನವರಿ 2020, 15:57 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.27 ಮತ್ತು ಜ.28ರಂದು ನಗರದ ದಾನೇಶ್ವರಿ ನಗರದಲ್ಲಿರುವ ರಜನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜ.27ರಂದು ಬೆಳಿಗ್ಗೆ 8 ಗಂಟೆಗೆ ವಿ.ಕೃ.ಗೋಕಾಕ ಮಹಾಮಂಟಪದಲ್ಲಿ ಧ್ಜಜಾರೋಹಣ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರಧ್ವಜಾರೋಹಣವನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಪರಿಷತ್‌ ಧ್ವಜಾರೋಹಣವನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ, ನಾಡ ಧ್ವಜಾರೋಹಣವನ್ನು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ. ಆಲದಕಟ್ಟಿ ನೆರವೇರಿಸಲಿದ್ದಾರೆ ಎಂದರು.

ಉದ್ಘಾಟನೆ:

ಜ.27ರ ಬೆಳಿಗ್ಗೆ 11 ಗಂಟೆಗೆ ಕಾದಂಬರಿ ಪಿತಾಮಹ ಗಳಗನಾಥರ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದೆ. ಸಮ್ಮೇಳನಾಧ್ಯಕ್ಷ ಗಂಗಾಧರ ನಂದಿ ಮತ್ತು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಕೆ.ಎಚ್‌. ಮುಕ್ಕಣ್ಣನವರ ಉಪಸ್ಥಿತರಿರುತ್ತಾರೆ.ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದು, ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಲಿದ್ದಾರೆ. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಮರ್ಶಕ ಡಾ.ರಾಜೇಂದ್ರ ಚನ್ನಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಪುಸ್ತಕ ಬಿಡುಗಡೆ:

ಒಟ್ಟು ಎಂಟು ಪುಸ್ತಕಗಳು ಬಿಡುಗಡೆಯಾಗಲಿವೆ. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಸಿ.ಎಂ. ಉದಾಸಿ, ಬಿ.ಸಿ.ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಸಚಿವರಾದ ಬಸವರಾಜ ನೀ. ಶಿವಣ್ಣನವರ, ರುದ್ರಪ್ಪ ಮಾನಪ್ಪ ಲಮಾಣಿ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ವಾಣಿಜ್ಯ ಮಳಿಗೆಗಳ ಉದ್ಘಾಟನೆಯನ್ನು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು ಎಸ್‌.ಕೆ. ಕರಿಯಣ್ಣನವರ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಗೋಷ್ಠಿಗಳು:

ಜ.27ರ ಮಧ್ಯಾಹ್ನ 1ಕ್ಕೆ ಗೋಷ್ಠಿ–1 ಸಾಹಿತ್ಯ ಪಥ, 2.30ಕ್ಕೆ ಗೋಷ್ಠಿ–2 ಕನ್ನಡ ಪಥ, ಸಂಜೆ 4ಕ್ಕೆ ಗೋಷ್ಠಿ –3 ನಮ್ಮ ಜಿಲ್ಲೆ–ನಮ್ಮ ಹೆಮ್ಮೆ ನಡೆಯಲಿವೆ. ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದು, ಸಾಹಿತಿ ಸಿ.ಎಸ್‌.ಮರಳಿಹಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಜ.28ರಂದು ಬೆಳಿಗ್ಗೆ 9ಕ್ಕೆ ಗೋಷ್ಠಿ–4 ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಪ್ರೊ.ರಂಜಾನ್‌ ಕಿಲ್ಲೇದಾರ ಆಶಯನುಡಿಗಳನ್ನಾಡಲಿದ್ದಾರೆ. ಡಾ.ಸೋಮಲಿಂಗಪ್ಪ ಚಿಕ್ಕಳ್ಳವರ ಮತ್ತು ಕಾಂತೇಶ ಅಂಬಿಗೇರ ಭಾಗವಹಿಸಲಿದ್ದಾರೆ. ಗೋಷ್ಠಿ–5 ಬೆಳಿಗ್ಗೆ 11.30ಕ್ಕೆ ವರ್ತಮಾನದ ವ್ಯವಸ್ಥೆಯಲ್ಲಿ ಸ್ತ್ರೀಪರ ಚಿಂತನೆಗಳು, ಮಧ್ಯಾಹ್ನ 1.30ಕ್ಕೆ ಗೋಷ್ಠಿ–6 ಸಂಕೀರ್ಣ ಗೋಷ್ಠಿ, ಮಧ್ಯಾಹ್ನ 3ಕ್ಕೆ ಗೋಷ್ಠಿ–7 ರೈತ ಗೋಷ್ಠಿ ನಡೆಯಲಿವೆ. ಸಂಜೆ 4 ಗಂಟೆಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

ಜ.28ರ ಸಂಜೆ 5 ಗಂಟೆಗೆ ‘ಬಹಿರಂಗ ಅಧಿವೇಶನ’ ನಡೆಯಲಿದ್ದು, ಕಸಪಾ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಅಧ್ಯಕ್ಷತೆ ವಹಿಸಲಿದ್ದು, ಗೌರವ ಕಾರ್ಯದರ್ಶಿ ಬಿ.ಪಿ. ಶಿಡೇನೂರ ನಿರ್ಣಯಗಳ ಮಂಡನೆ ನಿರ್ವಹಿಸಲಿದ್ದಾರೆ.

ಸಮಾರೋಪ:

ಜ.28ರ ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮತ್ತು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಲಿದ್ದು, ಜಾನಪದ ವಿದ್ವಾಂಸ ಶಂಭು ಬಳಿಗಾರ ಸಮಾರೋಪ ನುಡಿಗಳನ್ನಾಡಲಿದ್ದಾರೆ.ಜಿಲ್ಲೆಯಿಂದ ಕೆ.ಎಸ್‌.ಎಸ್‌. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತನಾಟ್ಯ, ಗುಂಪು ನೃತ್ಯ, ಹಾಸ್ಯ, ಸ್ಯಾಕ್ಸೊಫೋನ್‌ ವಾದನ, ಸುಗಮ ಸಂಗೀತ, ಜಾಗೃತಿ ಗೀತೆ, ಭಕ್ತಿಗೀತೆ, ಭಾವಗೀತೆಯನ್ನು ವಿವಿಧ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT