ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ.30ರವರೆಗೆ ರಾತ್ರಿ ಕರ್ಫ್ಯೂ ಜಾರಿ

ಮೊಹರಂ, ಗಣೇಶ ಚತುರ್ಥಿಗಳಲ್ಲಿ ಮೆರವಣಿಗೆ ನಿಷೇಧ: ಜಿಲ್ಲಾಧಿಕಾರಿ ಆದೇಶ
Last Updated 15 ಆಗಸ್ಟ್ 2021, 15:51 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಹಿನ್ನೆಲೆಯಲ್ಲಿ ಮುಂಬರುವ ಮೊಹರಂ ಮತ್ತು ಗಣೇಶ ಚತುರ್ಥಿ ಹಬ್ಬಗಳ ಆಚರಣೆಗಾಗಿ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಇತರ ಒಗ್ಗೂಡುವಿಕೆ ಮತ್ತು ಬೃಹತ್ ಸಭೆ-ಸಮಾರಂಭಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಆಗಸ್ಟ್ 30ರವರೆಗೆ ರಾತ್ರಿ 9 ರಿಂದ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಜಾತ್ರೆಗಳು, ದೇವಾಲಯದ ಹಬ್ಬಗಳು, ಮೆರವಣಿಗೆ ಮತ್ತು ಸಭೆ-ಸಮಾರಂಭಗಳಿಗೆ ಅನುಮತಿ ಇರುವುದಿಲ್ಲ.

ವಿವಿಧ ಮೆರವಣಿಗೆ ಹಾಗೂ ಜನರ ಒಗ್ಗೂಡುವಿಕೆಯನ್ನು ಹಬ್ಬಗಳ ಸಂದರ್ಭದಲ್ಲಿ ಯಾವುದೇ ವಿಧದ ಮೆರವಣಿಗೆಯನ್ನು ಮಾಡತಕ್ಕದ್ದಲ್ಲ. ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ಮೊಹರಂ ಮತ್ತು ಗಣೇಶೋತ್ಸವ ಹಬ್ಬವನ್ನು ಅದೇ ರೀತಿಯಿಂದಲೇ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡಬೇಕು.

ಮಾಸ್ಕ್ ಧಾರಣೆ, ವ್ಯಕ್ತಿಗತ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸದೇ ಓಡಾಡುವವರಿಗೆ ನಗರ ಪ್ರದೇಶಗಳಲ್ಲಿ ₹250 ಹಾಗೂ ಇತರೆ ಪ್ರದೇಶಗಳಲ್ಲಿ ₹100 ದಂಡ ವಿಧಿಸಲಾಗುವುದು.

ರಾತ್ರಿ ಕರ್ಫ್ಯೂ ಮಾರ್ಗಸೂಚಿಗಳು:

ಸಾರ್ವಜನಿಕರ ಓಡಾಟವನ್ನು ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಅತ್ಯವಶ್ಯ ಹಾಗೂ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಸಂಪೂರ್ಣವಾಗಿ ನಿಷೇಧಿಸಿದೆ.ಔಷಧ ಮಳಿಗೆಗಳು ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅತ್ಯಾವಶ್ಯಕ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ. ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಿದೆ.

ಖಾಲಿ ವಾಹನಗಳು ಸೇರಿದಂತೆ ಟ್ರಕ್, ಸರಕು ಸಾಗಣೆ ವಾಹನಗಳು ಅಥವಾ ಯಾವುದೇ ಸರಕು ಸಾಗಣೆ ವಾಹನಗಳ ಮೂಲಕ ಎಲ್ಲಾ ಬಗೆಯ ಸರಕುಗಳನ್ನು ಸಾಗಿಸುವುದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.ಬಸ್ಸು ಮತ್ತು ರೈಲು ಪ್ರಯಾಣಕ್ಕೆ ಅನುಮತಿಸಿದೆ.

ಮೊಹರಂ ಮಾರ್ಗಸೂಚಿಗಳು:

ಸಾರ್ವಜನಿಕ ಸ್ಥಳಗಳಲ್ಲಿ ಅಲಂಗಳನ್ನು, ಪಂಜಾವನ್ನು ಸ್ಥಾಪಿಸುವುದನ್ನು ಹಾಗೂ ತಾಜಿಯಾವನ್ನು ನಿರ್ಬಂಧಿಸಲಾಗಿದೆ. ಆ.20ರವರಗೆ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ.ಖಬರಸ್ಥಾನ್ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಯಾವುದೇ ತರಹದ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದೆ.

ಗಣೇಶ ಹಬ್ಬ ಮಾರ್ಗಸೂಚಿಗಳು:

ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಆಚರಿಸಬೇಕು. ಇದನ್ನು ಹೊರತುಪಡಿಸಿ, ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಹೊರಾಂಗಣಗಳಲ್ಲಿ ಚಪ್ಪರ ಪಂಡಾಲ್, ಶಾಮಿಯಾನ ವೇದಿಕೆಗಳನ್ನು ನಿರ್ಮಿಸಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ.

ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ರೀತಿಯ ಮೆರವಣಿಗೆ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಪಾರಂಪರಿಕ ಗೌರಿ-ಗಣೇಶ ಮೂರ್ತಿಯನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸಬೇಕು.ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT