ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಲೋಕಸಭಾ ಕ್ಷೇತ್ರ | ಅಭ್ಯರ್ಥಿಗಳ ಹಣೆಬರಹ ಬಹಿರಂಗ ಇಂದು

ಲೋಕಸಭಾ ಸಾರ್ವತ್ರಿಕ ಚುನಾವಣೆ: ಮತ ಎಣಿಕೆಗೆ ಕ್ಷಣಗಣನೆ
Published 4 ಜೂನ್ 2024, 4:13 IST
Last Updated 4 ಜೂನ್ 2024, 4:13 IST
ಅಕ್ಷರ ಗಾತ್ರ

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಜೂನ್ 4ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಮತ ಎಣಿಕೆ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜೂನ್ 4ರ ಬೆಳಿಗ್ಗೆ 7ಕ್ಕೆ ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಎಣಿಕೆ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. ಮತ ಯಂತ್ರಗಳನ್ನು ಎಣಿಕೆ ಕೊಠಡಿಗೆ ಸಾಗಿಸಲಾಗುವುದು. ಬೆಳಿಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ, ನಂತರ ಇ.ವಿ.ಎಂ.ಗಳ ಎಣಿಕೆ ಪ್ರಾರಂಭಿಸಲಾಗುತ್ತದೆ.

ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕವಾಗಿ ಮತ ಎಣಿಕೆ ನಡೆಯಲಿದೆ. ಈ ಉದ್ದೇಶಕ್ಕಾಗಿ ಎಂಟು ಕೊಠಡಿಗಳನ್ನು ಸಜ್ಜುಗೊಳಿಸಿದೆ. ಪ್ರತಿ ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತದಾನ ಹಾಗೂ ಸೇವಾ ಮತಗಳ ಎಣಿಕೆಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ವೀಕ್ಷಕರಿಗೆ, ಚುನಾವಣಾ ಅಧಿಕಾರಿಗಳಿಗೆ, ಮಾಧ್ಯಮ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಕಾರ್ಯಕ್ಕಾಗಿ ಮತ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಹಾಗೂ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಟ್ಯಾಬುಲೇಷನ್, ಸ್ಟ್ರಾಂಗ್‌ ರೂಂ ಸಿಬ್ಬಂದಿ ಒಳಗೊಂಡಂತೆ ಮತ ಎಣಿಕೆ ಕಾರ್ಯಕ್ಕೆ ಒಟ್ಟಾರೆಯಾಗಿ 800 ಸಿಬ್ಬಂದಿ ನಿಯೋಜಿಸಲಾಗಿದೆ.

ಶಿರಹಟ್ಟಿ-18, ಗದಗ-16, ರೋಣ-20, ಹಾನಗಲ್-18, ಹಾವೇರಿ-19, ಬ್ಯಾಡಗಿ-18, ಹಿರೇಕೆರೂರು-17 ಹಾಗೂ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 19 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಆಯ್ದ ಐದು ಮತಗಟ್ಟೆಗಳ ವಿವಿ ಪ್ಯಾಟ್‌ಗಳ ಮತ ಎಣಿಕೆ ನಡೆಯಲಿದೆ.

ಮತಗಟ್ಟೆ ಅಧಿಕಾರಿಗಳು, ಎಣಿಕೆ ಸಿಬ್ಬಂದಿ, ಅಧಿಕಾರಿ, ಪೊಲೀಸ್, ರಾಜಕೀಯ ಪಕ್ಷಗಳ ಏಜೆಂಟರಿಗೆ ಪ್ರತ್ಯೇಕ 11 ಬಣ್ಣದ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶವಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಬೆಂಕಿಪಟ್ಟಣ, ನೀರಿನ ಬಾಟಲ್, ಚಾಕು, ಚೂಪಾದ ಆಯುಧ, ಅಗ್ನಿಜನ್ಯವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಲು ನಾಲ್ಕು ಪ್ರವೇಶ ದ್ವಾರಗಳನ್ನು ಸ್ಥಾಪಿಸಲಾಗಿದೆ.

ನಿಷೇಧಾಜ್ಞೆ:

ಜಿಲ್ಲೆಯಾದ್ಯಂತ ಜೂನ್ 3ರ ಸಂಜೆ 6ಗಂಟೆಯಿಂದ ಜೂನ್ 5ರ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೂನ್ 4ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 7ರ ಬೆಳಿಗ್ಗೆ 6 ಗಂಟೆವೆರೆಗೆ ವಿಜಯೋತ್ಸವ ಮೆರವಣಿಗೆ ನಿಷೇಧಿಸಲಾಗಿದೆ ಹಾಗೂ ಜೂನ್ 4ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 5ರ ಬೆಳಿಗ್ಗೆ 6 ಗಂಟೆವರೆಗೆ ಮದ್ಯ ಮಾರಾಟ ಮತ್ತು ಮದ್ಯಪಾನ ನಿಷೇಧಿಸಲಾಗಿದೆ.

ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಒದಗಿಸಲಾಗಿದೆ 
ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಒದಗಿಸಲಾಗಿದೆ 

ಮತ ಎಣಿಕೆಗೆ ಪ್ರತಿ ಕೊಠಡಿಯಲ್ಲಿ 14 ಟೇಬಲ್‌ ಮತ ಎಣಿಕೆ ಕಾರ್ಯಕ್ಕೆ 800 ಸಿಬ್ಬಂದಿ ನಿಯೋಜನೆ  ಪ್ರತ್ಯೇಕ 11 ಬಣ್ಣಗಳ ಪಾಸ್‌ ವ್ಯವಸ್ಥೆ 

ಹಾವೇರಿ ಕ್ಷೇತ್ರ: ಶೇ 77.60 ಮತದಾನ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 902119 ಪುರುಷ 890572 ಮಹಿಳೆಯರು ಹಾಗೂ ಇತರೆ 83 ಮತದಾರರು ಸೇರಿ 1792774 ಮತದಾರರ ಪೈಕಿ 713613 ಪುರುಷ ಹಾಗೂ 677577 ಮಹಿಳೆಯರು ಹಾಗೂ ಇತರೆ 24 ಮತದಾರರು ಸೇರಿ 1391214 ಜನ ಮತದಾರರು ಮತದಾನ ಮಾಡಿದ್ದು ಶೇ 77.60 ರಷ್ಟು ಮತದಾನವಾಗಿದೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 166031 ಮತ ಚಲಾವಣೆಗೊಂಡಿದ್ದು ಗದಗ ವಿಧಾನಸಭಾ ಕ್ಷೇತ್ರದಲ್ಲಿ 170591 ರೋಣ ವಿಧಾನಸಭಾ ಕ್ಷೇತ್ರದಲ್ಲಿ 174948 ಮತ ಚಲಾವಣೆಗೊಂಡಿದ್ದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ 177799 ಮತ ಚಲಾವಣೆಗೊಂಡಿದ್ದು ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ 184256 ಮತ ಚಲಾವಣೆಗೊಂಡಿದ್ದು ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 155519 ಮತ ಚಲಾವಣೆಗೊಂಡಿದ್ದು ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 155519 ಮತ ಚಲಾವಣೆಗೊಂಡಿದ್ದು ಹಾಗೂ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 187724 ಮತಗಳು ಚಲಾವಣೆಗೊಂಡಿವೆ.

ಮತ ಎಣಿಕೆಗೆ ಬಿಗಿ ಭದ್ರತೆ ಮತ ಎಣಿಕೆ ಕೇಂದ್ರದ ಬಂದೋಬಸ್ತ್‌ಗಾಗಿ 4 ಡಿ.ವೈ.ಎಸ್.ಪಿ. 11 ಇನ್‌ಸ್ಪೆಕ್ಟರ್‌ 26 ಸಬ್ ಇನ್‌ಸ್ಪೆಕ್ಟರ್‌ 2 ಕೆ.ಎಸ್.ಆರ್.ಪಿ. ತುಕಡಿ ಹಾಗೂ 5 ಡಿ.ಎ.ಆರ್. ತುಕಡಿ ಹಾಗೂ ಹೋಮ್‌ಗಾರ್ಡ್ ಮತ್ತು ಸಾಕಷ್ಟು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT