ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿವಾಡರ ಪ್ರಭಾವ ಏನಿಲ್ಲ, ತೊಡೆ ತಟ್ಟೋದು ನಿಂತಿಲ್ಲ : ಸಚಿವ ಆರ್.ಶಂಕರ್

Last Updated 21 ಜೂನ್ 2019, 14:21 IST
ಅಕ್ಷರ ಗಾತ್ರ

ಹಾವೇರಿ: ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಅವರು ಪಕ್ಷ ಕಟ್ಟುವಂತಹ ಯಾವ ಕೆಲಸವನ್ನೂ ಮಾಡಿಲ್ಲ. ಹೀಗಾಗಿ, ಕ್ಷೇತ್ರದಲ್ಲಿ ಅವರ ಪ್ರಭಾವವೇ ಉಳಿದಿಲ್ಲ. ಸುಮ್ಮನೆ ತಮ್ಮಷ್ಟಕ್ಕೆ ತಾವು ತೊಡೆ ತಟ್ಟಿಕೊಂಡು ಓಡಾಡುತ್ತಿದ್ದಾರೆ...’

ಇದು ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿಕೊಂಡ ಸಚಿವ ಆರ್.ಶಂಕರ್ ಅವರು ತಮ್ಮದೇ ಪಕ್ಷದ ನಾಯಕರ ವಿರುದ್ಧ ಹೇಳಿದ ಮಾತು. ಜನರ ಕುಂದು ಕೊರತೆ ಆಲಿಸಲು ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು.‌

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ಕಾರ ಉಳಿಸಲು ನಾನು ಶಕ್ತಿ ಕೊಡಬೇಕಿತ್ತು. ಅದನ್ನು ಕೊಟ್ಟಿದ್ದೇನೆ. ಅದರಿಂದ ಯಾರಿಗೋ ಅಸಮಾಧಾನವಾದರೆ ಅದಕ್ಕೆ ನಾನು ಹೊಣೆಯಲ್ಲ. ಸರ್ಕಾರ ಕೊಡುವ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುವುದಷ್ಟೇ ನನ್ನ ಕೆಲಸ’‌ ಎಂದರು.

‘ನಾನು ಕಾಂಗ್ರೆಸ್‌ ಸೇರಿರುವುದಕ್ಕೆ ಏನೇನೋ ವದಂತಿಗಳು ಹುಟ್ಟಿಕೊಂಡಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶಂಕರ್ ಅವರನ್ನು ಒಪ್ಪಿಕೊಳ್ಳುತ್ತಿಲ್ಲ ಎಂದೆಲ್ಲ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆದರೆ, ನನ್ನ ವಿರೋಧಿಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ನನ್ನನ್ನು ಭೇಟಿಯಾಗಿಮಾತನಾಡಿಸಿದ್ದಾರೆ. ಶುಭಾಶಯ ಹೇಳಿದ್ದಾರೆ. ‘ಕ್ಷೇತ್ರಕ್ಕೆ ನಿಮ್ಮ ಆಡಳಿತ ಅಗತ್ಯವಿತ್ತು’ ಎಂದೂ ಹೇಳಿದ್ದಾರೆ. ಹೀಗಿರುವಾಗ ವಿರೋಧಿಗಳ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಲಿ’ ಎಂದು ಖಾರವಾಗಿ ಹೇಳಿದರು.

‘ವಿಧಾನಸಭಾ ಚುನಾವಣೆಯಲ್ಲಿ ನಾನೇ ಗೆಲ್ಲುತ್ತೇನೆ ಎಂಬುದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಗೊತ್ತಿತ್ತು. ಕ್ಷೇತ್ರದ ‘ರಿಪೋರ್ಟ್ ಕಾರ್ಡ್‌’ ನೋಡಿ ನನಗೇ ಟಿಕೆಟ್ ಕೊಡಲು ನಿರ್ಧರಿಸಿದ್ದರು. ಆದರೆ, ಕೋಳಿವಾಡ ತಾವು ಸೋಲುತ್ತೇವೆ ಎಂದು ಗೊತ್ತಿದ್ದರೂ, ವಿರೋಧ ಕಟ್ಟಿಕೊಂಡು ಬಂದರು. ಕೊನೆಗೆ ಫಲಿತಾಂಶ ಏನಾಯಿತು? ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ವರ್ಚಸ್ಸು ಇರದಿದ್ದರೆ, ಕೋಳಿವಾಡರ ಸೋಲು ಇನ್ನೂ ಹೀನಾಯವಾಗಿರುತ್ತಿತ್ತು’ ಎಂದರು.

ರಾಜಕೀಯ ವೈರಿಯಷ್ಟೇ: ‘ಚುನಾವಣೆಗೆ ಮುನ್ನವಷ್ಟೇ ಪಕ್ಷ ಸಮರ. ಆಮೇಲೆ ಎಲ್ಲ ಪಕ್ಷದವರನ್ನೂ ಸಮಾನವಾಗಿ ಕಾಣಬೇಕು ಎಂಬುದು ರಾಜಕೀಯ ಧರ್ಮ. ಕೋಳಿವಾಡ ರಾಜಕೀಯವಾಗಿ ಮಾತ್ರ ನನ್ನ ವೈರಿ. ಅದನ್ನು ಬಿಟ್ಟರೆ ನಾನು ಎಲ್ಲರನ್ನೂ ಪ್ರೀತಿಸುವಂತೆ, ಅವರನ್ನೂ ಪ್ರೀತಿಮಾಡುತ್ತೇನೆ. ಸರ್ಕಾರ ನನಗೆ ಜಿಲ್ಲೆಯ ಜವಾಬ್ದಾರಿ ಕೊಟ್ಟರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿಭಾಯಿಸಿಕೊಂಡು ಹೋಗುತ್ತೇನೆ’ಎಂದೂ ಶಂಕರ್ ಹೇಳಿದರು.

ಶಂಕರ್‌ ಅವರಿಗೆ ಸಚಿವ ಸ್ಥಾನ ಕೊಟ್ಟ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಕೋಳಿವಾಡ, ‘ನಾವು ಪಕ್ಷಕ್ಕಾಗಿ ದುಡಿಯುತ್ತಿರುವವರು. ಮುಂದೆಯೂ ಪಕ್ಷ ಸಂಘಟಿಸಲು ಶ್ರಮಿಸುತ್ತೇವೆ. ಕೆಲವರು ಆಯಾ ರಾಮ್ ಗಯಾ ರಾಮ್ ಎಂಬಂತೆ ಪಕ್ಷಕ್ಕೆ ಬಂದು ಹೋಗ್ತಿರ್ತಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT