ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ನಗರದಲ್ಲಿ ಕಣ್ತೆರೆಯದ ಸಿಸಿಟಿವಿ ಕ್ಯಾಮೆರಾ

Published 4 ಜುಲೈ 2023, 4:54 IST
Last Updated 4 ಜುಲೈ 2023, 4:54 IST
ಅಕ್ಷರ ಗಾತ್ರ

ಸಿದ್ದು ಆರ್‌.ಜಿ.ಹಳ್ಳಿ

ಹಾವೇರಿ: ಅಪರಾಧ ಚಟುವಟಿಕೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲು ಹಾಗೂ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಅವಶ್ಯವಿದ್ದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ನಗರದಲ್ಲಿ ನನೆಗುದಿಗೆ ಬಿದ್ದಿದೆ. ಆಡಳಿತಾತ್ಮಕ ಮಂಜೂರಾತಿ ನೀಡಿ, 2 ವರ್ಷ ಕಳೆದರೂ ಸಿಸಿಟಿವಿ ಕ್ಯಾಮೆರಾಗಳು ಇನ್ನೂ ಕಣ್ಣು ಬಿಟ್ಟಿಲ್ಲ.

ಸರಗಳ್ಳತನ, ಮನೆಗಳ್ಳತನ, ದರೋಡೆ ಮತ್ತು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್‌
ಗಳನ್ನು ಪತ್ತೆ ಹಚ್ಚಲು ಅವಶ್ಯವಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಹಾವೇರಿ ನಗರದ ಆಯ್ದ ಭಾಗಗಳಲ್ಲಿ ಅಳವಡಿಸಲು ಹಾವೇರಿ ನಗರಸಭೆಯ ವಿಶೇಷ ನಿಧಿಯಿಂದ ₹25 ಲಕ್ಷ ವೆಚ್ಚದ ಕ್ರಿಯಾ ಯೋಜನೆಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. ನಂತರ 2021ರ ಸೆಪ್ಟೆಂಬರ್‌ನಲ್ಲಿ ಜಿಲ್ಲಾಧಿಕಾರಿಗಳು ಕೂಡ ಆಡಳಿತಾತ್ಮಕ ಮಂಜೂರಾತಿ ನೀಡಿದ್ದರು.

ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಜವಾಬ್ದಾರಿಯನ್ನು 2022ರ ಜೂನ್‌ನಲ್ಲಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್‌) ಅವರಿಗೆ ನೀಡಲಾಗಿತ್ತು. ಕಿಯೋನಿಕ್ಸ್‌ ಸಂಸ್ಥೆಯು ಇಬ್ಬರು ಗುತ್ತಿಗೆದಾರರಿಗೆ ಟೆಂಡರ್‌ ನೀಡಿತ್ತು. ಇದುವರೆಗೆ ಕೇವಲ 6 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಬಾಕಿ ಕ್ಯಾಮೆರಾಗಳ ಅಳವಡಿಸುವ ಕಾರ್ಯ ನನೆಗುದಿಗೆ ಬಿದ್ದಿದೆ. 

ಹಾಳಾದ ಸಿಸಿಟಿವಿ ಕ್ಯಾಮೆರಾ:

2016–17ರಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ನಗರದಲ್ಲಿ 38 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಹೊಸಮನಿ ಸಿದ್ದಪ್ಪ ವೃತ್ತ, ಜೆ.ಪಿ.ವೃತ್ತ, ಜೆ.ಎಚ್‌.ಪಟೇಲ್‌ ವೃತ್ತ, ಬಸ್‌ ನಿಲ್ದಾಣ ಸೇರಿದಂತೆ ರಾಣೆಬೆನ್ನೂರು, ಹುಬ್ಬಳ್ಳಿ, ಗುತ್ತಲ ಕಡೆಯಿಂದ ಬರುವ ಬೈಪಾಸ್‌ಗಳಲ್ಲಿ ಕ್ಯಾಮೆರಾ ಕಣ್ಗಾವಲು ಇಡಲಾಗಿತ್ತು. ಸೂಕ್ತ ನಿರ್ವಹಣೆಯಿಲ್ಲದೆ ಬಹುತೇಕ ಕ್ಯಾಮೆರಾಗಳು ಹಾಳಾಗಿವೆ. 

ಸಮ್ಮೇಳನದಲ್ಲೂ ಕಾಣದ ಕ್ಯಾಮೆರಾ

2023ರ ಜನವರಿ 6ರಿಂದ 8ರವರೆಗೆ ಹಾವೇರಿ ನಗರದಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದರು. ನಗರದ ರಸ್ತೆಗಳು ತುಂಬಿ ತುಳುಕಿದ್ದವು. ಈ ಸಂದರ್ಭದಲ್ಲಿ ಕಳವು, ಗಲಾಟೆ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ ಎಂದು ಅಂದಿನ ಎಸ್ಪಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. 

ಸಾಹಿತ್ಯ ಸಮ್ಮೇಳನಕ್ಕೆ ಬಿಡುಗಡೆಗೊಂಡ ಅನುದಾನದಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಇತರೆ ಉಪಕರಣಗಳನ್ನು ಖರೀದಿಸಲು, ಮೂರು ಮಳಿಗೆದಾರರಿಂದ ದರಪಟ್ಟಿಗಳನ್ನು ಪಡೆದು, ₹29.36 ಲಕ್ಷ  ಮೊತ್ತದ ಕ್ರಿಯಾಯೋಜನೆಯನ್ನು ಪೊಲೀಸ್‌ ಇಲಾಖೆ ತಯಾರಿಸಿ, ಆಡಳಿತಾತ್ಮಕ ಅನುಮೋದನೆಗೆ ಜಿಲ್ಲಾಧಿಕಾರಿಗೆ ಸಲ್ಲಿಸಿತ್ತು. ಕ್ಯಾಮೆರಾ ಹಾಕಲು ಬಂದಿದ್ದ ಏಜೆನ್ಸಿಯೊಂದು ಬರಿಗೈಲಿ ವಾಪಸ್‌ ಹೋಯಿತು. ಸಮ್ಮೇಳನಕ್ಕೂ ಕ್ಯಾಮೆರಾ ಭಾಗ್ಯ ಸಿಗಲಿಲ್ಲ. 

ಮನೆಗಳ್ಳತನ ಹೆಚ್ಚಳ

‘ಹಾವೇರಿ ನಗರದಲ್ಲಿ ನಡೆದ ಸರಗಳ್ಳತನ ಪ್ರಕರಣಗಳ ಆರೋಪಿಗಳು ಇದುವರೆಗೂ ಪತ್ತೆಯಾಗಿಲ್ಲ. ಹಾಡುಹಗಲೇ ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ನಗರದ ಹೊರವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣಗಳು ಆಗಾಗ್ಗೆ ನಡೆಯುತ್ತಲಿವೆ. ಈ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಆರೋಪಿಗಳನ್ನೂ ಪತ್ತೆ ಹಚ್ಚಳು ಸಿಸಿಟಿವಿ ಕ್ಯಾಮೆರಾಗಳ ಅತಿ ಅವಶ್ಯ. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ನಗರಸಭೆ ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮತ್ತು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್‌. ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT