ಮೀನು ಕೃಷಿ ಬಿಟ್ಟು ಕೂಲಿಗೆ ಹೊರಟ ಮೀನುಗಾರರು!

ಶುಕ್ರವಾರ, ಜೂಲೈ 19, 2019
26 °C
ಬರಿದಾದ ಕೆರೆಗಳು, ಸಂಕಷ್ಟದಲ್ಲಿ 25 ಸಾವಿರ ಮಂದಿ

ಮೀನು ಕೃಷಿ ಬಿಟ್ಟು ಕೂಲಿಗೆ ಹೊರಟ ಮೀನುಗಾರರು!

Published:
Updated:
Prajavani

ಹಾವೇರಿ: ಮಳೆ ಅಭಾವದಿಂದ ಜಿಲ್ಲೆಯ ಎಲ್ಲ ಕೆರೆ–ಕಟ್ಟೆಗಳ ಒಡಲು ಬರಿದಾಗಿದ್ದು, ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ಸುಮಾರು 25 ಸಾವಿರ ಮಂದಿಯ ಬದುಕು ಬೀದಿಗೆ ಬಿದ್ದಿದೆ. ಕೆಲವರು ಮೀನು ಕೃಷಿ ಬಿಟ್ಟು ಹಣ್ಣು–ತರಕಾರಿ ಮಾರುತ್ತಿದ್ದರೆ, ಇನ್ನೂ ಕೆಲವರು ಕೆಲಸ ಅರಸಿ ಗೋವಾ ಹಾಗೂ ಕೇರಳ ರಾಜ್ಯಗಳಿಗೆ ತೆರಳಿದ್ದಾರೆ!

ಜಿಲ್ಲೆಯಲ್ಲಿ ಒಟ್ಟು 8,833 ಹೆಕ್ಟೇರ್ ವಿಸ್ತೀರ್ಣದ ಜಲಸಂಪನ್ಮೂಲವಿದ್ದು, ಉತ್ತಮ ಮಳೆಯಾದಲ್ಲಿ ಪ್ರತಿವರ್ಷ 80 ಲಕ್ಷದಿಂದ 90 ಲಕ್ಷ ಮೀನು ಮರಿಗಳ ಬೇಡಿಕೆ ಇರುತ್ತದೆ.‌ ಈ ಮೂಲಕ ಉತ್ತರ ಕರ್ನಾಟಕದಲ್ಲಿಯೇ ಮೀನುಗಾರಿಕೆ ಉತ್ಪಾದನೆಗೆ ಹೆಚ್ಚು ಅವಕಾಶವಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಹಾವೇರಿ ಪಾತ್ರವಾಗುತ್ತದೆ. ಆದರೆ, ಈ ವರ್ಷ ಜುಲೈ 2ನೇ ವಾರ ಶುರುವಾದರೂ ವಾಡಿಕೆಯ ಅರ್ಧದಷ್ಟೂ ಮಳೆಯಾಗಿಲ್ಲ. ಈ ಕಾರಣದಿಂದ ಮೀನು ಮರಿಗಳ ಬಿತ್ತನೆ ಕಾರ್ಯವೇ ನಡೆದಿಲ್ಲ.

ಜಿಲ್ಲೆಯಲ್ಲಿ 31 ಮೀನುಗಾರರ ಸಹಕಾರ ಸಂಘಗಳಿವೆ. 4,957 ವೃತ್ತಿಪರ ಮೀನುಗಾರರು ಆ ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದಾರೆ. ಅವರಷ್ಟೇ ಅಲ್ಲದೇ, ಇನ್ನೂ 20 ಸಾವಿರಕ್ಕೂ ಹೆಚ್ಚು ಅರೆಕಾಲಿಕ ಮೀನುಗಾರರು ಇದೇ ವೃತ್ತಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. 

ವೃತ್ತಿಪರ ಮೀನುಗಾರರು ಪ್ರತಿ ಐದು ವರ್ಷಕ್ಕೊಮ್ಮೆ ಕೆರೆ–ಕಟ್ಟೆಗಳ ಟೆಂಡರ್ ಅವಧಿ ನವೀಕರಿಸಿಕೊಳ್ಳಬೇಕು. ಆದರೆ, ಈ ಬಾರಿ ಮೀನು ಕೃಷಿ ನಡೆಯದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂಘಗಳು, ‘ನವೀಕರಣ ಪ್ರಕ್ರಿಯೆಗೆ ಇದೊಂದು ಬಾರಿ ವಿನಾಯ್ತಿ ನೀಡಿ’ ಎಂದು ಸರ್ಕಾರಕ್ಕೆ ಮನವಿ ಮಾಡಿವೆ. ಆದರೆ, ಯಾವುದೇ ಪ್ರಯೋಜನ ಸಿಕ್ಕಿಲ್ಲ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕೆರಿಮತ್ತಿಹಳ್ಳಿ ಮೀನುಗಾರಿಕೆ ಅಭಿವೃದ್ಧಿ ಸಹಕಾರ ಸಂಘದ ಲಕ್ಷ್ಮಣ ಬರ್ಮಪ್ಪ ಇಳಿಗೇರ್, ‘ವರ್ಷದಲ್ಲಿ 6 ತಿಂಗಳು ನೀರು ಸಂಗ್ರಹವಾಗಿದ್ದರೂ ಮೀನುಗಾರಿಕೆ ಮಾಡಬಹುದು. ಇಲ್ಲದಿದ್ದರೆ ನಮಗೆ ದೇವರೇ ದಿಕ್ಕು. ಕಳೆದ ವರ್ಷ ಹೆಗ್ಗೇರಿ ಕೆರೆಯಲ್ಲಿ ಹೂಳು ತೆಗೆಸಿದಾಗ ನೀರು ಸಂಗ್ರಹವಾಗಿತ್ತು. ಆಗ ₹ 1 ಲಕ್ಷ ಖರ್ಚು ಮಾಡಿ ಮೀನು ಮರಿಗಳನ್ನು ಬಿಟ್ಟೆ. ಆದರೆ, ಕೆಲವೇ ದಿನಗಳಲ್ಲಿ ನೀರು ಬತ್ತಿದ್ದರಿಂದ ವಿಪರೀತ ನಷ್ಟವಾಯಿತು’ ಎಂದು ದುಗಡ ತೋಡಿಕೊಂಡರು.

‘ಮಳೆ ಕೊರತೆಯ ಕಾರಣ 4 ವರ್ಷಗಳಿಂದಲೂ ಮೀನು ಕೃಷಿ ಸರಿಯಾಗಿಲ್ಲ. ಉತ್ಪಾದನೆ ಕುಂಠಿತವಾಗಿದೆ. ನಮ್ಮ ಸಂಘದ ಸದಸ್ಯರೇ ಈಗ ಗಾರೆ ಕೆಲಸಕ್ಕಾಗಿ ಮಂಗಳೂರಿಗೆ ತೆರಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ₹ 20 ಸಾವಿರ ಕಟ್ಟಿ ಗುತ್ತಿಗೆ ನವೀಕರಿಸಿಕೊಳ್ಳುವಂತೆ ಮೀನುಗಾರಿಕೆ ಇಲಾಖೆಯಿಂದ ನೋಟಿಸ್ ಬಂದಿದೆ. ಏನು ಮಾಡಬೇಕು ಗೊತ್ತಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.   

ಹರಾಜಿನಲ್ಲಿ ಖರೀದಿಸಿದವರ ಪಾಡು: 2018ರ ಅಕ್ಟೋಬರ್‌ನಲ್ಲಿ ಮೀನು ಸಾಕಣೆಗಾಗಿ ಕೆರೆಗಳ ಹರಾಜು ಪ್ರಕ್ರಿಯೆ ನಡೆದಿತ್ತು. ಸಂಘ-ಸಂಸ್ಥೆಗಳು ಗುತ್ತಿಗೆ ಪಡೆಯದೆ ಉಳಿದ ಕೆರೆಗಳನ್ನು, ಸಾವಿರಾರು ಮೀನುಗಾರರು ಹರಾಜು ಮೂಲಕ ಪಡೆದುಕೊಂಡರು. ಆದರೆ, ಅವರೂ ಈಗ ನೀರು ಯಾವಾಗ ತುಂಬುತ್ತದೆ ಎಂಬುದನ್ನೇ ಎದುರು ನೋಡುತ್ತಿದ್ದಾರೆ. ಈ ಬಾರಿ ಮೀನುಗಾರಿಕೆಯಲ್ಲಿ ಅವರದ್ದೂ ಶೂನ್ಯ ಸಂಪಾದನೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !