ಮಂಗಳವಾರ, ಅಕ್ಟೋಬರ್ 19, 2021
24 °C

ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನ್ಯಾ.ಸದಾಶಿವ ಆಯೋಗದ ವರದಿ ಜಾರಿಯಾಗಬಾರದೆಂದು ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ, ಜಿಲ್ಲಾ ಘಟಕ ಹಾವೇರಿ ವತಿಯಿಂದ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿಯ ಬಂಜಾರ ಗುರುಪೀಠದ ತಿಪ್ಪೇಸ್ವಾಮಿ ಮಾತನಾಡಿ, ತಲ-ತಲಾಂತರಗಳಿಂದ ಭೋವಿ, ಬಂಜಾರ, ಕೊರಮ, ಕೊರಚ ಇತ್ಯಾದಿ ಅಲೆಮಾರಿ ಸಮುದಾಯಗಳು ಕೂಡ ಅಸ್ಪೃಶ್ಯತೆ, ತಾರತಮ್ಯ, ಅಪರಾಧಿತ ಕಳಂಕ, ದೌರ್ಜನ್ಯ, ವಂಚನೆಗಳಿಗೆ ಬಲಿಯಾಗುತ್ತಲೇ ಬಂದಿವೆ. ಮೊದಲಿಗೆ ಬೆರಳಣಿಕೆಯಷ್ಟು ಇದ್ದ ಪರಿಶಿಷ್ಟ ಜಾತಿಗಳ ಪಟ್ಟಿ ರಾಜ್ಯದ ಏಕೀಕರಣ ಮತ್ತು ಪ್ರಾದೇಶಿಕ ಮಿತಿಯ ಸಡಿಲಿಕೆ ಮತ್ತು ಸಮಾನಾಂತರ ಪದಗಳ ಸೇರ್ಪಡೆಯಿಂದಾಗಿ ಇಂದು 101ಕ್ಕೆ ಏರಿದೆ ಎಂದು ತಿಳಿಸಿದರು.

ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಜಯರಾಮ್ ಆರ್. ಮಾಳಾಪುರ ಮಾತನಾಡಿ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯು ಅವೈಜ್ಞಾನಿಕವಾಗಿದ್ದು, ಇದನ್ನು ಏಕಪಕ್ಷೀಯವಾಗಿ ಕೇಂದ್ರಕ್ಕಾಗಿ ಶಿಫಾರಸು ಮಾಡಬಾರದು. ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯೆ ದ್ವೇಷ, ಒಡಕು ಬಿತ್ತಲು ಹೊರಟಿರುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. 

ಬಂಜಾರರ ಕುಲಗುರು ಸೇವಾಲಾಲ್, ಭೋವಿ ಸಮಾಜದ ದಾರ್ಶನಿಕ ಸಿದ್ಧರಾಮೇಶ್ವರ ಶರಣರು ಸೇರಿದಂತೆ ಯಾವುದೇ ದಾರ್ಶನಿಕರನ್ನು ಅವಹೇಳನ ಮಾಡಬಾರದು. ನಮ್ಮ ದಾರ್ಶನಿಕರು ಮತ್ತು ರಾಜ್ಯ ಸಚಿವ ಪ್ರಭು ಚವ್ಹಾಣ ಅವರನ್ನು ಅವಹೇಳನ ಮಾಡಿದ ಕಿಡಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ನ್ಯಾ.ಎಚ್.ಎನ್. ನಾಗಮೋಹನ್‌ದಾಸ್‌ ಅವರು ಸರ್ಕಾರಕ್ಕೆ ನೀಡಿರುವ ವರದಿಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು.

ಹಾವೇರಿ ಜಿಲ್ಲಾ ಕೊರಮ-ಕೊರಚ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಬಿಜಾಪುರ, ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಪೂಜಾರ, ರಾಜ್ಯ ಖಜಾಂಚಿಗಳಾದ ಗಂಗಾಧರ ಐ. ಲಮಾಣಿ, ಹೆಚ್.ಡಿ.ಲಮಾಣೀ, ಚನ್ನಪ್ಪ ಈ. ಲಮಾಣಿ, ಕುಮಾರ ಲಮಾಣಿ, ದ್ಯಾಮಪ್ಪ, ಸತೀಶ ಎಂ. ಹಾವೇರಿ, ಈರೇಶ ಲಮಾಣಿ, ರಾಜು ಲಮಾಣಿ, ಶಿವಪ್ಪ ಲಮಾಣಿ, ಪರಮೇಶ ಲಮಾಣಿ, ಎನ್.ಎಲ್. ಲಮಾಣಿ, ಜಗದೀಶ ಮಲಗೋಡ, ದಾಸಪ್ಪ ಕರ್ಜಗಿ, ಶಂಕರ ಲಮಾಣಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.