ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ: ಸೌಲಭ್ಯ ವಂಚಿತ ತಾಲ್ಲೂಕು ಆಸ್ಪತ್ರೆ

ಮೂಲಸೌಲಭ್ಯಗಳ ಸಮಸ್ಯೆ, ವೈದ್ಯರು –ಸಿಬ್ಬಂದಿ ಕೊರತೆ, ಶಿಥಿಲಗೊಂಡಿರುವ ಕಟ್ಟಡ
Last Updated 10 ಜುಲೈ 2018, 10:38 IST
ಅಕ್ಷರ ಗಾತ್ರ

ರಟ್ಟೀಹಳ್ಳಿ:ಇಲ್ಲಿನ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯ ಮತ್ತು ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ.

ಈ ಹಿಂದೆ ಹಿರೇಕೆರೂರ ಉಪವಿಭಾಗವಾಗಿದ್ದ ರಟ್ಟೀಹಳ್ಳಿಯನ್ನು ಈ ವರ್ಷ ತಾಲ್ಲೂಕಾಗಿ ಘೋಷಿಸಲಾಗಿದೆ. ಆ ಬಳಿಕ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ, ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಸುತ್ತಲಿನ ಸುಮಾರು 60 ಗ್ರಾಮಗಳ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಸಿಬ್ಬಂದಿ ಕೊರತೆ:
ತಾಲ್ಲೂಕು ಆಸ್ಪತ್ರೆಯಲ್ಲಿ 14 ವೈದ್ಯರು, 18 ಶುಶ್ರೂಷಕಿಯರು, 6 ಜನ ದ್ವಿತೀಯ ದರ್ಜೆ ಸಹಾಯಕರು ಮತ್ತು ‘ಡಿ’ ದರ್ಜೆ ನೌಕರರು ಇರಬೇಕು. ಆದರೆ, ಈಗ ಇಬ್ಬರು ವೈದ್ಯರು, 6 ಶುಶ್ರೂಷಕಿಯರು, ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಮತ್ತು ನಾಲ್ವರು ಸ್ವಚ್ಛತಾ ಸಿಬ್ಬಂದಿ ಇದ್ದಾರೆ.

ಆ್ಯಂಬುಲೆನ್ಸ್ ಇಲ್ಲ:
ಮೇಲ್ದರ್ಜೆಗೆ ಏರಿಸುವ ಮೊದಲು, ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್ ಇತ್ತು. ಅದು ಈಚೆಗೆ ರಿಪೇರಿಗೆ ಬಂದಿದೆ. ತಾಲ್ಲೂಕು ಆಸ್ಪತ್ರೆಯಾದ ಬಳಿಕವೂ ಅದನ್ನು ರಿಪೇರಿ ಮಾಡಿಲ್ಲ. ಹೊಸ ಆ್ಯಂಬುಲೆನ್ಸ್‌ ಕೂಡಾ ನೀಡಿಲ್ಲ. ಇದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸಾದ ರೋಗಿಗಳು, ಗಾಯಾಳುಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಸೋರುವ ಕಟ್ಟಡ:
ಈ ಹಿಂದೆ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ತಾಲ್ಲೂಕು ಆಸ್ಪತ್ರೆ ಮಾಡಲಾಗಿದೆ. ಕಟ್ಟಡವು ಹಳೆಯದಾಗಿದ್ದು, ಅಲ್ಲಲ್ಲಿ ಶಿಥಿಲಗೊಂಡಿದೆ. ಮಲೆನಾಡಿಗೆ ಹೊಂದಿಕೊಂಡಿರುವ ರಟ್ಟೀಹಳ್ಳಿಯಲ್ಲಿ ಧಾರಾಕಾರ ಮಳೆ ಸುರಿಯುವ ಸಂದರ್ಭದಲ್ಲಿ ಕಟ್ಟಡವು ಸೋರುತ್ತಿದೆ. ಕಟ್ಟಡ ಸೋರಲು ಆರಂಭಿಸಿದರೆ, ದಾಖಲಾದ ರೋಗಿಗಳು, ಸಿಬ್ಬಂದಿ, ವೈದ್ಯರು ಪರದಾಟ ನಡೆಸಬೇಕಾಗಿದೆ.

ಬೀದಿ ನಾಯಿ ಹಾವಳಿ:
ಕಟ್ಟಡವು ಪಾಳು ಬಿದ್ದಂತಿದ್ದು, ಆವರಣವು ಬೀದಿ ನಾಯಿಗಳ ವಾಸಸ್ಥಳವಾಗಿದೆ. ಆವರಣದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಇದರಿಂದ ರೋಗಿಗಳು ಆಸ್ಪತ್ರೆಗೆ ಬರಲೂ ಭಯ ಪಡುವ ವಾತಾವರಣ ಇದೆ ಎಂದು ಸ್ಥಳೀಯರಾದ ಯೂಸೂಫ್‌ ಸೈಕಲ್‌ಗಾರ ಮತ್ತಿತರರು ದೂರಿದರು.

ರಟೀಹಳ್ಳಿ ತಾಲ್ಲೂಕು ಆಸ್ಪತ್ರೆಗೆ ವೈದ್ಯರ ನೇಮಕ ಹಾಗೂ ಮೂಲಸೌಲಭ್ಯ ಕಲ್ಪಿಸುವ ಕುರಿತು ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಶೀಘ್ರವೇ ನೇಮಕವಾಗುವ ನಿರೀಕ್ಷೆ ಇದೆ.
ಡಾ.ಚಿದಾನಂದ,ತಾಲ್ಲೂಕು ಆರೋಗ್ಯಾಧಿಕಾರಿ, ಹಿರೇಕೆರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT