ಶುಕ್ರವಾರ, ಡಿಸೆಂಬರ್ 3, 2021
26 °C
ಕೊನೆಯ ಹಂತದಲ್ಲಿ ಪ್ರಚಾರಕ್ಕೆ ವಿಜಯೇಂದ್ರ

ಹಾನಗಲ್: ಬಿಎಸ್‌ವೈಗೆ ಜನ ಬೆಂಬಲ ನೋಡಿ ಕಾಂಗ್ರೆಸ್ ಬೆಚ್ಚಿದೆ- ಬಿ.ವೈ. ವಿಜಯೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ರಾಘವೇಂದ್ರ ಸೋಮವಾರ ಹಾನಗಲ್ ಉಪ ಚುನಾವಣಾ ಪ್ರಚಾರ ನಡೆಸಿದರು.

ವಿಜಯೇಂದ್ರ ಅವರನ್ನು ಬಿಜೆಪಿ ಯುವ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು. ನಾಲ್ಕರ್‌ಕ್ರಾಸ್‌ನಿಂದ ಹಾನಗಲ್ ತನಕ ಬೈಕ್‌ ರ್‍ಯಾಲಿ ಮೂಲಕ ತೆರೆದ ವಾಹನದಲ್ಲಿ ವಿಜಯೇಂದ್ರ ಅವರನ್ನು ಕರೆತರಲಾಯಿತು.

ಗಾಂಧಿ ವೃತ್ತದಲ್ಲಿ ಮಾತನಾಡಿದ ಅವರು, ಬಿ.ಎಸ್‌. ಯಡಿಯೂರಪ್ಪ ಇಡುವ ಹೆಜ್ಜೆ, ಸಾಧಿಸುವ ಗುರಿ ಬಗ್ಗೆ ಕಾಂಗ್ರೆಸ್‌ ನಾಯಕರಿಗೆ ಗೊತ್ತಿದೆ. ಈ ಉಪ ಚುನಾವಣೆ ಸೇರಿದಂತೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲಿಸಲು ಯಡಿಯೂರಪ್ಪ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಾರೆ ಎಂದರು.

ಸಿ.ಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಬಿ.ಎಸ್.ಯಡಿಯೂರಪ್ಪ ಮನೆ ಸೇರಿಕೊಳ್ಳುತ್ತಾರೆ ಎಂಬ ಪ್ರತಿಪಕ್ಷಗಳ ನಿರೀಕ್ಷೆ ಹುಸಿಯಾಗಿದೆ. ಉಪ ಚುನಾವಣಾ ಕಣದಲ್ಲಿ ಧುಮುಕಿರುವ ಯಡಿಯೂರಪ್ಪನವರಿಗೆ ಸಿಗುತ್ತಿರುವ ಜನ ಬೆಂಬಲ ಕಂಡು ಕಾಂಗ್ರೆಸ್ ನಾಯಕರು ಬೆಚ್ಚಿಬಿದ್ದಿದ್ದಾರೆ. ಬಿಎಸ್‌ವೈ ರೈತಪರ ಧ್ವನಿಯಾಗಿ, ಬಡವರು, ಹಿಂದುಳಿದ ಜನರ ನೆರವಿಗೆ ನಿಂತವರು. ಸಹಜವಾಗಿ ಅವರಿಗೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಜನ ಬೆಂಬಲ ಸಿಗುತ್ತಿದೆ ಎಂದರು.

ದೇಶದಲ್ಲಿ ಕಾಂಗ್ರೆಸ್‌ನ ಹೆಸರು, ಗುರುತು ಇಲ್ಲದಾಗಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಉತ್ತಮ ಆಡಳಿತವಿದೆ. ರಾಜ್ಯದಲ್ಲಿ ಯಡಿಯೂರಪ್ಪ ಕಾರ್ಯಕ್ರಮಗಳನ್ನು ಬಸವರಾಜ ಬೊಮ್ಮಾಯಿ ಮುಂದುವರಿಸುತ್ತಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಈ ಚುನಾವಣೆ ಮೂಲಕ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಯುವ ಕಾರ್ಯಕರ್ತರ ಹುಮ್ಮಸ್ಸು ನೋಡಿದರೆ ನ. 2 ರಂದು ಚುನಾವಣಾ ಮತ ಎಣಿಕೆಯಲ್ಲಿ ಕಾಂಗ್ರೆಸ್ಸಿಗರು ಬಹಳ ಹೊತ್ತು ನಿಲ್ಲುವುದಿಲ್ಲ ಎಂದು ವಿಜಯೇಂದ್ರ ಹೇಳಿದರು. ಬಳಿಕ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗಿಯಾದರು.

ಚುನಾವಣೆ ಕೊನೆಯ ಹಂತದಲ್ಲಿ ಪ್ರಚಾರಕ್ಕೆ ಬಂದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಸೂಚನೆ ಮೇರೆಗೆ ಸಿಂದಗಿಯಲ್ಲಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಈಗ ಹಾನಗಲ್‌ಗೆ ಬಂದಿದ್ದೇನೆ. ಇಲ್ಲಿ ವಿಜಯೇಂದ್ರನೇ ಮುಖ್ಯ ಅಲ್ಲ. ಕ್ಷೇತ್ರದಲ್ಲಿ ಈಗಾಗಲೇ ಯಡಿಯೂರಪ್ಪ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮುಖ್ಯಮಂತ್ರಿಗಳು, ವಿವಿಧ ಇಲಾಖೆ ಸಚಿವರು ಚುನಾವಣಾ ಪ್ರಚಾರ ಸಭೆ ನಡೆಸಿದ್ದಾರೆ. ಉತ್ತಮ ವಾತಾವರಣ ಕಂಡು ಬರುತ್ತಿದೆ. ಬಿಜೆಪಿ ಗೆಲುವು ವಿಶ್ವಾವಿದೆ ಎಂದರು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ತಮ್ಮ ಕಾರ್ಯಕ್ರಮಗಳನ್ನು ಮುಂದಿಡಬೇಕಿತ್ತು. ಆರ್‌ಎಸ್‌ಎಸ್ ಟೀಕೆಯೇ ಕಾಂಗ್ರೆಸ್‌ಗೆ ಅಸ್ತ್ರವಾಗುತ್ತಿದೆ. ಕಾಂಗ್ರೆಸ್‌ ಸೋಲನ್ನು ಅನುಭವಿಸಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು