ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ವೃತ್ತಿರಂಗಭೂಮಿಯ ಕಡೆಗಣನೆ

ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ: ಚಿಂದೋಡಿ ಶಂಭುಲಿಂಗಪ್ಪ ಹೇಳಿಕೆ
Last Updated 26 ನವೆಂಬರ್ 2022, 14:40 IST
ಅಕ್ಷರ ಗಾತ್ರ

ಹಾವೇರಿ: ಮಠಮಾನ್ಯಗಳಿಗೆ ಯಾವುದೇ ದಾಖಲೆ ಕೇಳದೇ ಲಕ್ಷಾಂತರ ರೂಪಾಯಿ ಅನುದಾನ ನೀಡುವ ಸರ್ಕಾರ, ವೃತ್ತಿ ರಂಗಭೂಮಿಯನ್ನು ಕಡೆಗಣಿಸುತ್ತಿದೆ. ಕಲಾವಿದರನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಬೇಕು ಎಂದು ದಾವಣಗೆರೆಯ ಶ್ರೀಗುರು ವಾದ್ಯವೃಂದದ ಅಧ್ಯಕ್ಷ ಚಿಂದೋಡಿ ಶಂಭುಲಿಂಗಪ್ಪ ಆಗ್ರಹಿಸಿದರು.

ಇಲ್ಲಿನ ಹೆಗ್ಗೇರಿ ರಸ್ತೆಯಲ್ಲಿನ ಕೆ.ಬಿ.ಆರ್. ರಂಗಮಂದಿರದಲ್ಲಿ ಕನ್ನಡ ಕಲಾವಿದರ ಸಂಘ, ಶ್ರೀಗುರು ವಾದ್ಯವೃಂದ ದಾವಣಗೆರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ನಡೆದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೃತ್ತಿ ರಂಗಭೂಮಿ ಕಂಪನಿಗಳಿಗೆ ನೀಡುವ ಪ್ರೋತ್ಸಾಹಧನವನ್ನು ಪಾರದರ್ಶಕ ಮಾನದಂಡಗಳನ್ನು ರೂಪಿಸಿ ಅರ್ಹ ಕಂಪನಿಗಳಿಗೆ ನೀಡಬೇಕು. ಅನರ್ಹ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಬೇಕು. ಸದ್ಯ ಸರ್ಕಾರದಿಂದ 25 ನಾಟಕ ಕಂಪನಿಗಳಿಗೆ ಸರ್ಕಾರವು ತಲಾ ₹10 ಲಕ್ಷ ಪ್ರೋತ್ಸಾಹಧನ ನೀಡುತ್ತಿದೆ. ಆದರೆ ಇದಕ್ಕೆ ಅಫಿಡವಿಟ್ ಕೇಳುತ್ತಾರೆ. ವರ್ಷವಿಡೀ ರಂಗಭೂಮಿ ಸೇವೆ ಮಾಡುವ ಕಂಪನಿಗಳಿಗೆ ಅನ್ಯಾಯವಾಗುತ್ತಿದೆ ಎಂದರು.

ಸರ್ಕಾರದ ಪ್ರೋತ್ಸಾಹಧನ ಅರ್ಹರಿಗೆ ತಲುಪಬೇಕು. ಇದಕ್ಕಾಗಿ ಪಾರದರ್ಶಕ, ಪ್ರಾಮಾಣಿಕ ಸಮಿತಿ ರಚಿಸಿ ಪರಿಶೀಲಿಸಿ ಅರ್ಹರಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಪ್ರಾಕೃತಿಕ ವಿಕೋಪ, ಡಿಜಿಟಲ್ ಮಾಧ್ಯಮಗಳ ಹಾವಳಿಯಿಂದ ಈಗಾಗಲೇ ಕಂಪನಿ ನಾಟಕಗಳ ಪ್ರದರ್ಶನಕ್ಕೆ ಜನರು ಕಡಿಮೆಯಾಗಿದ್ದಾರೆ. ಸಾಲ ಮಾಡಿ ಕಂಪನಿಯನ್ನು ನಡೆಸುವ ಪರಿಸ್ಥಿತಿ ಬಂದಿದೆ. ಇದನ್ನೆಲ್ಲಾ ಸರ್ಕಾರವು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಕೆಬಿಆರ್ ಡ್ರಾಮಾ ಕಂಪನಿ ಮಾಲೀಕರಾದ ಚಿಂದೋಡಿ ಶ್ರೀಕಂಠೇಶ್ ಮಾತನಾಡಿ, ನಮ್ಮ ಡ್ರಾಮಾ ಕಂಪನಿಯಲ್ಲಿ ಒಳ್ಳೆಯ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು, ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಕುರುವತ್ತೇರ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ನಾರಾಯಣ ಹೆಗಡೆ, ಚಿಂದೋಡಿ ಕಿಶೋರಕುಮಾರ ಇದ್ದರು.

ಕೆಬಿಆರ್ ಡ್ರಾಮಾ ಕಂಪನಿಯಲ್ಲಿ ನ.27 ಹಾಗೂ 28ರಂದು ಬೆಳಗ್ಗೆ 2.30ಕ್ಕೆ ಮತ್ತು ಸಂಜೆ 6.15ಕ್ಕೆ ‘ಖಾನಾವಳಿ ಚೆನ್ನಿ’ ಎಂಬ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದ್ದು, ಕಿರಿತೆರೆ ಕಲಾವಿದೆ ಚಂದ್ರಿಕಾ (ಪ್ರಿಯಾಂಕಾ) ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕೆಬಿಆರ್ ಡ್ರಾಮಾ ಕಂಪನಿ ಮಾಲೀಕರಾದ ಚಿಂದೋಡಿ ಶಂಭುಲಿಂಗಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT