ಹಾನಗಲ್: ತಾಲ್ಲೂಕಿನಲ್ಲಿ ಗೋವಿನಜೋಳ ಬೆಳೆಗೆ ಅಲ್ಲಲ್ಲಿ ಲದ್ದಿ ಹುಳು ಬಾಧೆ ಮತ್ತು ಎಲೆ ಹಳದಿ ಆಗುವ ಕೇದಿಗೆ ರೋಗ ಕಂಡು ಬಂದಿದ್ದು ಹತೋಟಿಗೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸಹಾಯಕ ಕೃಷಿ ನಿರ್ದೇಶಕ ಮೋಹನಕುಮಾರ ಕೆ. ತಿಳಿಸಿದ್ದಾರೆ.
ಲದ್ದು ಹುಳುಗಳು ಜೋಳದ ಸುಳಿಯಲ್ಲಿ ಉಳಿದುಕೊಂಡು ಸಸ್ಯಗಳ ಹರಿತ್ತನ್ನು ಹೀರುತ್ತವೆ. ಈ ಸ್ಥಿತಿಯಲ್ಲಿ ಎಲೆಗಳು ಅಸ್ಥಿಪಂಜರದಂತೆ ಕಾಣುತ್ತವೆ. ಎಲೆಗಳಲ್ಲಿ ರಂಧ್ರ ಸೃಷ್ಟಿಯಾಗುತ್ತದೆ. ಇದು ಆಕ್ರಮಣಕಾರಿ ಕೀಟಗಳು ಬೆಳೆಯಲ್ಲಿವೆ ಎಂಬ ಲಕ್ಷಣವಾಗಿದೆ ಎಂದು ಅವರು
ತಿಳಿಸಿದ್ದಾರೆ.
ನಿರಂತರವಾಗಿ ಆಹಾರ ಭಕ್ಷಿಸುವ ಈ ಕೀಡೆಗಳು ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ದಾಂಗುಡಿ ಇಡುತ್ತವೆ. ಇವುಗಳ ಪ್ರಮಾಣ ಹೆಚ್ಚಾದಂತೆ ಬೆಳೆ ಹಾನಿ ಹೆಚ್ಚಾಗುವ ಸಂಭವವಿದೆ. ಹೀಗಾಗಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಹುಳು ಬಾಧೆ ಅಲ್ಪ ಪ್ರಮಾಣದಲ್ಲಿದ್ದಾಗ ಮೊದಲ ಹಂತ ಎಂದು ಗುರುತಿಸಲಾಗಿದ್ದು, ಈ ಸಮಯದಲ್ಲಿ ಶೇ 5ರಷ್ಟು ಬೇವಿನ ಬೀಜದ ಕಷಾಯ ಅಥವಾ 5 ಮಿ.ಲೀಟರ್ ಅಜಾಡಿರೆಕ್ಟಿನ್ (ಬೇವಿನ ಎಣ್ಣೆ) ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ಸಿಂಪಡನೆ ಮಾಡಬೇಕು.
ಎರಡು ಮತ್ತು ಮೂರನೇ ಹಂತದ ಹುಳುಗಳ ನಿರ್ವಹಣೆಗೆ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್‌ನ್ನು ಪ್ರತಿ ಲೀಟರ್ ಬೆರೆಸಿ ಸುಳಿಯಲ್ಲಿ ಸಿಂಪಡಿಸಬೇಕು ಎಂದು ಮೋಹನಕುಮಾರ ತಿಳಿಸಿದ್ದಾರೆ.
ಸತತ ಮಳೆ, ಅತಿಯಾದ ತೇವದಿಂದ ಗೋವಿನಜೋಳ ಬೆಳೆಯ ಎಲೆಗಳು ಹಳದಿಯಾಗುತ್ತಿವೆ. ಇದರ ನಿರ್ವಹಣೆಗಾಗಿ 19 ಆಲ್ 3 ಗ್ರಾಂ ಹಾಗೂ ಲಘು ಪೋಷಕಾಂಶಗಳ ದ್ರಾವಣ 3 ಎಂಎಲ್ ಪ್ರತಿ ಲೀಟರ್‌ನೀರಿಗೆ ಬೆರೆಸಿ ಸಿಂಪಡನೆ ಮಾಡಬೇಕು.
ಮಳೆಯ ವಾತಾವರಣ ಇದ್ದಲ್ಲಿ ಮ್ಯಾಂಕೋಜೆಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎಡೆ ಹೊಡೆದು ದಿಂಡು ಏರಿಸುವ ಮೂಲಕ ತೇವಾಂಶ ಕಡಿಮೆಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
Cut-off box - ಬಾಕ್ಸ್–1 ಇಮಾಮೆಕ್ಟಿನ್ ಬೆಂಜೋಯೇಟ್ ಮತ್ತು ಲಘು ಪೋಷಕಾಂಶಗಳು ಹಾನಗಲ್ ಅಕ್ಕಿಆಲೂರ ಬಮ್ಮನಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿ ಲಭ್ಯವಿದೆ. ರೈತರು ಭೇಟಿ ನೀಡಿ ಪರಿಹಾರ ಕಂಡುಕೊಳ್ಳಬೇಕು. ಮೋಹನಕುಮಾರ ಕೆ ಸಹಾಯಕ ಕೃಷಿ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.