ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕೆರೆಗಳು ಭಣ ಭಣ; ಜನ–ಜಾನುವಾರು ಹೈರಾಣ

ಬಿರುಕು ಬಿಟ್ಟ ಕೆರೆಗಳ ಒಡಲು * ಅಕ್ಕಮಹಾದೇವಿ ಹೊಂಡ ಒಂದೇ ಗತಿ * ಕೃಷಿ ಚಟುವಟಿಕೆ ಪ್ರಾರಂಭಿಸದ ಅನ್ನದಾತ
Last Updated 16 ಜೂನ್ 2019, 19:30 IST
ಅಕ್ಷರ ಗಾತ್ರ

ಹಾವೇರಿ: ಒಂದೆಡೆ ಜನ–ಜಾನುವಾರುಗಳು ಕುಡಿಯುವುದಕ್ಕೂ ನೀರಿಲ್ಲದೆ ಪರಿತಪಿಸುತ್ತಿದ್ದರೆ, ಮತ್ತೊಂದೆಡೆ ಅನ್ನದಾತರ ಪ್ರಮುಖ ಜಲ ಜೀವನಾಡಿಯಾಗಬೇಕಿದ್ದ ಕೆರೆಗಳ ಮಡಿಲು ಬಿರುಕು ಬಿಟ್ಟಿದೆ. ನುಂಗಣ್ಣರ ಹಾವಳಿ, ಮಳೆರಾಯನ ಅವಕೃಪೆ, ನೀರು ತುಂಬಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ.. ಹೀಗೆ ಹತ್ತು–ಹಲವು ಕಾರಣಗಳಿಂದ ಹಾವೇರಿ ನಗರದ ಅಷ್ಟೂ ಕೆರೆಗಳು ಮರುಭೂಮಿಯ ರೂಪತಾಳಿ ಮಲಗಿವೆ...

ಈ ಹೊತ್ತಿಗಾಗಲೇ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಬೇಕಿದ್ದ ರೈತರು, ನೀರಿನ ಅಭಾವದಿಂದ ತಲೆ ಮೇಲೆ ಕೈ ಹೊತ್ತು ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ಮುಖ ಮಾಡಿ ಕೂತಿದ್ದಾರೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದ್ದು, ನಗರದಲ್ಲಿರುವ 400ಕ್ಕೂ ಹೆಚ್ಚು ಬೋರ್‌ವೆಲ್‌ಗಳೂ ನೀರು ಚಿಮ್ಮಿಸದೆ ಬಂದ್ ಆಗಿವೆ.

ಹೆಗ್ಗೇರಿ ಕೆರೆ,ಅಕ್ಕ ಮಹಾದೇವಿ ಹೊಂಡ, ಇಜಾರಿಲಕ್ಮಾಪುರದಲ್ಲಿರುವ ದುಂಡಿ ಬಸವೇಶ್ವರನ ಕೆರೆ,ಮುಲ್ಲಾನಾ ಕೆರೆ, ನಾಗೇಂದ್ರನಮಟ್ಟಿಯಲ್ಲಿರುವ ಹಾಲನ ಕೆರೆ ಹಾಗೂ ಬಸವನದೇವರ ಕೆರೆ ನಗರದ ಪ್ರಮುಖ ಜಲಮೂಲಗಳು. ಆದರೆ, ಸದ್ಯ ಜನರ ಬಳಕೆಗೆ ಲಭ್ಯವಿರುವುದುಅಕ್ಕಮಹಾದೇವಿ ಹೊಂಡ ಮಾತ್ರ.

ನಗರಕ್ಕೆ ಹೊಂದಿಕೊಂಡಿರುವ ದೇವಗಿರಿ ಗ್ರಾಮದಲ್ಲೂ ಚೌಡವ್ವನ ಕೆರೆ, ಹೊರಗಿನ ಕೆರೆ, ನಡುವಿನ ಕೆರೆ, ಗುಮ್ಮನಕಟ್ಟೆ ಕೆರೆ, ರಾಮನಕಟ್ಟೆ ಕೆರೆ, ಸಿಡ್ಲಿಗಟ್ಟೆ ಕೆರೆ... ಹೀಗೆ ಏಳೆಂಟು ಸಣ್ಣಪುಟ್ಟ ಕೆರೆಗಳಿವೆ. ಅವೂ ನೀರಿಲ್ಲದೆ ಆಟದ ಮೈದಾನವಾಗಿಯೋ, ರೈತರು ಹುಲ್ಲಿನ ಬಣವೆಗಳನ್ನು ಹಾಕಿಕೊಳ್ಳುವ ಸ್ಥಳಗಳಾಗಿಯೋ ಮಾರ್ಪಟ್ಟಿವೆ.

ದೊಡ್ಡ ಕೆರೆಯಲ್ಲೂ ನೀರಿಲ್ಲ:

ದಾವಣಗೆರೆ ಜಿಲ್ಲೆಯ ಸೂಳೆಕೆರೆ ಬಿಟ್ಟರೆ ರಾಜ್ಯದ 2ನೇ ಅತಿ ದೊಡ್ಡ ಕೆರೆ ಎಂಬ ಗರಿಮೆ ಹೊತ್ತಿರುವ ಹೆಗ್ಗೇರಿ ಕೆರೆಯೂ ಹಾವೇರಿ ನಗರದಲ್ಲಿದೆ. 660 ಎಕರೆ ವಿಸ್ತೀರ್ಣವುಳ್ಳ ಈ ಕೆರೆ ಈಗ ಹನಿ ನೀರಿಲ್ಲದೆ ಭಣಗುಡುತ್ತಿದೆ.

‘ಪೂರ್ವಜರ ಕಾಲದಿಂದಲೂ ಕೆರಿಮತ್ತಿಹಳ್ಳಿ, ಕನಕಾಪುರ, ಆಲದಮಟ್ಟಿ,ಹೊಸಳ್ಳಿ, ಗೌರಾಪುರ, ಚಿಕ್ಕಲಿಂಗದಹಳ್ಳಿ ಗ್ರಾಮಗಳು ಸೇರಿದಂತೆ ಸುತ್ತಮುತ್ತಲ 2,500 ಎಕರೆಯಷ್ಟು ಜಮೀನಿನ (ತೋಟ, ಹೊಲ) ನೀರಾವರಿಗೆ ಪೂರ್ವಜರ ಕಾಲದಿಂದಲೂ ಹೆಗ್ಗೇರಿ ಕೆರೆ ಬಳಕೆಯಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ನೀರಿನ ಸಂಗ್ರಹ ಕಡಿಮೆಯಾದಂತೆಲ್ಲ, ಸ್ಥಳೀಯರು ಕೆರೆಯ ದಡವನ್ನು ಒತ್ತುವರಿ ಮಾಡಿಕೊಳ್ಳುತ್ತ ಬಂದರು. ಈ ಅಕ್ರಮದಿಂದಾಗಿ ಕೆರೆ ವಿಸ್ತೀರ್ಣ 450 ಎಕರೆಗೆ ಬಂದು ನಿಂತಿದೆ’ ಎಂದು ಈ ಭಾಗದ ರೈತರು ಹೇಳುತ್ತಾರೆ.‌

‘ಕಾಗಿನೆಲೆ ಕೆರೆ ತುಂಬಿದರೆ, ಹೆಗ್ಗೇರಿ ಸೇರಿ ಏಳೂರ ಕೆರೆಗಳು ತುಂಬುತ್ತವೆ ಎನ್ನುವುದು ವಾಡಿಕೆ. ಅದು ನಿಜ ಕೂಡ. ಈ ವೇಳೆ ಹೆಗ್ಗೇರಿ ಕೋಡಿ ಬೀಳುವುದೂ ನಿಶ್ಚಿತ. ಈ ಕಾರಣಕ್ಕೇ 2008 ರಲ್ಲಿ ಅತಿವೃಷ್ಟಿಯಾದಾಗ, ಹೆಗ್ಗೇರಿ ಕೆರೆ ತುಂಬಿಕೊಂಡು ಬೇಸಿಗೆ ವೇಳೆ ಜನತೆಗೆ ಕುಡಿಯುವ ನೀರಿಗೆ ಆಸರೆಯಾಗಿತ್ತು. ಆದರೆ, ಆ ನಂತರ ಹೆಗ್ಗೇರಿ ಕೆರೆ ನೀರನ್ನು ಕಂಡಿದ್ದು ತುಂಬಾ ಕಡಿಮೆ. ನಾಲ್ಕು ವರ್ಷಗಳಿಂದ ಈ ಕೆರೆಗೆ ನೀರು ತುಂಬಿಸುವ ಪ್ರಯತ್ನವೇ ನಡೆದಿಲ್ಲ’ ಎನ್ನುತ್ತಾರೆ ಅವರು.

ಚಪ್ಪಲಿ, ಪ್ಲಾಸ್ಟಿಕ್ ಬಾಟಲಿ: ಮುಲ್ಲಾನ ಕೆರೆಯಲ್ಲಿ ಎರಡು ಅಡಿಯಷ್ಟು ನೀರಿದೆಯಾದರೂ, ಪೂರ್ತಿ ಹಸಿರು ಬಣ್ಣಕ್ಕೆ ತಿರುಗಿದೆ. ಸುತ್ತಮುತ್ತಲ ಮನೆಗಳ ಪಾಯಿಖಾನೆ ನೀರು ಇಲ್ಲಿ ಸಂಗ್ರಹವಾಗುತ್ತಿದ್ದು, ಹಂದಿಗಳ ಹಾವಳಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಾಟಲಿ, ಕಸದ ರಾಶಿ, ಚಪ್ಪಲಿಗಳು ತೇಲುತ್ತಿವೆ.

‘ಈ ಕೆರೆ ಇದ್ದೂ ಪ್ರಯೋಜನ ಇಲ್ಲದಂತಾಗಿದೆ. ಮೂರು ವರ್ಷದ ಹಿಂದೆ ಬಾಲಕನೊಬ್ಬ ಇಲ್ಲಿ ಮುಳುಗಿ ಸತ್ತಿದ್ದ. ಆ ನಂತರ ಅಧಿಕಾರಿಗಳು ಸುರಕ್ಷತೆ ಹೆಸರಿನಲ್ಲಿ ದಡದಲ್ಲಿ ಒಡ್ಡು ನಿರ್ಮಿಸಿದರಾದರೂ, ಹೂಳು ತೆಗೆಸುವ ಹಾಗೂ ಕೆರೆಗೆ ನೀರು ತುಂಬಿಸುವ ಕೆಲಸವನ್ನೇ ಮಾಡಲಿಲ್ಲ. ಇಲ್ಲಿನ ಮಹಿಳೆಯರು ಬಟ್ಟೆ ತೊಳೆಯುವುದಕ್ಕೆ ಒಂದು ಕಿ.ಮೀ ದೂರದಲ್ಲಿರುವ ಅಕ್ಕಮಹಾದೇವಿ ಹೊಂಡಕ್ಕೆ ಹೋಗುವ ಅನಿವಾರ್ಯತೆ ಇದೆ’ ಎಂದು ಕೆರೆ ಸಮೀಪದ ಅಂಗಡಿ ಮಾಲೀಕ ಖಾಸೀಂ ಸಾಬ್ ಕರ್ಜಗಿ ಹೇಳುತ್ತಾರೆ.

ನೀರಿಗೆ ದಾರಿಯೇ ಇಲ್ಲ: ಅಂದಾನಪ್ಪ ಎಂಬವರು ಸಾರ್ವಜನಿಕ ಬಳಕೆಗೆ ದಾನವಾಗಿ ನೀಡಿರುವ ದುಂಡಿ ಬಸವೇಶ್ವರ ಕೆರೆ ಸುಮಾರು 9 ಎಕರೆ ವಿಸ್ತೀರ್ಣದಲ್ಲಿದ್ದು, ದಡದ ಜಾಗವನ್ನು 53 ಮನೆಗಳು ಒತ್ತುವರಿ ಮಾಡಿಕೊಂಡಿದ್ದವು. ಎರಡು ವರ್ಷಗಳ ಹಿಂದೆ ಅಲ್ಲಿನ ನಿವಾಸಿಗಳನ್ನೆಲ್ಲ ಸ್ಥಳಾಂತರಿಸಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಈಗ ಈ ಕೆರೆ ಅಂಗಳದಲ್ಲಿ ಪ್ರಾಣಿ– ಪಕ್ಷಿಗಳ ಕಳೇಬರಗಳೇ ಬಿದ್ದಿವೆ.

‘ಕೆರೆ ತಡೆಗೋಡೆಗೆ ಕಲ್ಲುಗಳನ್ನು ಜೋಡಿಸಿರುವುದನ್ನು ಬಿಟ್ಟರೆ, ನೀರು ತುಂಬಿಸುವ ಕೆಲಸ ಇನ್ನೂ ನಡೆದಿಲ್ಲ. ಕಾಲುವೆಗಳಿಗೆ ಅಡ್ಡಲಾಗಿ ಒಡ್ಡು ಹಾಕಿರುವ ಕಾರಣ, ಕೆರೆಗೆ ನೀರು ಬರಲು ದಾರಿಯೇ ಇಲ್ಲದಂತಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಶ್.

63 ಎಕರೆ 13 ಎಕರಿಗಿಳೀತು!: 1958ರಲ್ಲಿ 63.20 ಎಕರೆ ವಿಸ್ತೀರ್ಣ ಹೊಂದಿದ್ದಬಸವನದೇವರ ಕೆರೆಯನ್ನು ಸರ್ಕಾರ ಹತ್ತಿ ಬಟ್ಟೆ ಕಾರ್ಖಾನೆಗಾಗಿ ಮುಂಬೈ ಮೂಲದವಿ.ಭಟ್‌ ಎಂಬವರಿಗೆ ಎಕರೆಗೆ ₹24,400 ರಂತೆ ನೀಡಿತ್ತು. ಆದರೆ, ಕಾರ್ಖಾನೆ ಆರಂಭಗೊಳ್ಳದ ಕಾರಣ 20 ವರ್ಷಗಳ ಹಿಂದೆ ಕೆರೆಯನ್ನು ಮರುವಶ ಮಾಡಿಕೊಳ್ಳಲಾಯಿತು.

ಆ ಸಂದರ್ಭದಲ್ಲಿ ದಾಖಲೆಗಳನ್ನು ನೋಡಿದಾಗ ಕೆರೆಯ ವಿಸ್ತೀರ್ಣ 14.30 ಎಕರೆಗೆ ಇಳಿದಿತ್ತು. ಈಚೆಗೆ ಪರಿಶೀಲಿಸಿದಾಗ ಸರ್ಕಾರಿ ದಾಖಲೆಗಳಲ್ಲಿ 13 ಎಕರೆ ಎಂದು ನಮೂದಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಪುನಃ ಸರ್ವೆ ಮಾಡಿಸಬೇಕು.ಕೆಲವರು ಕೆರೆ ಜಾಗವನ್ನು ಅತಿಕ್ರಮ ಮಾಡಿಕೊಂಡು, ಇಟ್ಟಿಗೆ ಗೂಡುಗಳನ್ನು ನಡೆಸುತ್ತಿದ್ದಾರೆ. ಅವರನ್ನು ಖಾಲಿ ಮಾಡಿಸಿ, ಕೆರೆ ವಿಸ್ತೀರ್ಣ ಹೆಚ್ಚಿಸಬೇಕು’ ಎಂಬುದು ಸ್ಥಳೀಯರು ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT