ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಗ್ರಾಮ ತಿಳವಳ್ಳಿ

ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಗ್ರಾಮಸ್ಥರು
Published 20 ಸೆಪ್ಟೆಂಬರ್ 2023, 5:37 IST
Last Updated 20 ಸೆಪ್ಟೆಂಬರ್ 2023, 5:37 IST
ಅಕ್ಷರ ಗಾತ್ರ

ತಿಳವಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಳವಳ್ಳಿ, ನವಗ್ರಾಮ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದ ಕೊರತೆಯಿಂದ ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದೆ.

ಬೀದಿ ದೀಪದ ಸಮಸ್ಯೆ, ರಸ್ತೆ ಮೇಲೆ ಚರಂಡಿ ನೀರು ಹರಿಯುವುದು, ಸಾರ್ವಜನಿಕ ಶೌಚಾಲಯ, ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ರೋಗ ಹರಡುವ ಭೀತಿ ಎದುರಾಗಿದೆ.

ಸಾಂಕ್ರಾಮಿಕ ರೋಗಗಳ ಭೀತಿ: ಗ್ರಾಮದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡದೇ ಇರುವುದರಿಂದ ರಸ್ತೆಯೇ ಚರಂಡಿಗಳಾಗಿ ಮಾರ್ಪಟ್ಟಿವೆ. ರಸ್ತೆಗಳ ಪಕ್ಕದಲ್ಲಿ ಸಣ್ಣ ಕಾಲುವೆಗಳಿದ್ದರೂ ಅವು ಹೂಳು ತುಂಬಿ ದುರ್ವಾಸನೆ ಬೀರುತ್ತಿವೆ. ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಸೊಳ್ಳೆಗಳು ಹೆಚ್ಚಾಗಿರುವುದರಿಂದ ಚಿಕುನ್ ಗುನ್ಯಾ, ಡೆಂಗಿ, ವಿಷಮಶೀತ ಜ್ವರ ಹಾಗೂ ಮಲೇರಿಯಾದಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ದೂರುತ್ತಾರೆ.

‘ಹೊರಗಡೆ ಬಂದರೆ ಸಾಕು, ಸೊಳ್ಳೆಗಳ ಕಾಟ ಶುರುವಾಗುತ್ತದೆ. ಮನೆ ಬಾಗಿಲುಗಳನ್ನು ಹಾಕಿಕೊಂಡೇ ಇರಬೇಕು. ಚರಂಡಿ ನಿರ್ಮಿಸಿ ಕೊಡುವಂತೆ ಸಾಕಷ್ಟು ಸಾರಿ ಸಂಬಂಧಿಸಿದ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ರಾಘವೇಂದ್ರ ನರಸೋಜಿ.

ಸಾರ್ವಜನಿಕ ಶೌಚಾಲಯ: ತಿಳವಳ್ಳಿ ಗ್ರಾಮ 20ಕ್ಕೂ ಅಧಿಕ ಹಳ್ಳಿಗಳಿಗೆ ಸಂಪರ್ಕ ಕೊಂಡಿಯಾಗಿದ್ದು, ಇಲ್ಲಿ ದಿನವೂ ಸಾವಿರಾರು ಜನ ವ್ಯಾಪಾರಕ್ಕಾಗಿ ಬರುತ್ತಾರೆ. ಇಲ್ಲಿನ ಹರ್ಡೇಕರ ವೃತ್ತದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಜನರು ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮಹಿಳೆಯರ ಗೋಳು ಕೇಳುವವರಿಲ್ಲ.

ಕಸ ವಿಲೇವಾರಿ ಸಮಸ್ಯೆ: ಸ್ವಚ್ಛ ಭಾರತ ಯೋಜನೆಯಡಿ ಗ್ರಾಮದಲ್ಲಿ ಹಸಿ ಮತ್ತು ಒಣ ಕಸ ವಿಂಗಡಣೆಗೆ ಬಕೇಟ್‌ಗಳನ್ನು ನೀಡಲಾಗಿದೆ. ಆದರೆ ಗ್ರಾಮ ಪಂಚಾಯ್ತಿಯಿಂದ ಕಸ ಸಂಗ್ರಹಣಾ ವಾಹನ ಬಾರದೇ ಇರುವುದರಿಂದ ಸಾರ್ವಜನಿಕರು ರಸ್ತೆ, ಕೆರೆ ಏರಿಯ ಮೇಲ್ಗಡೆ ಕಸ ಚೆಲ್ಲುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ತಿಳವಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹರಿಯಿತು
ತಿಳವಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹರಿಯಿತು
ಚುನಾಯಿತ ಜನಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿಗಳು ಚರಂಡಿ ವ್ಯವಸ್ಥೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು
ಮಾಲತೇಶ ಆರ್. ಗ್ರಾಮಸ್ಥ

‘ಅಗತ್ಯ ಕಾಮಗಾರಿಗೆ ಆದ್ಯತೆ’ ‘ನರೇಗಾ ಯೋಜನೆಯಡಿ ಈಗಾಗಲೇ ಕೆಲವು ಕಡೆ ಸಿಸಿ ಕಾಲುವೆ ಮತ್ತು ಸಿಸಿ ರಸ್ತೆಗಳನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ 15ನೇ ಹಣಕಾಸು ಯೋಜನೆ ಹಾಗೂ ನರೇಗಾ ಯೋಜನೆ ಮೂಲಕ ರಸ್ತೆ ಕಾಲುವೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಮಾಡಲಾಗುವುದು’ ಎಂದು ತಿಳವಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ  ಕುಮಾರ ಲಕ್ಮೋಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT