ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಪಟ್ಟಣ: ಸಮಸ್ಯೆ ಸುಳಿಯಲ್ಲಿ ಅಂಗನವಾಡಿ ಕೇಂದ್ರ

ಶುದ್ಧ ಕುಡಿಯುವ ನೀರಿಗೂ ಕಾರ್ಯಕರ್ತೆಯರಿಂದಲೇ ವೆಚ್ಚ
ಎಸ್‌.ಎಸ್‌. ನಾಯಕ
Published 20 ಏಪ್ರಿಲ್ 2024, 5:32 IST
Last Updated 20 ಏಪ್ರಿಲ್ 2024, 5:32 IST
ಅಕ್ಷರ ಗಾತ್ರ

ಕುಮಾರಪಟ್ಟಣ: ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ನಲವಾಗಲದ 2 ಮತ್ತು ಕೊಡಿಯಾಲದ 4 ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇದ್ದರೂ ಇಲ್ಲದಂತಾಗಿದೆ. ಕಟ್ಟಡವೊಂದು ಶಿಥಿಲಗೊಂಡು ಪೋಷಕರು, ಕಾರ್ಯಕರ್ತೆಯರು ಮತ್ತು ಮಕ್ಕಳಲ್ಲಿ ಆತಂಕ ಆವರಿಸಿದೆ.

ಕೊಡಿಯಾಲದ 1ನೇ ಅಂಗನವಾಡಿ- 23, 2ನೇ ಕೇಂದ್ರ - 23, 3ನೇ ಕೇಂದ್ರ - 25, 4ನೇ ಕೇಂದ್ರ- 20, ನಲವಾಗಲ 1ನೇ ಕೇಂದ್ರ - 22 ಮತ್ತು 2ನೇ ಅಂಗನವಾಡಿ ಕೇಂದ್ರದಲ್ಲಿ 20 ಮಕ್ಕಳು ದಾಖಲು ಆಗಿದ್ದಾರೆ. ಒಟ್ಟು 133 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ.

ಕೊಡಿಯಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮೂರನೇ ಅಂಗನವಾಡಿ ಹೊರತುಪಡಿಸಿ ಉಳಿದ ಕೊಡಿಯಾಲ ಮತ್ತು ನಲವಾಗಲದ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. 2-3 ಕೇಂದ್ರಗಳಲ್ಲಿ ವಾಟರ್ ಫಿಲ್ಟರ್ ಮಷಿನ್ ಕೆಟ್ಟು ನಿಂತಿವೆ. ಇಲಾಖೆಯ ಸೂಚನೆಯಂತೆ ಬೇರೆಡೆಯಿಂದ ಕ್ಯಾನ್ ಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಮಕ್ಕಳಿಗೆ ಮಕ್ಕಳಿಗೆ ಕೊಡಲಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರು.

ಪುನಃ ಹಾಳು: ‘ನಲವಾಗಲದ 1ನೇ ಕೇಂದ್ರದ ವಾಟರ್ ಫಿಲ್ಟರ್ ಮೂರು ಬಾರಿ ಕೆಟ್ಟು ಹೋಗಿತ್ತು. ಸ್ವತಃ ಕೈಯಿಂದ ₹ 2500 ಖರ್ಚು ಮಾಡಿ ರಿಪೇರಿ ಮಾಡಿಸಿದ್ದೆ. ಈಗ ಪುನಃ ಹಾಳಾಗಿದೆ. ಸರಿಪಡಿಸುವಂತೆ ಪಿಡಿಒಗೆ ಮನವಿ ಮಾಡಲಾಗಿತ್ತು ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೆಚ್ಚುವರಿ ಮೆಷಿನ್ ಅನ್ನು 2ನೇ ಕೇಂದ್ರಕ್ಕೆ ಕೊಡಲಾಗಿದೆ’ ಎನ್ನುತ್ತಾರೆ ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಅಶೋಕ್ ಕರೂರು.

‘ನಾಲ್ಕನೇ ಕೇಂದ್ರದಲ್ಲಿ ವಾಟರ್ ಫಿಲ್ಟರ್ ನಿಷ್ಕ್ರಿಯಗೊಂಡು 15 ದಿನಗಳಾಗಿದೆ ಎಂದು ಕಾರ್ಯಕರ್ತೆ ಶೋಭಾ ಪಾಟೀಲ ತಿಳಿಸಿದರೆ, ನಲವಾಗಲದ 2ನೇ ಕೇಂದ್ರದಲ್ಲಿ ಮೆಷಿನ್ ಇದ್ದರೂ ಇನ್ನೂ ಅಳವಡಿಸಿಲ್ಲ. ಸ್ವಂತ ಕಟ್ಟಡವಿದ್ದರೂ ತಗಡಿನ ಶೀಟ್ ನಿಂದ ವಿಪರೀತ ಬಿಸಿಲಿನ ಝಳಕ್ಕೆ ಮಕ್ಕಳು ರೋಸಿ ಹೋಗಿವೆ’ ಎಂದು ಫಕೀರಮ್ಮ ಕರೂರು ಅಲವತ್ತುಕೊಂಡರು.

ಸಹಾಯಕಿ ವಿರುದ್ಧ ದೂರು: ‘ನಲವಾಗಲ 1ನೇ ಅಂಗನವಾಡಿ ಕೇಂದ್ರದ ಸಹಾಯಕಿ ಶೋಭಾ ಬಲ್ಮಿ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಅನೇಕ ಬಾರಿ ಕರ್ತವ್ಯಕ್ಕೆ ದೀರ್ಘ ಗೈರು ಆಗಿರುವ ಬಗ್ಗೆ ದೂರು ಬಂದಿವೆ. ಸಹಾಯಕಿ ಇದ್ದರೂ ಕಾರ್ಯಕರ್ತೆಯ ಮೇಲೆ ಒತ್ತಡ ತಪ್ಪಿಲ್ಲ. ಈಗಾಗಲೇ ಬಾಲ ವಿಕಾಸ ಸಮಿತಿ ಹಾಗೂ ಗ್ರಾಮದ ಮುಖಂಡರ ಸಭೆ ನಡೆಸಿ ಪರಿವರ್ತನೆ ಹೊಂದುವಂತೆ ಎಚ್ಚರಿಕೆ ನೀಡಲಾಗಿತ್ತು. ಪುನಃ ಯಾರ ಅನುಮತಿಯೂ ಪಡೆಯದೆ ಕರ್ತವ್ಯಕ್ಕೆ ದೀರ್ಘ ಗೈರು ಆಗಿದ್ದಾರೆ. ಇಲಾಖೆ ನಿಯಮದಂತೆ ಮೇಲ್ಮಟ್ಟದ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿದ್ದಾರೆ’ ಎಂದು ಮಾಕನೂರು ವಲಯಾಧಿಕಾರಿ ತ್ರಿವೇಣಿ ಇಟಗಿ ಶೋಭಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಕೊಡಿಯಾಲದ 1ನೇ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿದೆ
ಕೊಡಿಯಾಲದ 1ನೇ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿದೆ
ಅಂಗನವಾಡಿ ಕೇಂದ್ರಗಳಲ್ಲಿ ನೀರು ಶುದ್ಧೀಕರಣ ಯಂತ್ರಗಳು ಕೆಟ್ಟು ಹೋಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಇನ್ನು ಎರಡು ಮೂರು ದಿನಗಳಲ್ಲಿ ದುರಸ್ತಿ ಮಾಡಲಾಗುವುದು
– ದೇವರಾಜ್ ಪಿಡಿಒ, ಕೊಡಿಯಾಲ

ಶಿಥಿಲಗೊಂಡ ಅಂಗನವಾಡಿ ಕಟ್ಟಡ

‘ಕೊಡಿಯಾಲದ ಅಂಬೇಡ್ಕರ್ ಕಾಲೊನಿ ಬಳಿಯಿರುವ 1ನೇ ಅಂಗನವಾಡಿ ಕೇಂದ್ರದ ಕಟ್ಟಡ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ. ಚಾವಣಿ ಸಿಮೆಂಟ್ ಚೂರು ಚೂರಾಗಿ ಉದುರುತ್ತಿದೆ. ಮಳೆಗಾಲದಲ್ಲಿ ಸೋರುತ್ತದೆ. ಕಳೆದ ವರ್ಷ ಮಳೆಗಾಲದಲ್ಲಿ ಎರಡು ತಿಂಗಳ ಕಾಲ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಮಣ್ಣಿನ ಗೋಡೆಗಳು ಮಳೆಗಾಲದಲ್ಲಿ ಹಸಿಯಾಗುತ್ತವೆ. ಶೌಚಾಲಯ ಸಮಸ್ಯೆ ಕೂಡ ಇದೆ’ ಎಂದು ಈ ಕೇಂದ್ರದ ಲೀಲಾವತಿ ನೆಗಳೂರು ಮಾಹಿತಿ ಹಂಚಿಕೊಂಡರು. ‘‍ಕಟ್ಟಡದ ಸ್ಥಿತಿಯ ಬಗ್ಗೆ ಈಗಾಗಲೇ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನೆಲಸಮಗೊಳಿಸುವುದಕ್ಕೆ ಅನುಮತಿಸಲಾಗಿದೆ. ಅನುದಾನದ ಕೊರತೆಯಿಂದಾಗಿ ವಿಳಂಬವಾಗಿದೆ’ ಎಂದು ಮಾಕನೂರು ವಲಯಾಧಿಕಾರಿ ತ್ರಿವೇಣಿ ಇಟಗಿ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT