ಬುಧವಾರ, ಮೇ 25, 2022
29 °C
ಕೆಆರ್‌ಎಸ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿಕೆ

‘ಚುನಾವಣಾ ಅಕ್ರಮಗಳಿಗೆ ಕಡಿವಾಣ ಬೀಳಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ತಹಶೀಲ್ದಾರ್‌ ಕಚೇರಿಗೆ ನಾಮಫಲಕವಿಲ್ಲ, ನೌಕರರು ಗುರುತಿನ ಚೀಟಿ ಮತ್ತು ಪದನಾಮ ಧರಿಸಿಲ್ಲ, ವಿವಿಧ ವಿಭಾಗಗಳಿಗೆ ನಾಮಫಲಕ ಹಾಕಿಲ್ಲ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಲೋಕಾಯುಕ್ತ ಎಸ್ಪಿಗೆ ಮನವಿ ಸಲ್ಲಿಸಿದರು. 

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸ್‌ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಸಾರ್ವಜನಿಕ ಕುಂದುಕೊರತೆಗಳ ಸಭೆ’ಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕಚೇರಿಯಲ್ಲಿ ಲಭ್ಯವಿರುವ ಸೇವೆಗಳ ಪಟ್ಟಿಯನ್ನು ಕಚೇರಿಯ ಆವರಣದ ಮುಂಭಾಗದಲ್ಲಿ ಪ್ರದರ್ಶಿಸಿಲ್ಲ. ನೌಕರರರು ವಿಳಂಬ ಮಾಡಿದರೆ ಯಾರಿಗೆ ದೂರು ಸಲ್ಲಿಸಬೇಕು ಎಂಬ ಬಗ್ಗೆ ಮಾಹಿತಿಯಿಲ್ಲ. ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ದೂರಿದರು. 

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ‘ಸಾರ್ವಜನಿಕರು ಮಧ್ಯವರ್ತಿಗಳ ನೆರವಿಲ್ಲದೆ ಮುಕ್ತವಾಗಿ ಸಕಾಲದಲ್ಲಿ ಸೇವೆ ಪಡೆಯುವ ಅವಕಾಶವನ್ನು ಸರ್ಕಾರಿ ಕಚೇರಿಗಳಲ್ಲಿ ಕಲ್ಪಿಸಬೇಕು. ಲಂಚ, ಕರ್ತವ್ಯಲೋಪ, ವಿಳಂಬ ಧೋರಣೆ ತಡೆಗಟ್ಟಬೇಕು. ಈ ಉದ್ದೇಶದಿಂದ ರಾಜ್ಯವ್ಯಾಪಿ 15 ದಿನ ಪ್ರವಾಸ ಕೈಗೊಂಡಿದ್ದೇನೆ’ ಎಂದರು. 

‘ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ರಾಷ್ಟ್ರೀಯ ಪಕ್ಷಗಳು ಆದ್ಯತೆ ನೀಡುತ್ತಿಲ್ಲ. ಯಾವ ಜನಪ್ರತಿನಿಧಿಗಳೂ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಇಲ್ಲಿನ ವ್ಯವಸ್ಥೆ ಪರಿಶೀಲಿಸುತ್ತಿಲ್ಲ. ನಮ್ಮ ಪಕ್ಷದಿಂದ ‘ಲಂಚ ಮುಕ್ತ ಕರ್ನಾಟಕ’ ಅಭಿಯಾನ ಕೈಗೊಂಡಿದ್ದೇವೆ. ಚುನಾವಣಾ ಅಕ್ರಮಗಳೇ ಲಂಚಗುಳಿತನ, ಕರ್ತವ್ಯಲೋಪಕ್ಕೆ ಎಡೆ ಮಾಡಿಕೊಡುತ್ತಿವೆ. ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗಳನ್ನು ನಿಲ್ಲಿಸಿ, ಪಾರದರ್ಶಕ ವ್ಯವಸ್ಥೆ ತರಲು ನಮ್ಮ ಪಕ್ಷ ಪ್ರಯತ್ನಿಸುತ್ತಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು