ಶನಿವಾರ, ಮೇ 28, 2022
25 °C
ಅನುಸೂಚಿತ ಜಾತಿಗಳ ಉಪಯೋಜನೆ

ಅನುದಾನ ಬಳಕೆಯಾಗದಿದ್ದರೆ ಮೊಕದ್ದಮೆ: ಸಂಜಯ ಶೆಟ್ಟೆಣ್ಣವರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಇಲಾಖಾವಾರು ಬಿಡುಗಡೆಯಾದ ಅನುದಾನ ಕಾಲಮಿತಿಯೊಳಗೆ ವೆಚ್ಚ ಮಾಡದ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಧಿನಿಯಮದಡಿ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆಯಡಿ ವಿವಿಧ ಇಲಾಖೆಗೆ ಹಂಚಿಕೆಯಾದ ಅನುದಾನದ ಬಳಕೆ, ಕಾರ್ಯಕ್ರಮದ ಅನುಷ್ಠಾನ ಕುರಿತಂತೆ ಡಿಸೆಂಬರ್ ಅಂತ್ಯದವರೆಗೆ ತ್ರೈಮಾಸಿಕ ಸಭೆ ನಡೆಸಿ ಅವರು ಮಾತನಾಡಿದರು.

ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನವನ್ನು ಸಕಾರಣವಿಲ್ಲದೆ ಯೋಜನೆಯ ಅನುಷ್ಠಾನದಲ್ಲಿ ನಿರ್ಲಕ್ಷ್ಯವಹಿಸಿ ಅನುದಾನ ಉಳಿಸಿಕೊಂಡ ಅಧಿಕಾರಿಗಳ ಮೇಲೆ ನಾನೇ ಖುದ್ದಾಗಿ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.

ಪ್ರಸಕ್ತ ಸಾಲಿನ ಆರ್ಥಿಕ ವರ್ಷಾಂತ್ಯದಲ್ಲಿರುವ ನಾವು ನಿಗದಿತ ಅವಧಿಯಲ್ಲಿ ಬಿಡುಗಡೆ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು. ಈ ಹಂತದಲ್ಲಿ ಯಾವುದೇ ಕಾರ್ಯಕ್ರಮಗಳ ಬದಲಾವಣೆ, ಏಜೆನ್ಸಿಗಳ ಬದಲಾವಣೆ ಮಾಡಬಾರದು. ಈಗಾಗಲೇ ಕಾಮಗಾರಿ ವಹಿಸಿರುವ ಏಜೆನ್ಸಿಗಳ ಮೂಲಕವೇ ಕೆಲಸ ಮಾಡಿಸಬೇಕು. ಕೆಲಸ ವಹಿಸಿಕೊಂಡ ಏಜೆನ್ಸಿಗಳು ಅನುಷ್ಠಾನದಲ್ಲಿ ವಿಳಂಬ ಮಾಡಿದರೆ ಅಂತಹವರ ವಿರುದ್ಧ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಒಂದೇ ರೀತಿ ಕಾರ್ಯಕ್ರಮ ಸಲ್ಲ: ಗ್ರಾಮೀಣ ಮತ್ತು ಸಣ್ಣ ಉದ್ಯಮ ಇಲಾಖೆಗೆ ಎಸ್.ಇ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಹಾಗೂ ಬಳಕೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಸದರಿ ಅನುದಾನದಡಿ ಕೇವಲ ಹೊಲಿಗೆ ಯಂತ್ರ ನೀಡುವ ಏಕ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರಲಾಗುತ್ತಿದೆ. ಈ ಜನಾಂಗದ ಬೇರೆ ಬೇರೆ ಕೌಶಲಗಳನ್ನು ಪ್ರೋತ್ಸಾಹಿಸುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ಎಂದು ಸೂಚನೆ ನೀಡಿದರು.

ಪರಿಶಿಷ್ಟ ವರ್ಗ ಮತ್ತು ವರ್ಗಗಳಿಗೆ ತೋಟಗಾರಿಕೆ ಸೌಲಭ್ಯಗಳು, ಮೀನುಗಾರಿಕೆ ಇಲಾಖೆ ಸೌಲಭ್ಯಗಳು, ಈ ಜನಾಂಗದ ಕಲಾವಿದರಿಗೆ ಅನುಷ್ಠಾನಗೊಳಿಸಿರುವ ಕಾರ್ಯಕ್ರಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳು, ನಗರದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಾಲೊನಿಗಳಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳು, ಗಂಗಾ ಕಲ್ಯಾಣ ವಿದ್ಯುತ್ ಸಂಪರ್ಕ, ಕಾರ್ಮಿಕರಿಗೆ ಸೌಲಭ್ಯ, ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ವಿವಿಧ 31 ಇಲಾಖೆಗಳ ಪ್ರಗತಿಯನ್ನು ಪರಿಶೀಲನೆ ನಡೆಸಿದರು.

ಸಭೆಗೆ ಗೈರು ಹಾಜರಾದ ತುಂಗಾ ಮೇಲ್ದಂಡೆ ಯೋಜನೆಯ ಎಂಜಿನಿಯರ್‌, ಪಿ.ಡಬ್ಲ್ಯೂಡಿ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಜಾರಿ ಮಾಡಲು ಸೂಚನೆ ನೀಡಿದರು.

ಸಮಾಜ ಕಲ್ಯಾಣಾಧಿಕಾರಿ ಜಗದೀಶ ಹೆಬ್ಬಳ್ಳಿ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಡಿಸಿಎಫ್‌ ಕ್ರಾಂತಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ರಾಜೀವ ಕೂಲೇರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿರಕ್ತಿಮಠ, ಡಿಡಿಪಿಐ ಅಂದಾನಪ್ಪ ವಡಗೇರಿ, ಡಿಡಿಪಿಯು ನಾಗರಾಜ, ಕಾರ್ಮಿಕ ಇಲಾಖಾ ಅಧಿಕಾರಿ ಲಲಿತಾ ಸಾತೇನಹಳ್ಳಿ, ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವಿನಾಯಕ ಜೋಶಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು