ನಮ್ಮ ಮನೆತನಕ್ಕೂ ಟಿಪ್ಪುಗೂ ಉತ್ತಮ ಸಂಬಂಧ ಇರಲಿಲ್ಲ: ಪ್ರಮೋದಾ ದೇವಿ

7
'ಯದುವೀರ್ ಒಡೆಯರ್‌ನ ರಾಜಕೀಯ ಭವಿಷ್ಯದ ಬಗ್ಗೆ ಆತನೇ ನಿರ್ಧಾರ ಕೈಗೊಳ್ಳುತ್ತಾನೆ'

ನಮ್ಮ ಮನೆತನಕ್ಕೂ ಟಿಪ್ಪುಗೂ ಉತ್ತಮ ಸಂಬಂಧ ಇರಲಿಲ್ಲ: ಪ್ರಮೋದಾ ದೇವಿ

Published:
Updated:
Deccan Herald

ಹಾವೇರಿ: ನನಗೆ ರಾಜಕೀಯ ಇಷ್ಟವಿಲ್ಲ. ಆದರೆ, ಯದುವೀರ್ ಒಡೆಯರ್‌ನ ರಾಜಕೀಯ ಭವಿಷ್ಯದ ಬಗ್ಗೆ, ಆತನೇ ಸ್ವಂತ ನಿರ್ಧಾರ ಕೈಗೊಳ್ಳುತ್ತಾನೆ ಎಂದು ಮೈಸೂರು ರಾಜ ಮನೆತನದ ವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹೇಳಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬೆಳಗಾವಿಗೆ ತೆರಳುತ್ತಿದ್ದ ಅವರು, ಇಲ್ಲಿನ ಜಿ.ಎಚ್.ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

‘ನಾನು ರಾಜಕೀಯ ಪ್ರವೇಶಿಸುತ್ತೇನೆ’ ಎಂಬ ಮಾಹಿತಿಗಳೆಲ್ಲ ‘ಗಾಳಿ ಸುದ್ದಿ’ ಎಂದ ಅವರು, ಸಾಮಾಜಿಕ ಹಾಗೂ ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ಜನರಿಗೆ ಒಳಿತು ಮಾಡಬೇಕು ಎಂಬ ಇಚ್ಛೆ ಇದೆ. ಆದರೆ, ಈಗಿನ ‘ರಾಜಕೀಯ’ ಮಾಡಲು ನನಗೆ ಬರುವುದಿಲ್ಲವಲ್ಲ’ ಎಂದು ನಸುನಕ್ಕರು.

ಟಿ‍ಪ್ಪು ಜಯಂತಿ ಆಚರಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ಮನೆತನಕ್ಕೂ ಟಿಪ್ಪುಗೂ ಉತ್ತಮ ಸಂಬಂಧ ಇರಲಿಲ್ಲ ಎಂಬುದು ಇತಿಹಾಸದಲ್ಲಿಯೇ ಇದೆ. ಅವರು, ನಮ್ಮ ಸಂಸ್ಥಾನದ ಇತಿಹಾಸ ಸಾರುವ ಪುಸ್ತಕಗಳನ್ನು ಸುಟ್ಟು ಹಾಕಿ, ಕುದುರೆಗಳಿಗೆ ಕಾಳು ಬೇಯಿಸಿದರು ಎಂದಿದೆ. ಅವರಿಂದ ನಮ್ಮ ಮನೆತನಕ್ಕೆ ಸಾಕಷ್ಟು ತೊಂದರೆ ಆಗಿತ್ತು. ಆದರೆ, ಟಿಪ್ಪು ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯ ಇರಬಹುದು. ಸರ್ಕಾರವು ಜಾತ್ಯತೀತ ನಿಲುವಿನ ಹೆಸರಿಲ್ಲಿ ಜಯಂತಿ ಘೋಷಿಸಿರಬಹುದು. ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ’ ಎಂದರು.

‘ಈ ಹಿಂದೆ ನಟ ಫಿರೋಜ್ ಖಾನ್ ಅವರು ‘ದಿ ಸೋರ್ಡ್‌ ಆಫ್‌ ಟಿಪ್ಪು ಸುಲ್ತಾನ್’ ಧಾರವಾಹಿ ಚಿತ್ರೀಕರಿಸುತ್ತಿದ್ದಾಗ ಸ್ಟುಡಿಯೊಗೆ ಬೆಂಕಿ ಬಿದ್ದಿತ್ತು. ನಮ್ಮ ಭಾಗದಲ್ಲಿ ಈ ಹಿಂದಿನಿಂದಲೂ ಟಿಪ್ಪು ಬಗ್ಗೆ ಟಾಬ್ಯೋ (taboo) ಇದೆ’ ಎಂದರು.

ನಮ್ಮ ಸಂಸ್ಥಾನದ ಆಡಳಿತವು ಚಿತ್ರದುರ್ಗ ಹಾಗೂ ಶಿರಾದಿಂದ ಈಚೆಗೆ ಇರಲಿಲ್ಲ. ಇದಕ್ಕೆ ಟಿಪ್ಪು ಜೊತೆಗಿನ ಹೋರಾಟ ಮತ್ತಿತರ ಕಾರಣಗಳಿದ್ದವು. ಹೀಗಾಗಿ, ಹಿಂದೊಮ್ಮೆ ಚುನಾವಣಾ ಪ್ರಚಾರಕ್ಕೆ ನಾವು ಬಂದ ಸಂದರ್ಭದಲ್ಲೂ, ಶಿರಾದತ್ತ ಹೋಗುವುದು ಬೇಡ ಎಂದು ಹಿರಿಯರು ಸಲಹೆ ನೀಡಿದ್ದರು ಎಂದು ಸ್ಮರಿಸಿಕೊಂಡರು.

ಮುಮ್ಮಡಿ ಹಾಗೂ ನಾಲ್ವಡಿ ಒಡೆಯರ ಕಾಲದಲ್ಲಿ ಕಲೆ–ಸಂಸ್ಕೃತಿಗೆ ಪ್ರೋತ್ಸಾಹ, ಶಿಕ್ಷಣ, ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಹೀಗಾಗಿ, ಉತ್ತರ ಕರ್ನಾಟಕಕ್ಕಿಂತ ಮೈಸೂರು ಭಾಗದಲ್ಲಿ ಶಿಕ್ಷಣ ಮಟ್ಟ ಚೆನ್ನಾಗಿದೆ. ಆದರೆ, ನಮಗಿಂತ (ಮೈಸೂರು ಪ್ರಾಂತ್ಯ) ಉತ್ತರ ಕರ್ನಾಟಕದ ಜನತೆ ಶ್ರಮಿಕರು ಎಂದು ಪತಿ, ಶ್ರೀಕಂಠ ದತ್ತ ಒಡೆಯರ್ ಬಹಳಷ್ಟು ಶ್ಲಾಘಿಸುತ್ತಿದ್ದರು. ಅವರಿಗೆ ಬೆಳಗಾವಿ ಮತ್ತು ದಾಂಡೇಲಿ ಬಗ್ಗೆ ತುಂಬಾ ಒಲವಿತ್ತು. ಈ ಭಾಗವು ಮುಂಬಯಿ ಪ್ರಾಂತ್ಯಕ್ಕೆ ಸೇರಿದ್ದ ಕಾರಣ, ನಮಗೆ ಹೆಚ್ಚಿನ ಒಡನಾಟ ಇರಲಿಲ್ಲ ಎಂದು ಮೆಲುಕು ಹಾಕಿದರು.

ನಮ್ಮ ಸಾಂಪ್ರದಾಯಿಕ ಆಚರಣೆಗಳು ಪುರುಷ ಪ್ರಧಾನ ಆಗಿರಬಹದು. ಆದರೆ, ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ. ಅದನ್ನು ಬಳಸಿಕೊಂಡು ಮಹಿಳೆಯರು ಮುಂದೆ ಬರಬೇಕು ಎಂದು ಮಹಿಳಾ ಸಬಲೀಕರಣ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಜಿ.ಎಚ್.ಕಾಲೇಜಿಗೆ 1964ರಲ್ಲಿ, ಅಂದಿನ ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಜಯ ಚಾಮರಾಜೇಂದ್ರ ಒಡೆಯರ್ ಅಡಿಪಾಯ ಹಾಕಿದ್ದರು ಎಂದು ಕೆಎಲ್‌ಇ ಸಂಸ್ಥೆಯ ಉಪಾಧ್ಯಕ್ಷ ಎಂ.ಸಿ. ಕೊಳ್ಳಿ ಅವರು ಪ್ರಮೋದಾ ದೇವಿಗೆ ವಿವರಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !