ಶುಕ್ರವಾರ, ಜುಲೈ 1, 2022
22 °C
ಸವಣೂರಿನ ಡಾ.ವಿ.ಕೃ.ಗೋಕಾಕ ಸ್ಮಾರಕ ಭವನದಲ್ಲಿ ಲೈಬ್ರರಿ ಮತ್ತು ಮ್ಯೂಸಿಯಂ: ಡಿ.ಸಿ

ಪಾಪು ಸ್ಮಾರಕ ನಿರ್ಮಾಣ: ನೀಲನಕ್ಷೆಗೆ ಸೂಚನೆ ನೀಡಿದ ಸಂಜಯ ಶೆಟ್ಟೆಣ್ಣವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ. ಗೋಕಾಕ ಅವರ ನೆನಪಿನಲ್ಲಿ ಸವಣೂರಲ್ಲಿ ನಿರ್ಮಿಸಿರುವ ಡಾ.ವಿ.ಕೃ.ಗೋಕಾಕ ಸ್ಮಾರಕ ಭವನದಲ್ಲಿ ನಿರಂತರ ಕಾರ್ಯಚಟುವಟಿಕೆಗಳು ನಡೆಸುವಂತಾಗಬೇಕು. ಸುಸಜ್ಜಿತವಾದಂತಹ ಗ್ರಂಥಾಲಯ ಹಾಗೂ ವಿ.ಕೃ.ಗೋಕಾಕ ಅವರಿಗೆ ಸಂಬಂಧಿಸಿದ ವಸ್ತುಗಳು ಹಾಗೂ ಛಾಯಾಚಿತ್ರಗಳನ್ನೊಳಗೊಂಡ ಮ್ಯೂಸಿಯಂ ಸ್ಥಾಪನೆ ಕುರಿತಂತೆ ಶೀಘ್ರವೇ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ.ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸಮಿತಿಯ ಸಭೆ ನಡೆಸಿದ ಅವರು, ಗೋಕಾಕ ಸಭಾಂಗಣದ ಆವರಣದಲ್ಲಿ ಸ್ವಚ್ಛತೆ ಹಾಗೂ ಮುಂಭಾಗದಲ್ಲಿ ಕಾರಂಜಿ ನಿರ್ಮಾಣ ಕುರಿತಂತೆ ತ್ವರಿತವಾಗಿ ನೀಲನಕ್ಷೆ ತಯಾರಿಸಿ ಪ್ರಸ್ತಾವ ಸಲ್ಲಿಸುವಂತೆ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು.

ಡಾ.ವಿ.ಕೃ.ಗೋಕಾಕ ವಸ್ತುಸಂಗ್ರಾಲಯ ಹಾಗೂ ಗ್ರಂಥಾಲಯಕ್ಕೆ ಗೋಕಾಕ ಅವರ ಮಗ ತಮ್ಮಲ್ಲಿ ಸಂಗ್ರಹವಿರುವ ವಸ್ತುಗಳನ್ನು ಹಾಗೂ ಪುಸ್ತಕಗಳನ್ನು ನೀಡಲು ಮುಂದೆ ಬಂದಿದ್ದಾರೆ. ಗ್ರಂಥಾಲಯಕ್ಕೆ ಅಗತ್ಯವಾದ ಪೀಠೋಪಕರಣಗಳ ಖರೀದಿ ಹಾಗೂ ಸಭಾಭವನದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಶೀಘ್ರದಲ್ಲೇ ಕಾರ್ಯಚಟುವಟಿಕೆ ಆರಂಭಿಸುವ ಕುರಿತಂತೆ ಕ್ರಮವಹಿಸಬೇಕು. ಏಪ್ರಿಲ್‌ ಮೊದಲ ವಾರದಲ್ಲಿ ಸವಣೂರಿನ ಗೋಕಾಕ ಸಭಾಂಗಣದಲ್ಲಿ ಟ್ರಸ್ಟ್‌ ಸಭೆಯನ್ನು ಕರೆದು ಅಂತಿಮಗೊಳಿಸುವಂತೆ ಸೂಚನೆ ನೀಡಿದರು.

ನೀಲನಕ್ಷೆ: ನಾಡೋಜ ಡಾ.ಪಾಟೀಲ ಪುಟ್ಟಪ್ಪನವರ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಕುರಿತಂತೆ ತ್ವರಿತವಾಗಿ ಜಮೀನಿನ ನೋಂದಣಿ ಹಾಗೂ ಸ್ಮಾರಕದ ನೀಲನಕ್ಷೆ ತಯಾರಿಸಿ ಸಲ್ಲಿಸುವಂತೆ ಸೂಚನೆ ನೀಡಿದರು.

ಟ್ರಸ್ಟ್‍ನ ಸದಸ್ಯರಾದ ಡಾ.ರಮಾಕಾಂತ ಜೋಶಿ, ಜಿ.ಎಂ.ಹೆಗಡೆ, ಸತೀಶ ಕುಲಕರ್ಣಿ ಮಾತನಾಡಿ, ಆಗಸ್ಟ್ 9ರಂದು ಗೋಕಾಕರ ಜನ್ಮ ದಿನವನ್ನು ಧಾರವಾಡದಲ್ಲಿ ಆಯೋಜಿಸಬೇಕು. ಸವಣೂರಿನಲ್ಲಿ ನಿರ್ಮಾಣ ಮಾಡಿರುವ ಡಾ.ವಿ.ಕೃ.ಗೋಕಾಕ ಸಭಾಂಗಣಕ್ಕೆ ಜ್ಞಾನಪೀಠ ಪುರಸ್ಕೃತ ‘ಡಾ.ವಿ.ಕೃ.ಗೋಕಾಕ ಭವನ’ ಎಂದು ನಾಮಕರಣ ಮಾಡಬೇಕು. ಗೋಕಾಕರ ಭವನದಲ್ಲಿ ವಸ್ತುಸಂಗ್ರಹಾಲಯ ಅಭಿವೃದ್ಧಿ, ಗ್ರಂಥಾಲಯ ಸ್ಥಾಪನೆ, ಗೋಕಾಕರ ಚಿತ್ರಸಂಪುಟವನ್ನು ಸಾರ್ವಜನಿಕ ವಿತರಣೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡರು.

ಶ್ರದ್ಧಾಂಜಲಿ: ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸದಸ್ಯರಾಗಿದ್ದ ನಾಡೋಜ ಡಾ.ಪಾಟೀಲ ಪುಟ್ಟಪ್ಪ, ಎಂ.ಪಿ.ಪಾಟೀಲ, ಚನ್ನವೀರ ಕಣವಿ ಅವರ ಅಗಲಿಕೆಗೆ ಸಭೆಯ ಆರಂಭದಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌, ಸವಣೂರ ಉವವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಸವಣೂರ ಪುರಸಭೆ ಅಧ್ಯಕ್ಷೆ ಶೈಲಾ ಎಚ್.ಮುದೇನಗೌಡರ, ಡಿವೈ.ಎಸ್.ಪಿ.ಶಂಕರ ಮಾರಿಹಾಳ, ಟ್ರಸ್ಟ್‌ ಸದಸ್ಯರಾದ ಮೈಲಾರಪ್ಪ ತಳ್ಳಿಹಳ್ಳಿ, ಮಂಜುಳಾ ರಾಶೀನಕರ, ಚಂದ್ರಗೌಡ ಪಾಟೀಲ, ಟ್ರಸ್ಟ್‌ ಸದಸ್ಯ ಕಾರ್ಯದರ್ಶಿಗಳಾದ ಶಶಿಕಲಾ ಹುಡೇದ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು