ಭಾನುವಾರ, ಜೂನ್ 26, 2022
22 °C
ಕ್ರೀಡಾಂಗಣದ ಈಜುಕೊಳಗಳು ಬಂದ್‌; ಕೆಸರುಗದ್ದೆಯಾದ ಮೈದಾನ

ನಿರ್ವಹಣೆಯ ಕೊರತೆ: ರಾಣೆಬೆನ್ನೂರು ಕ್ರೀಡಾಂಗಣ ಅಧ್ವಾನ

ಮುಕ್ತೇಶ್ವರ ಕೂರಗುಂದಮಠ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ನಗರದ ಹೃದಯ ಭಾಗದಲ್ಲಿರುವ ನಗರಸಭೆ ಕ್ರೀಡಾಂಗಣ 8 ಎಕರೆ 20 ಗುಂಟೆ ವಿಸ್ತೀರ್ಣ ಹೊಂದಿದ್ದು, ಮೂಲ ಸೌಲಭ್ಯ ಹಾಗೂ ನಿರ್ವಹಣಾ ಕೊರತೆ ಎದುರಿಸುತ್ತಿದೆ. 

ಕುಡಿಯುವ ನೀರು, ಶೌಚಾಲಯ, ವಿದ್ಯುತ್‌, ಆವರಣ ಗೋಡೆ, ಒಳ ಚರಂಡಿ ವ್ಯವಸ್ಥೆ ಇಲ್ಲ. ಮೈದಾನದಲ್ಲಿ ಮಳೆ ನೀರು ಅಲ್ಲಲ್ಲಿ ನಿಲ್ಲುತ್ತದೆ. ಮಳೆ ಬಂದರೆ ಟ್ರ್ಯಾಕ್‌ನಲ್ಲಿ ನೀರು ನಿಂತು ರನ್ನಿಂಗ್‌, ವಾಕಿಂಗ್‌ ಮಾಡುವವರಿಗೆ ತೊಂದರೆಯಾಗುತ್ತಿದೆ.

ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ ಪ್ರತಿ ಮಳೆಗಾಲದಲ್ಲಿ ಕ್ರೀಡಾಂಗಣ ಕೆಸರುಗದ್ದೆಯಾಗುತ್ತದೆ. ಪೆವಿಲಿಯನ್‌ ಬ್ಲಾಕ್‌ ಮುಂದೆ ಇರುವ ದೊಡ್ಡ ಚರಂಡಿ ತ್ಯಾಜ್ಯದಿಂದ ಕಟ್ಟಿಕೊಂಡು ಗಬ್ಬು ನಾರುತ್ತಿದೆ. 

ಈ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಕ್ರೀಡಾಂಗಣವನ್ನಾಗಿ ಅಭಿವೃದ್ಧಿಪಡಿಸಲು ದಶಕದ ಹಿಂದೆ ಅಂದಿನ ಮಾಜಿ ಶಾಸಕ ಜಿ.ಶಿವಣ್ಣ ದೊಡ್ಡ ಹೋರಾಟ ಮಾಡಿ ‘ನಗರಸಭೆ ಕ್ರೀಡಾಂಗಣ’ ಎಂದು ನಾಮಕರಣ ಮಾಡಲಾಗಿತ್ತು. ಇದಕ್ಕಾಗಿ ಯೋಜನೆಯನ್ನು ಸಿದ್ಧಪಡಿಸಿ ಪೆವಿಲಿಯನ್‌ ಬ್ಲಾಕ್‌ ಕೂಡ ನಿರ್ಮಿಸಲಾಗಿದೆ.

ಪ್ರತ್ಯೇಕ ಶೌಚಾಲಯವಿಲ್ಲ:

ಯುವತಿ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲವಾಗಿದೆ. ಮಹಿಳಾ ಕ್ರೀಡಾಪಟುಗಳಿಗೆ ಯಾವುದೇ ರಕ್ಷಣೆಯಿಲ್ಲ. ಜನಪ್ರತಿನಿಧಿಗಳಿಗೆ ಕ್ರೀಡಾಭಿವೃದ್ಧಿಗೆ ಬಗ್ಗೆ ಆಸಕ್ತಿಯಿಲ್ಲ ಎಂದು ಮಹಿಳಾ ಕ್ರೀಡಾಪಟುಗಳು ದೂರಿದ್ದಾರೆ. 

ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲ:

‘ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕ್ರೀಡಾಪ್ರೇಮಿಗಳ ಬೇಡಿಕೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮಳೆಗಾಲದಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಕಷ್ಟ. ಹೀಗಾಗಿ ಇಲ್ಲಿ ಒಳಾಂಗಣ ಕ್ರೀಡಾಂಗಣ ಬೇಕು’ ಎನ್ನುತ್ತಾರೆ ಕರ್ನಾಟಕ ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಶಿವಾನಂದ ಆರೇರ.

ಕೋವಿಡ್‌ನಿಂದ ಎಲ್ಲ ಕ್ರೀಡಾ ಸಾಮಗ್ರಿಗಳು ಮೂಲೆ ಸೇರಿವೆ. ಜಿಲ್ಲಾದವರೇ ಕ್ರೀಡಾ ಸಾಮಗ್ರಿಗಳನ್ನು ಖರೀದಿಸಿ ಎಲ್ಲ ತಾಲ್ಲೂಕುಗಳಿಗೆ ಹಂಚಿಕೆ ಮಾಡುತ್ತಾರೆ. ನಾಲ್ಕೈದು ವರ್ಷಗಳಿಂದ ಯಾವುದೇ ಕ್ರೀಡಾ ಸಾಮಗ್ರಿಗಳು ಬಂದಿಲ್ಲ ಎಂದು ಕ್ರೀಡಾಪಟುಗಳು ದೂರಿದ್ದಾರೆ.

ಈಜುಗೊಳ:

ಕ್ರೀಡಾಂಗಣದ ಆವರಣದಲ್ಲಿ 25X21 ಮೀಟರ್‌ ಅಳತೆಯ 8 ಲೈನುಗಳುಳ್ಳ ಈಜುಗೊಳ ಮತ್ತು 5X12 ಅಳತೆಯ ಬೇಬಿ ಪೂಲ್‌ ನಿರ್ಮಿಸಲಾಗಿದೆ. ಕೊರೊನಾ ಮರೆಯಾಗಿದ್ದರೂ ಈಜುಕೊಳವನ್ನು ಆರಂಭಿಸಿಲ್ಲ. ಈಜುಕೊಳದ ಮಷಿನ್‌ ಕೊಠಡಿಯಲ್ಲಿ ಮರಳಿನಿಂದ ತುಂಬಿರುವ ನೀರು ಶುದ್ಧೀಕರಣದ ಎರಡು ಟ್ಯಾಂಕ್‌ಗಳ ಮೇಲೆ ಅಳವಡಿಸಿದ್ದ ಕ್ಯಾಪ್‌ಗಳು ಹಾರಿ ಹೋಗಿವೆ. ಮಷಿನ್‌ ರೂಂನಲ್ಲಿ ಅಳವಡಿಸಿದ ಪೈಪಗಳು, ಪಂಪ್‌ ವಾಲ್ವ್‌ಗಳು, ಎಲೆಕ್ಟ್ರಿಲ್‌ ವೈರಿಂಗ್‌, ಸ್ವಿಚ್‌ ಬೋರ್ಡ್ ಕಿತ್ತು ಹೋಗಿವೆ. ಎಲ್ಲಾ ಕೊಠಡಿ ಬಾಗಿಲು, ಕಿಟಕಿ ಗ್ಲಾಸು ಒಡೆದಿವೆ. ಪುರುಷ ಹಾಗೂ ಮಹಿಳಾ ಶೌಚಾಲಯಗಳನ್ನು ದುರಸ್ತಿ ಮಾಡುವ ಅಗತ್ಯವಿದೆ.

ಮಷಿನ್‌ ರೂಂಮಿನಲ್ಲಿರುವ ನೀರೆತ್ತುವ 5 ಎಚ್‌ಪಿ ದೊಡ್ಡ 4 ಮೋಟರ್‌ಗಳನ್ನು ಬಾಗಿಲು ಮುರಿದು ಕಳ್ಳರು ಕಳ್ಳತನ ಮಾಡಿದ್ದಾರೆ. ಒಬ್ಬರೇ ಕಾವಲುಗಾರರಿಂದ ಇಲಾಖೆಯ ಆಸ್ತಿಗಳ ನಿರ್ವಹಣೆ ಮಾಡಲು ಕಷ್ಟ ಸಾಧ್ಯವಾಗಿದೆ. ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಆದೇಶ ನೀಡಬೇಕಾಗಿದೆ.

ಕೋಚ್‌ ಕೊರತೆ: ಕ್ರೀಡಾ ಸಾಧನೆಗೆ ಧಕ್ಕೆ

‘ನನ್ನ ಮಗ ಸೂರಜ್‌ ಐರಣಿ ಕರ್ನಾಟಕ ತಂಡದ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಪಟುವಾಗಿದ್ದು, ಕೋಚಿಂಗ್‌ ಮತ್ತು ತರಬೇತಿಗೆ ಹೊರ ಜಿಲ್ಲೆ, ರಾಜ್ಯಕ್ಕೆ ಹೋಗಬೇಕು. ತಿಂಗಳುಗಟ್ಟಲೇ ಅಲ್ಲಿಯೇ ಉಳಿದು ತರಬೇತಿ ಕೊಡಿಸುತ್ತೇವೆ. ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಬರುತ್ತದೆ. ಎಲ್ಲ ಪಾಲಕರದು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ’ ಎಂದು ವಕೀಲ ಸಂಜಯಕುಮಾರ ಐರಣಿ ಸಮಸ್ಯೆ ತೋಡಿಕೊಂಡರು. 

‘ರಾಣೆಬೆನ್ನೂರು ಕುಸ್ತಿ ಪಂದ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಕುಸ್ತಿ ಪಟು ಕಾರ್ತಿಕ ಕಾಟಿ ಅವರು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ ‘ಕರ್ನಾಟಕ ಕೇಸರಿ’ ಬಿರುದನ್ನು ಪಡೆದಿದ್ದಾರೆ. ಸರ್ಕಾರ ಕ್ರೀಡಾಂಗಣದಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಕುಸ್ತಿ ಪಟು ಕಾರ್ತಿಕ ತಂದೆ ಜಿ.ಜಿ. ಕಾಟಿ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.