ಶುಕ್ರವಾರ, ಜೂನ್ 18, 2021
28 °C
ಭ್ರಷ್ಟಾಚಾರವು ಬಿಜೆಪಿ ಸರ್ಕಾರದ ಸಂಸ್ಕಾರ

ಬಿಜೆಪಿ ಪಾಲಿಗೆ ಕಾಮಧೇನುವಾದ ಕೊರೊನಾ: ಎಂ.ಬಿ.ಪಾಟೀಲ ಗಂಭೀರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕೊರೊನಾ ಎಂಬುದು ಇಡೀ ಜಗತ್ತಿಗೆ ಮಾರಕವಾಗಿದ್ದರೆ, ಬಿಜೆಪಿ ಪಾಲಿಗೆ ಕಾಮಧೇನು, ಕಲ್ಪವೃಕ್ಷವಾಗಿದೆ. ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ಸಚಿವರು, ಅಧಿಕಾರಿಗಳು ಲೂಟಿ ಹೊಡೆಯುವ ಮೂಲಕ ಕೊರೊನಾ ನಿರ್ವಹಣೆಯನ್ನು ಜಾತ್ರೆ, ಹಬ್ಬವನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ಶಾಸಕ ಎಂ.ಬಿ.ಪಾಟೀಲ ಗಂಭೀರ ಆರೋಪ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸರ್ಕಾರದ ವಿವಿಧ ಇಲಾಖೆಗಳು ಖರ್ಚು ಮಾಡಿರುವ ₹4 ಸಾವಿರ ಕೋಟಿಯಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಸಚಿವರು ಮತ್ತು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ. ತಮಿಳುನಾಡು ಸರ್ಕಾರ ತಲಾ ವೆಂಟಿಲೇಟರ್‌ಗೆ ₹4.78 ಲಕ್ಷ ಕೊಟ್ಟು ಖರೀದಿಸಿದೆ. ಆದರೆ, ರಾಜ್ಯ ಸರ್ಕಾರ ₹5.6 ಲಕ್ಷದಿಂದ ₹18.20 ಲಕ್ಷಗಳವರೆಗೆ ದುಬಾರಿ ಹಣ ಕೊಟ್ಟು ಖರೀದಿಸಿದೆ. ಅಷ್ಟೇ ಅಲ್ಲ, ವೆಂಟಿಲೇಟರ್‌ಗಳು ಕಳಪೆ ಗುಣಮುಟ್ಟದಿಂದ ಕೂಡಿವೆ ಎಂದು ಟೀಕಿಸಿದರು. 

ಜೀವದ ಜತೆ ಚೆಲ್ಲಾಟ

ದೂರು ಬಂದ ಬಳಿಕ, 3.50 ಲಕ್ಷ ಪಿಪಿಇ ಕಿಟ್‌ಗಳ ಪೈಕಿ 1.25 ಲಕ್ಷ ಪಿಪಿಇ ಕಿಟ್‌ಗಳನ್ನು ಸರ್ಕಾರ ಖಾಸಗಿ ಕಂಪನಿಗೆ ವಾಪಸ್‌ ನೀಡಿತು. ಅಂದರೆ, ಉಳಿದವುಗಳನ್ನು ಈಗಾಗಲೇ ಬಳಸಲಾಗಿದೆ. ವೈದ್ಯಕೀಯ ಸಿಬ್ಬಂದಿ ಜೀವದ ಜೊತೆ ಸರ್ಕಾರ ಆಟವಾಡುತ್ತಿದೆ. ಮಾಸ್ಕ್‌, ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಸರ್‌ ಪ್ರತಿಯೊಂದನ್ನೂ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಹಣ ನೀಡಿ ಖರೀದಿಸಿದೆ. ಅಂಕಿಅಂಶಗಳಲ್ಲಿ ತೋರಿಸಿದಷ್ಟು ಉಪಕರಣಗಳನ್ನು ವಾಸ್ತವದಲ್ಲಿ ಖರೀದಿಸಿಯೇ ಇಲ್ಲ ಎಂದು ಆರೋಪ ಮಾಡಿದರು. 

ಸರ್ಕಾರ ವಿಫಲ

ಕೋವಿಡ್‌ ನಿಯಂತ್ರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ. ರಾಜ್ಯದಲ್ಲಿ ಮಾರ್ಚ್‌ 9ರಂದು ಕೇವಲ ಒಂದು ಸೋಂಕು ಪ್ರಕರಣ ಇದ್ದದ್ದು, ಈಗ ಒಂದು ಲಕ್ಷ ಮೀರಿದೆ. ಆಂಬುಲೆನ್ಸ್‌ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಕಾಡುತ್ತಿದೆ. ‘ಆತ್ಮನಿರ್ಭರ’ ಪ್ಯಾಕೇಜ್‌ನಲ್ಲಿ ಘೋಷಿಸಿದ ಪರಿಹಾರ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಲ್ಲ. ದೇಶದಲ್ಲಿ ವೆಂಟಿಲೇಟರ್‌ ಕೊರತೆ ಇದ್ದರೂ, ಬೇರೆ ದೇಶಗಳಿಗೆ ರಫ್ತು ಮಾಡಲು ಪ್ರಧಾನಿ ಮೋದಿ ಅನುಮತಿ ನೀಡಿದ್ದಾರೆ ಎಂದು ಕುಟುಕಿದರು. 

ತನಿಖೆಗೆ ಆಗ್ರಹ

ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ರಾಜ್ಯ ಹೈಕೋರ್ಟ್‌ ಹಾಲಿ ನ್ಯಾಯಧೀಶರೊಬ್ಬರಿಂದ ಸಮಗ್ರ ತನಿಖೆ ನಡೆಸಬೇಕು. ಕೂಡಲೇ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದು, ಕಾನೂನು ಹೋರಾಟದ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್‌, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಮನೋಹರ ತಹಸೀಲ್ದಾರ್‌, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಶಾಸಕರಾದ ಬಿ.ಎಚ್‌.ಬನ್ನಿಕೋಡ, ಬಿ.ಆರ್‌.ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ, ಜಿ.ಪಂ.ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಇತರರು ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು