ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕೆ ದುಡಿದವರಿಗೆ ಟಿಕೆಟ್‌ ಸಿಕ್ಕಿದೆ: ಕೋಟ ಶ್ರೀನಿವಾಸ ಪೂಜಾರಿ

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ
Last Updated 9 ಅಕ್ಟೋಬರ್ 2021, 13:44 IST
ಅಕ್ಷರ ಗಾತ್ರ

ಹಾವೇರಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತಮ ಆಡಳಿತ ಮತ್ತು ಸಾಧನೆಯಿಂದ ಉಪಚುನಾವಣೆಯಲ್ಲಿ ಹಾನಗಲ್‌ ಮತ್ತು ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಯಾರಿಗೂ ಟಿಕೆಟ್‌ ನಿರಾಕರಿಸಿಲ್ಲ. ಪಕ್ಷಕ್ಕೆ ದುಡಿದಂಥ ಶಿವರಾಜ ಸಜ್ಜನರ ಅವರಿಗೆ ಈ ಬಾರಿ ಅವಕಾಶ ಮಾಡಿಕೊಡಲಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಶಾಸಕರಾಗಿ, ವಿಧಾನ ಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಆಡಳಿತಾತ್ಮಕ ಅನುಭವ ಮತ್ತು ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಗಮನಿಸಿ ಟಿಕೆಟ್‌ ನೀಡಲಾಗಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಸರ್ಕಾರದ ಸಾಧನೆಗಳನ್ನು ಮನೆ–ಮನೆಗೂ ತಲುಪಿಸಿ, ಪಕ್ಷದ ಗೆಲುವಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯುತ್ತೇವೆ ಎಂದರು.

ಐಟಿ ದಾಳಿ ಕುರಿತ ಪತ್ರಕರ್ತರ ಪ್ರಶ್ನೆಗೆ,ಬಿ.ಎಸ್‌.ಯಡಿಯೂರಪ್ಪನವರು ನಮ್ಮ ಸರ್ವೋಚ್ಚ ಮುಖಂಡರು. ಅವರ ಮಾರ್ಗದರ್ಶನ ನಮಗೆ ಅಗತ್ಯವಿದೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ.ಐಟಿ ದಾಳಿಗೂ ಮತ್ತು ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಬೆಲೆ ಏರಿಕೆ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಲ ಕಾಲಕ್ಕೆ ಎಲ್ಲ ಸರ್ಕಾರಗಳ ಅವಧಿಯಲ್ಲೂ ತೈಲ ಬೆಲೆ ಹೆಚ್ಚಳವಾಗುತ್ತಾ ಬಂದಿದೆ. ಎಲ್ಲ ವಿಚಾರಗಳನ್ನು ಕಾಂಗ್ರೆಸ್‌ ಪಕ್ಷದವರು ಗಮನಿಸಬೇಕು. ತೆರಿಗೆ ವ್ಯವಸ್ಥೆ, ಆಡಳಿತವನ್ನು ಕೇಂದ್ರ ಸರ್ಕಾರ ಉತ್ತಮವಾಗಿ ನಿಭಾಯಿಸುತ್ತಿದೆ ಎಂಬುದನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ ಎಂದು ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ನೆಹರು ಓಲೇಕಾರ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಶಶಿ ಹೊಸಳ್ಳಿ, ಗಿರೀಶ ತುಪ್ಪದ, ಪ್ರಭು ಹಿಟ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT