ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ‘ಮಂಗ್ಳೂರ ಹುಡುಗ– ಹುಬ್ಬಳ್ಳಿ ಹುಡುಗಿ’ ನಾಟಕ ಪ್ರದರ್ಶನ

ಪಂಚಾಕ್ಷರ ನಾಟ್ಯ ಸಂಘ: ಉದ್ಘಾಟನಾ ಕಾರ್ಯಕ್ರಮ ನಾಳೆ
Last Updated 10 ನವೆಂಬರ್ 2021, 13:19 IST
ಅಕ್ಷರ ಗಾತ್ರ

ಹಾವೇರಿ: ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘ, ಜೇವರ್ಗಿ ವತಿಯಿಂದ ‘ಮಂಗ್ಳೂರ ಹುಡುಗ– ಹುಬ್ಬಳ್ಳಿ ಹುಡುಗಿ’ ಹಾಸ್ಯ ಪ್ರಧಾನ ನಾಟಕದ ಉದ್ಘಾಟನಾ ಕಾರ್ಯಕ್ರಮವು ನಗರದ ಎಸ್ಪಿ ಕಚೇರಿ ಸಮೀಪದ ವೀರಭದ್ರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಕಲಾವಿದ ದಯಾನಂದ ಬೀಳಗಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಎಸ್ಪಿ ಹನುಮಂತರಾಯ, ಶಾಸಕ ನೆಹರು ಓಲೇಕಾರ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ.ಸಂತೋಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಶಿವಬಸಪ್ಪ ಹಲಗಣ್ಣನವರ ಪಾಲ್ಗೊಳ್ಳಿದ್ದಾರೆ ಎಂದು ಮಾಹಿತಿ ನೀಡಿದರು.

2007ರಲ್ಲಿ ಹಾವೇರಿ ಜಿಲ್ಲೆಯಲ್ಲಿ ನಾಟಕ ಪ್ರದರ್ಶನ ಮಾಡಿದಾಗ ‘ಕಲೆಕ್ಷನ್‌’ ಉತ್ತಮವಾಗಿರಲಿಲ್ಲ. ಆದರೆ, 2015ರಲ್ಲಿ ‘ಕುಂಟ ಕೋಣ, ಮೂಕ ಜಾಣ’ ನಾಟಕವು 350 ಪ್ರದರ್ಶನಗಳನ್ನು ಕಂಡು, ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಮತ್ತೆ ಈ ಬಾರಿ ಹಾವೇರಿಯಲ್ಲಿ ಹೊಸ ನಾಟಕದೊಂದಿಗೆ 20 ಕಲಾವಿದರ ತಂಡ ಆಗಮಿಸಿದೆ ಎಂದರು.

ಕೋವಿಡ್‌ ಕಾಲದಲ್ಲಿ ನಾಟಕ ಪ್ರದರ್ಶನವಿಲ್ಲದೆ ಕಲಾವಿದರು ಮತ್ತು ನಾಟಕ ಸಂಘದ ಮಾಲೀಕರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದರು. ಅಂಥ ಸಂದರ್ಭದಲ್ಲಿ ಕೆಲವು ಕಲಾಪೋಷಕರು ನೆರವು ನೀಡಿದರು. ‘ಮಂಗ್ಳೂರ ಹುಡುಗ– ಹುಬ್ಬಳ್ಳಿ ಹುಡುಗಿ’ ನಾಟಕವು ಹಾಸ್ಯ ಪ್ರಧಾನವಾಗಿದ್ದು, ಕುಟುಂಬ ಸಮೇತ ನೋಡುವ ರಂಗಪ್ರದರ್ಶನವಾಗಿದೆ. ಈಗಾಗಲೇ ಸುಮಾರು 100 ಪ್ರಯೋಗಗಳನ್ನು ಮಾಡಿ, ನಾಟಕ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಬಯಲು ಸೀಮೆಯಲ್ಲಿ ನಾಟಕಗಳಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಟಿವಿ, ಇಂಟರ್‌ನೆಟ್‌, ಸಿನಿಮಾಗಳ ಭರಾಟೆಯ ಮಧ್ಯೆಯೂ ನಾಟಕ ಕಲಾವಿದರನ್ನು ಜನರು ಪ್ರೋತ್ಸಾಹಿಸುತ್ತಾರೆ. 2014ರಲ್ಲಿ ನಾನು ಪಾತ್ರಧಾರಿಯಾಗಿ ನಟಿಸಿದ ಚಲನಚಿತ್ರ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯಾಗಬೇಕಿದೆ. ‘ಮನಮೆಚ್ಚಿದ ಜೋಡಿ’ ಎಂಬ ಸಿನಿಮಾದಲ್ಲೂ ಪಾತ್ರ ಸಿಕ್ಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಂಚಯ್ಯ ಹಿರೇಮಠ, ಮಹಾನಂದಮ್ಮ ಜೇವರ್ಗಿ, ಶ್ವೇತಾ ಬೀಳಗಿ, ಹನುಮಂತಪ್ಪ ಬಾಗಲಕೋಟೆ, ಚಂದ್ರು ಮೈಲಾರ, ರಮೇಶ ಮುದ್ದೇಬಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT