ಭಾನುವಾರ, ನವೆಂಬರ್ 28, 2021
20 °C

ಹೇಳಿಕೊಳ್ಳಲು ಸಿಎಂ ಬಳಿ ಅಭಿವೃದ್ಧಿ ಕಾರ್ಯಗಳಿಲ್ಲ: ಹರಿಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ‘2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ರೈತರ ಮೇಲೆ ಗೋಲಿಬಾರ್ ನಡೆದಿತ್ತು. ಇದು ಬಿಜೆಪಿ ಈ ಪವಿತ್ರ ನೆಲಕ್ಕೆ ಮಾಡಿದ ಅಪಮಾನ’ ಎಂದು ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದ್ದ ಅವರು ಭಾನುವಾರ ಇಲ್ಲಿನ ಪ್ರಚಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಹಾನಗಲ್ ಕಾಂಗ್ರೆಸ್ ಪಕ್ಷಕ್ಕೆ ಪವಿತ್ರ ನೆಲ. ಇಲ್ಲಿ ಮರು ಚುನಾವಣೆ ಆಕಸ್ಮಿಕವಾಗಿ ಬಂದಿದೆ. ಸಿಎಂ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಕೆಲವೇ ದಿನಗಳಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ನೂರು ದಿನ ಪೂರೈಸಲಿದೆ. ಆದರೆ ಅವರ ಬಳಿ ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಹೀಗಾಗಿ ಜನಸ್ಪಂದನೆ ಸಿಗದಂತಾಗಿದೆ’ ಎಂದರು.

ಕಾಂಗ್ರೆಸ್‍ನಿಂದ ಉದ್ಯೋಗ:

‘ಇದು ರೈತರು, ಬಡವರ ಪರವಾದ ಸರ್ಕಾರವಲ್ಲ. ಬಡವರು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗುವಂಥ ಪರಿಸ್ಥಿತಿ ಬರತಿದೆ. ಆಹಾರ ಭದ್ರತೆ ಕಾನೂನು ತಂದವರು ಡಾ.ಮನಮೋಹನ ಸಿಂಗ್ ಮತ್ತು ಸೋನಿಯಾ ಗಾಂಧಿ. ಕಾಂಗ್ರೆಸ್ ಸರಕಾರ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಉದ್ಯೋಗ ಸಿಗತಿದೆ ಹೊರತು ಬಿಜೆಪಿಯಿಂದಲ್ಲ’ ಎಂದರು.

ಹಾನಗಲ್‍ನಲ್ಲಿ ನಮ್ಮ ಅಭ್ಯರ್ಥಿ ಶ್ರೀನಿವಾಸ ಮಾನೆ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಜನರ ಆಗು-ಹೋಗುಗಳಲ್ಲಿ ಭಾಗಿಗಳಾಗಿದ್ದಾರೆ. ಹೀಗಾಗಿ ಅವರು ಚುನಾವಣೆಯಲ್ಲಿ ಗೆಲ್ಲುವುದು ಸ್ಪಷ್ಟವಾಗಿದೆ ಎಂದರು.

ಸಲೀಂ ಅಹ್ಮದ್, ಮಾನೆ ಪಾದಯಾತ್ರೆ:

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಭಾನುವಾರ ಸಂಜೆ ಹಾನಗಲ್ ನಗರದಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ, ಬಿರುಸಿನ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಶ್ರೀನಿವಾಸ ಮಾನೆ ಪರ ಕಾರ್ಯಕರ್ತರು ಘೋಷಣೆ ಕೂಗಿದರು. ಪುರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಮತಯಾಚನೆ ಕೈಗೊಳ್ಳಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು