ಭಾನುವಾರ, ಮೇ 16, 2021
22 °C
ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಲಹೆ

ನಿಷ್ಪಕ್ಷಪಾತ ಚುನಾವಣೆಗೆ ನಿಗಾ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮತಗಟ್ಟೆಯ ವಿದ್ಯುಮಾನಗಳ ಬಗೆಗೆ ಗಮನಿಸಿ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾದ ಚುನಾವಣೆಗಾಗಿ ಮತಗಟ್ಟೆವಾರು ನೇಮಕಗೊಂಡ ಮೈಕ್ರೋ ವೀಕ್ಷಕರು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತಗಟ್ಟೆ ಮೈಕ್ರೊ ಅಬ್ಸರ್‌ವರ್‌ಗಳ ಮೊದಲ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 37 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬರಂತೆ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಮೈಕ್ರೋ ಅಬ್ಸರ್‌ವರ್‌ಗಳ ನೇಮಕ ಮಾಡಲಾಗಿದೆ. ನೇಮಕಗೊಂಡ ಅಧಿಕಾರಿಗಳು ಮತಗಟ್ಟೆಯ ಚಲನವಲನ, ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮತದಾನ ಪ್ರಕ್ರಿಯೆ ಕುರಿತಂತೆ ನಿಗಾವಹಿಸಿ ವರದಿ ಮಾಡುವಂತೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಅವರು ಮೈಕ್ರೊ ವೀಕ್ಷಕರ ಕರ್ತವ್ಯಗಳು ಹಾಗೂ ಕಾರ್ಯನಿರ್ವಹಣೆ ಕುರಿತಂತೆ ವಿವರಿಸಿದರು. 

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ:

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನ ಅ.28ರಂದು ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗಾಗಿ ನಿಯೋಜಿತಗೊಂಡ ಸಿಬ್ಬಂದಿಗೆ ನಗರದ ಹುಕ್ಕೇರಿಮಠ ಕಾಲೇಜಿನಲ್ಲಿ ತರಬೇತಿ ನಡೆಯಿತು.

ತಹಶೀಲ್ದಾರ್ ಶಂಕರ ಮಾತನಾಡಿ, ಆಯೋಗದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿ, ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳ ಕುರಿತಂತೆ ಮತಗಟ್ಟೆ ಕೇಂದ್ರಗಳಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಅಚ್ಚುಕಟ್ಟಾಗಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತಗಟ್ಟೆ ನಿಯಮಾವಳಿಗಳ ಕುರಿತಂತೆ ತರಬೇತಿಯಲ್ಲಿ ಮನವಿ ಮಾಡಿಕೊಂಡು ವ್ಯವಸ್ಥಿತ ಹಾಗೂ ಪಾರದರ್ಶಕ ಮತದಾನದ ವ್ಯವಸ್ಥೆಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ, ಶಿಕ್ಷಣಾಧಿಕಾರಿ ಭಗವಂತಗೌಡರ ಇತರ ಸಂಪನ್ಮೂಲ ಅಧಿಕಾರಿಗಳು ನಿಯೋಜಿತ ಮತಗಟ್ಟೆ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತಂತೆ ತರಬೇತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.