ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು: ಕಾರಡಗಿ ಗ್ರಾಮ ಸಮಸ್ಯೆಗಳ ಆಗರ

Published 2 ಆಗಸ್ಟ್ 2023, 5:27 IST
Last Updated 2 ಆಗಸ್ಟ್ 2023, 5:27 IST
ಅಕ್ಷರ ಗಾತ್ರ

ಸವಣೂರು: ಸುಕ್ಷೇತ್ರ ಎಂದು ರಾಜ್ಯದಾದ್ಯಂತ ಹೆಸರುವಾಸಿಯದ ಕಾರಡಗಿ ಗ್ರಾಮ ಸ್ವಚ್ಛತೆ, ಬೀದಿದೀಪ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಕಾರಡಗಿ ಗ್ರಾಮ ಎಂದಾಕ್ಷಣ ನೆನಪಿಗೆ ಬರುವುದು ವೀರಭದ್ರೇಶ್ವರ ದೇವಸ್ಥಾನ. ಆದರೆ, ಇಂತಹ ಸುಕ್ಷೇತ್ರವನ್ನು ಹೊಂದಿರುವ ಗ್ರಾಮದಲ್ಲಿ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ. ಗ್ರಾಮದಲ್ಲಿ ಹಾಯ್ದು ಹೋಗಿರುವ ಸವಣೂರು - ಹುಲಗೂರ ರಸ್ತೆಯ ಮೇಲೆ ಆಳೆತ್ತರದ ತ್ಯಾಜ್ಯ ನಿತ್ಯ ಬಿದ್ದರೂ ಗ್ರಾಮ ಪಂಚಾಯಿತಿ ಸ್ವಚ್ಛತೆಗೆ ಮುಂದಾಗಿಲ್ಲ. ಇದರಿಂದ, ಸಾರ್ವಜನಿಕರು ಸಾಂಕ್ರಾಮಿಕ ರೋಗದ ಭೀತಿಯಿಂದ ಜೀವನ ನಡೆಸುವಂತಾಗಿದೆ.

ಬೀದಿ ದೀಪ ಸಹಿತ ಹಲವು ದೀಪಗಳು ಬೆಳಗದೇ ಇರುವುದರಿಂದ ರಾತ್ರಿ ಸಮಯದಲ್ಲಿ ಚಿಕ್ಕ ಮಕ್ಕಳು ವಯೋ ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ. ಬೀದಿ ದೀಪಗಳನ್ನು ಅಳವಡಿಸಲು ಹಲವು ಬಾರಿ ಮನವಿ ಮಾಡಿಕೊಂಡರೂ ಇದುವರೆಗೂ ಬೀದಿ ದೀಪ ಅಳವಡಿಸಿಲ್ಲ ಎನ್ನುವದು ಸಾರ್ವಜನಿಕರ ಆರೋಪವಾಗಿದೆ.

ತಂಗುದಾಣ ಸಹಿತ ಪ್ರಯಾಣಿಕರು ಕುಳಿತುಕೊಳ್ಳಲು ಯೋಗ್ಯವಾಗಿ ಇರದೇ ಪುಂಡ–ಪೋಕರಿಗಳ, ಮದ್ಯ ವ್ಯಸನಿಗಳ ತಾಣವಾಗಿದೆ. ಇದರ ಸ್ವಚ್ಛತೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಕಾಳಜಿ ವಹಿಸುತ್ತಿಲ್ಲ.

ಗ್ರಾಮದಲ್ಲಿ ನೀರಿನ ಬವಣೆ ನೀಗಿಸಲು ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಮುಂದಾಗಿ ಯೋಜನೆಯನ್ನು ರೂಪಿಸಿ ಕೆರೆಯನ್ನು ತುಂಬಿಸುತ್ತಿದೆ. ಆದರೆ ಅದರಲ್ಲಿ ಗ್ರಾಮದ ತ್ಯಾಜ್ಯ ಸೇರ್ಪಡೆಯಾಗುತ್ತಿರುವುದರಿಂದ ದನ ಕರುಗಳಿಗೆ ಕುಡಿಯಲು ಅಯೋಗ್ಯವೆನಿಸಿದೆ. ಇದನ್ನು ಸೇವನೆ ಮಾಡಿದ ಜಾನುವಾರು ಸಹ ರೋಗಕ್ಕೀಡಾಗುವ ಆತಂಕವಿದೆ. ಇಂತಹ ಹತ್ತಾರು ಸಮಸ್ಯೆಗಳನ್ನು ಕಾರಡಗಿ ಗ್ರಾಮಸ್ಥರು ಅನುಭವಿಸುತ್ತಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಾಗಲಿ ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಕಾರಡಗಿ ಗ್ರಾಮದಲ್ಲಿ ಸವಣೂರು-ಹುಲಗೂರು ರಸ್ತೆ ಬದಿಯಲ್ಲಿ ಕಸದ ರಾಶಿ
ಕಾರಡಗಿ ಗ್ರಾಮದಲ್ಲಿ ಸವಣೂರು-ಹುಲಗೂರು ರಸ್ತೆ ಬದಿಯಲ್ಲಿ ಕಸದ ರಾಶಿ
ಸುಕ್ಷೇತ್ರ ಕಾರಡಗಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸದೇ ಹೋದರೆ ಗ್ರಾಮ ಪಂಚಾಯಿತಿ ಎದುರು ಹೋರಾಟ ನಡೆಸಲಾಗುವುದು
-ಗದಿಗೆಪ್ಪ ಕುರವತ್ತಿ, ಶ್ರೀರಾಮ ಸೇನೆ ಧಾರವಾಡ ವಿಭಾಗ ಅಧ್ಯಕ್ಷ
ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ಎಡೆಬಿಡದೆ ಸುರಿದ ಮಳೆಗೆ ತ್ಯಾಜ್ಯ ಹೆಚ್ಚಾಗಿದ್ದು ಕೆಲ ದಿನಗಳಲ್ಲಿ ಮತ್ತೆ ಸ್ವಚ್ಚತೆ ಮಾಡಿಸಲಾಗುವುದು
-ಪಿ.ಸಿ. ಸಂಕಪ್ಪನವರ ಪಿಡಿಒ ಕಾರಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT