ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಬಿಜೆಪಿಯತ್ತ ಮುಖಮಾಡಿದ ಮನೋಹರ ತಹಸೀಲ್ದಾರ್‌

Published 28 ಫೆಬ್ರುವರಿ 2024, 7:37 IST
Last Updated 28 ಫೆಬ್ರುವರಿ 2024, 7:37 IST
ಅಕ್ಷರ ಗಾತ್ರ

ಹಾನಗಲ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಚಿವ ಮನೋಹರ ತಹಸೀಲ್ದಾರ್‌ ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದ್ದು, ಈಚೆಗೆ ನಡೆದ ಅವರ ಬೆಂಬಲಿಗರು, ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಅಂತಿಮಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗಾಗಿ ಜೆಡಿಎಸ್‌ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಏರ್ಪಟ್ಟಿದ್ದರೆ, ಇತ್ತ ಜೆಡಿಎಸ್‌ ಅಭ್ಯರ್ಥಿಯೇ ಬಿಜೆಪಿ ಸೇರಲು ಮುಂದಾಗಿರುವುದು ಕುತೂಹಲ ಕೆರಳಿಸಿದೆ.

ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್‌ ಸಿಗದ ಕಾರಣ ಅಸಮಾಧಾನಗೊಂಡು ಜೆಡಿಎಸ್‌ ಸೇರಿದ್ದ ಮನೋಹರ ತಹಸೀಲ್ದಾರ್‌, ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಪರಾಭವಗೊಂಡರು.

ಮನೋಹರ ತಹಸೀಲ್ದಾರ್‌ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಷ್ಟ್ರೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು ಸೂಕ್ತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಹಿರಿಯ ಮುಖಂಡರು ತಮ್ಮನ್ನು ಸಂಪರ್ಕಿಸಿದ್ದು, ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ. ಹೀಗಾಗಿ, ಬಿಜೆಪಿ ಬಗ್ಗೆ ಅವರು ಹೆಚ್ಚು ಒಲವು ಹೊಂದಿದ್ದಾರೆ ಎಂಬ ಮಾತಿಗೆ ಪುಷ್ಟಿ ಸಿಕ್ಕಿದೆ.

‘ಕೈ’ ಹುರಿಯಾಳು: ಮನೋಹರ ತಹಸೀಲ್ದಾರ್‌ ಅವರು ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಹಾನಗಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಒಂದು ಬಾರಿ ವಿಧಾನಸಭೆ ಉಪಾಧ್ಯಕ್ಷರಾಗಿ ಮತ್ತು
ಒಮ್ಮೆ ಅಬಕಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. 1978ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಸ್ಪರ್ಧಿಸಿದ್ದ ಮನೋಹರ, ನಿರಂತರವಾಗಿ 9 ಬಾರಿ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿದ್ದರು. 2018ರಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ವಂಚಿತರಾದರು. ಶ್ರೀನಿವಾಸ ಮಾನೆ ಅವರಿಗೆ ಕಾಂಗ್ರೆಸ್‌ ಮಣೆ ಹಾಕಿತ್ತು.

ಹುಸಿಯಾದ ನಿರೀಕ್ಷೆ: ಶಾಸಕ ಸಿ.ಎಂ. ಉದಾಸಿ ನಿಧನದ ಕಾರಣ 2021ರಲ್ಲಿ ನಡೆದ ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ತಹಸೀಲ್ದಾರ್‌ಗೆ ನಿರಾಸೆ ಉಂಟಾಯಿತು. 2023ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದರು. ಇದೀಗ ಕಮಲ ಪಾಳಯ ಸೇರುವ ತವಕದಲ್ಲಿದ್ದಾರೆ.

‘ಅಧಿಕಾರದ ಆಸೆ ಇಲ್ಲ’

‘ಯಾವುದೇ ಷರತ್ತುಗಳಿಲ್ಲದೆ ಬಿಜೆಪಿ ಸೇರುತ್ತಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಅವರು ನನ್ನೊಂದಿಗೆ ಮಾತನಾಡಿದ್ದಾರೆ. ಈಗ ಶಾಸಕ ಅಥವಾ ಸಂಸದನಾಗುವ ಆಸಕ್ತಿ ಇಲ್ಲ. ಪ್ರಮುಖ ರಾಷ್ಟ್ರೀಯ ಪಕ್ಷದಲ್ಲಿ ಗುರುತಿಸಿಕೊಂಡು ಸಮಾಜ ಸೇವೆ ಮುಂದುವರಿಸಿಕೊಂಡು ಹೋಗುವ ಇಚ್ಛೆ ಹೊಂದಿದ್ದೇನೆ. ನನ್ನ ಬೆಂಬಲಿಗರ ಸಭೆಯಲ್ಲಿಯೂ ಬಿಜೆಪಿ ಸೇರ್ಪಡೆಗೆ ಸಮ್ಮತಿ ಸಿಕ್ಕಿದೆ’ ಎಂದು ಮನೋಹರ ತಹಸೀಲ್ದಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಜೆಪಿ ಮುಖಂಡರ ಅಭಿಪ್ರಾಯ ಸಂಗ್ರಹ

ಮನೋಹರ ತಹಸೀಲ್ದಾರ್‌ ಬಿಜೆಪಿ ಸೇರ್ಪಡೆ ಬಗ್ಗೆ ಹಾನಗಲ್ ಕ್ಷೇತ್ರದ ಬಿಜೆಪಿ ಮುಖಂಡರಲ್ಲಿ ಭಿನ್ನರಾಗ ಮೂಡಿಲ್ಲ. ತಹಸೀಲ್ದಾರ್‌ ಸೇರ್ಪಡೆ ಹಿನ್ನೆಲೆಯಲ್ಲಿ ವರಿಷ್ಠರ ಸಮ್ಮುಖದಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ಅಭಿಪ್ರಾಯ ಸಂಗ್ರಹಣೆ ಕಾರ್ಯವೂ ನಡೆದಿತ್ತು ಎನ್ನಲಾಗಿದೆ. ಈ ವೇಳೆ  ಭಿನ್ನಾಭಿಪ್ರಾಯ ವ್ಯಕ್ತವಾಗಿಲ್ಲ. ಹಾಗಾಗಿ ಮನೋಹರ ತಹಸೀಲ್ದಾರ್‌ ಬಿಜೆಪಿ ಸೇರ್ಪಡೆ ಹಾದಿ ಸುಗಮವಾಗಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಹಾನಗಲ್‌ನಲ್ಲಿ ಪಕ್ಷ ಸೇರ್ಪಡೆ ಸಮಾರಂಭ ನಡೆಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT