ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಊಸರವಳ್ಳಿ, ಜೋಕರ್: ಬಿ.ಸಿ.ಪಾಟೀಲ

Last Updated 1 ಡಿಸೆಂಬರ್ 2019, 13:14 IST
ಅಕ್ಷರ ಗಾತ್ರ

ಹಾವೇರಿ: ‘ಆ ಕುಮಾರಸ್ವಾಮಿ ಊಸರವಳ್ಳಿ ಇದ್ದಂಗೆ. ಇಸ್ಪೀಟ್ ಕಾರ್ಡ್‌ನಲ್ಲಿ ಬರೋ ಜೋಕರ್ ಸಹ ಅವ್ರೇ. ಅಧಿಕಾರಕ್ಕಾಗಿ ಹೆಂಗೆ ಬೇಕಾದ್ರೂ ಬಣ್ಣ ಬದಲಿಸ್ತಾರೆ...’

ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಈ ರೀತಿ ಲೇವಡಿ ಮಾಡಿದ ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ.ಪಾಟೀಲ, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ 17 ಅನರ್ಹ ಶಾಸಕರಿಗೂ ಯಾವುದೇ ಸಂಬಂಧವಿಲ್ಲ’ ಎಂದೂ ಹೇಳಿದರು.

‘ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸುವ ಸಂದರ್ಭ ಬಂದಿದ್ದಾಗ, ‘ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ’ ಎಂದು ಪಟ್ಟು ಹಿಡಿದಿದ್ದರು. ಯಡಿಯೂರಪ್ಪ ಜತೆ ಗಲಾಟೆಯನ್ನೂ ಮಾಡಿದ್ದರು. ಆದರೆ, ಇವತ್ತು ಅವರ ಜತೆಗೇ ಹೋಗೋಕೆ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

‘ಇಸ್ಪೀಟ್‌ನಲ್ಲಿ ಜೋಕರ್ ಕಾರ್ಡ್ ಬಂತು ಅಂದ್ರೆ ಹೇಗಾದ್ರೂ ಆಟ ಆಗತ್ತೆ. ಇಲ್ಲಿ ಆ ಜೋಕರ್ ಕುಮಾರಸ್ವಾಮಿ. ಯಾರ ಕಡೆ ಆಟ ಆಗತ್ತೋ ಆ ಕಡೆ ಅವರು ಇರ್ತಾರೆ. ಅಧಿಕಾರ ಬಿಟ್ಟಿರೋಕೆ ಆ ವ್ಯಕ್ತಿಗೆ ಆಗಲ್ಲ’ ಎಂದೂ ಕುಟುಕಿದರು.

ನಾವೇನು ಸನ್ಯಾಸಿಗಳಲ್ಲ
‘ಕಾಂಗ್ರೆಸ್‌ನಲ್ಲಿ ಹಾಗೂ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಉಸಿರುಗಟ್ಟುವ ವಾತಾವರಣ ಇತ್ತು. ದೇವೇಗೌಡರ ಕುಟುಂಬ, ಡಿ.ಕೆ.ಶಿವಕುಮಾರ್ ಬಿಟ್ಟರೆ ಬೇರೆ ಯಾರಿಗೂ ಅಲ್ಲಿ ಬೆಲೆ ಇರಲಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರೇ ಮೂಲೆ ಸೇರಿದ್ದರು‌’ ಎಂದೂ ಬಿ.ಸಿ.ಪಾಟೀಲ ವಿವರಿಸಿದರು.

‘ಅಂತಹ ಕೆಟ್ಟ ವ್ಯವಸ್ಥೆಯಿಂದ ನಾವೇ ದೂರ ಉಳಿದೆವು. ಆದರೆ, ‘ಮಂತ್ರಿ ಮಾಡಲಿಲ್ಲ ಅಂತ ರಾಜೀನಾಮೆ ಕೊಟ್ರು’ ಎಂಬ ಬಣ್ಣವನ್ನು ಬಳಿಯಲಾಯಿತು. ಹೌದ್ರಿ, ನಮಗೂ ಅಧಿಕಾರ ಬೇಕು. ನಾವೇನು ಸನ್ಯಾಸಿಗಳಲ್ಲ. ಎಲ್ಲರೂ ರಾಜಕೀಯಕ್ಕೆ ಬರೋದು ಅಧಿಕಾರಕ್ಕಾಗಿಯೇ’ ಎಂದು ಗುಡುಗಿದರು.

‘ದಿನೇಶ್ ಗುಂಡೂರಾವ್ ಅದಕ್ಷ’
‘ದಿನೇಶ್ ಗುಂಡೂರಾವ್ ಅವರಂತಹ ಅದಕ್ಷ ಅಧ್ಯಕ್ಷ ಬಂದ ಮೇಲೆ ಕಾಂಗ್ರೆಸ್ ಸ್ಥಿತಿ ಹಾಳಾಯಿತು. ಮೆಜೆಸ್ಟಿಕ್‌ನಲ್ಲಿ ಎಂಎಲ್‌ಎ ಆಗಿದ್ದು ಬಿಟ್ಟರೆ, ಅವರಿಗೆ ಏನೂ ಗೊತ್ತಿರಲಿಲ್ಲ. ಕಾಂಗ್ರೆಸ್ ಇವರ ಸ್ವತ್ತು ಹಾಗೂ ನಾವೆಲ್ಲ ಇವರ ಕೂಲಿಗಳು ಎಂಬ ರೀತಿಯಲ್ಲಿ ನಡೆಸಿಕೊಂಡರು. ನಾವಾಗಿಯೇ ಹತ್ತಿರ ಹೋದರೂ, ದೂರ ತಳ್ಳುತ್ತಿದ್ದರು’ ಎಂದು ಬಿ.ಸಿ.ಪಾಟೀಲ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT