ಹಾವೇರಿ: ಏಲಕ್ಕಿ ಕಂಪಿನ ನಾಡಿನಲ್ಲಿ ಜ.6ರಿಂದ ಜ.8ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ‘ಕವಿತೆಗಳನ್ನು ವಾಚಿಸಬೇಕೇ ಹೊರತು ಹಾಡುವಂತಿಲ್ಲ’ ಎಂಬ ಕಸಾಪ ನಿಯಮಕ್ಕೆ ಹಲವು ಕವಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಕವಿಗೋಷ್ಠಿಗೆ ಸಂಬಂಧಿಸಿದಂತೆ, ‘3 ನಿಮಿಷಗಳಲ್ಲಿ ಕವಿತೆಯನ್ನು ವಾಚನ ಮಾಡಬೇಕು, ವಾದ್ಯಗಳನ್ನು ಬಳಸುವಂತಿಲ್ಲ ಹಾಗೂ ಕವಿತೆಗಳನ್ನು ವಾಚಿಸಬೇಕೇ ಹೊರತು ಹಾಡುವಂತಿಲ್ಲ’ ಎಂಬ ನಿಯಮಗಳನ್ನು ರೂಪಿಸಿದೆ.
ಗೋಷ್ಠಿಗೆ ಬರುವುದಿಲ್ಲ:‘ಯಾವುದೇ ವಾದ್ಯ ಬಳಸದೆ ಕವಿತೆಯನ್ನು ನಾನು ಹಾಡ ಬಯಸುತ್ತೇನೆ. ಬಹುತೇಕ ನನ್ನ ಕವಿತೆಗಳು ಹಾಡುಗವಿತೆಯಾಗಿದ್ದು, ಲಯದಿಂದ ಕೂಡಿವೆ. ಕೇವಲ ವಾಚನಕ್ಕೆ ಸೀಮಿತಗೊಳಿಸಿ, ಕವಿತೆ ಹಾಡುವ ನನ್ನ ಸ್ವಾತಂತ್ರ್ಯವನ್ನು ಮಿತಿಗೊಳಿಸಲಾಗಿದೆ. ಹೀಗಾಗಿ ನಾನು ಗೋಷ್ಠಿಗೆ ಬರುವುದಿಲ್ಲ’ ಎಂದು ರಾಯಚೂರು ಮೂಲದ ಕವಿ ಡಾ.ರಮೇಶ್ ಅರೋಲಿ ಕಸಾಪ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.
‘2016ರಲ್ಲಿ ನಡೆದ ರಾಯಚೂರಿನಲ್ಲಿ ನಡೆದ 82ನೇ ಅಕ್ಷರ ಜಾತ್ರೆಯ ಪ್ರಧಾನ ಕವಿಗೋಷ್ಠಿಯಲ್ಲಿ ನಾನು ನನ್ನ ಕವಿತೆಯನ್ನು ಹಾಡಿದ್ದೆ. ಇದಕ್ಕೆ ಭಾರಿ ಜನಮೆಚ್ಚುಗೆ ಸಿಕ್ಕಿತ್ತು. ಅಂಥದ್ದರಲ್ಲಿ ಪರಿಷತ್ತು ಕವಿತೆ ಹಾಡುವುದಕ್ಕೆ ನಿರ್ಬಂಧ ಹಾಕಿದ್ದು ಸರಿಯಲ್ಲ’ ಎಂದು ಅರೋಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಂತ ಶಿಶುನಾಳ ಷರೀಫ, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಕೆ.ಎಸ್.ನಿಸಾರ್ ಅಹಮದ್, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಡಾ.ಸಿದ್ಧಲಿಂಗಯ್ಯ ಮುಂತಾದವರ ಕಾವ್ಯಗಳು ಭಾವಗೀತೆ ಅಥವಾ ಹಾಡುಗಳ ಮೂಲಕವೇ ಕನ್ನಡಿಗರ ಮನ ಸೂರೆಗೊಂಡಿವೆ. ಅಷ್ಟೇ ಏಕೆ, ಈ ಬಾರಿಯ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕವಿ ಡಾ.ದೊಡ್ಡರಂಗೇಗೌಡ ಅವರು ಕೂಡ ಗೀತರಚನೆಯ ಮೂಲಕವೇ ಮನೆ ಮಾತಾಗಿದ್ದಾರೆ. ಹೀಗಾಗಿ ಕವಿತೆಯನ್ನು ಹಾಡಬೇಕೋ, ವಾಚಿಸಬೇಕೋ ಎಂಬುದು ಕವಿಯ ತೀರ್ಮಾನವಾಗಿರಬೇಕು ಎನ್ನುತ್ತಾರೆ ಕವಿ ವೀರಣ್ಣ ಮಡಿವಾಳರ ಹಾಗೂ ಸಾಹಿತಿ ಟಿ.ಎಸ್.ಗೊರವರ.
ಧರ್ಮ ದ್ವೇಷದ ಆರೋಪ:ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಧರ್ಮ ದ್ವೇಷದ ಆರೋಪವೂ ಕೇಳಿಬಂದಿದೆ. ‘ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ 83 ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದ್ದು, ಅವರಲ್ಲಿ ಒಬ್ಬ ಮುಸ್ಲಿಂ ಸಾಧಕನಿಗೂ ಸನ್ಮಾನ ಇಲ್ಲ. ಒಟ್ಟು 9 ವಿಚಾರಗೋಷ್ಠಿಯಲ್ಲಿ ಒಬ್ಬ ಮುಸ್ಲಿಂ ಲೇಖಕನಿಗೂ ಅವಕಾಶ ಇಲ್ಲ. ಕವಿಗೋಷ್ಠಿಯ 25 ಕವಿಗಳಲ್ಲಿ ಕನ್ನಡದಲ್ಲಿ ಬರೆಯುವ ಒಬ್ಬ ಮುಸ್ಲಿಂ ಕವಿಗೂ ಪ್ರಾತಿನಿಧ್ಯ ನೀಡಿಲ್ಲ. ಕರ್ನಾಟಕದ ಭಾಷಾ ವೈವಿಧ್ಯ ಗೋಷ್ಠಿಯಲ್ಲಿ ರಾಜ್ಯದಲ್ಲಿ 14 ಲಕ್ಷ ಜನ ಮಾತನಾಡುವ ಬ್ಯಾರಿ ಭಾಷೆಗೆ ಅವಕಾಶ ಇಲ್ಲ.ಸಮ್ಮೇಳನದಲ್ಲಿ ಧರ್ಮ ದ್ವೇಷ ಎದ್ದು ಕಾಣುತ್ತಿದೆ’ ಎಂದು ಆರೋಪಿಸಿರುವ ಪೋಸ್ಟ್‌ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
‘ಧರ್ಮದ ಸಮ್ಮೇಳನ ಮಾಡುತ್ತಿಲ್ಲ’
ಸಮ್ಮೇಳನದ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಮಿರ್ಜಾ ಇಸ್ಮಾಯಿಲ್ ಭಾವಚಿತ್ರ, ಪ್ರಧಾನ ವೇದಿಕೆಗೆ ಶಿಶುನಾಳ ಷರೀಫರ ಹೆಸರನ್ನು ಇಡಲಾಗಿದೆ. ನಾವು ಯಾವುದೇ ಧರ್ಮ ದ್ವೇಷ ಮಾಡುತ್ತಿಲ್ಲ. ನಾವು ಜಾತಿ/ ಧರ್ಮದ ಸಮ್ಮೇಳನವನ್ನೂ ಮಾಡುತ್ತಿಲ್ಲ. ‘ಕನ್ನಡಿಗರ ಸಮ್ಮೇಳನ’ ಮಾಡುತ್ತಿದ್ದೇವೆ. ಕನ್ನಡವೊಂದೇ ನಮ್ಮ ಮಾನದಂಡ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
***
‘ಒಂದೇ ಸಾಲನ್ನು ಹತ್ತು ಬಾರಿ ಹಾಡುವುದು, ಆಲಾಪಕ್ಕೆ 10 ನಿಮಿಷ ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಈ ಅನುಭವದ ಆಧಾರದ ಮೇಲೆ ಕಸಾಪ ಸಮಿತಿಯು ನಿಯಮ ರೂಪಿಸಿದೆ
–ಮಹೇಶ ಜೋಶಿ, ಕಸಾಪ ಅಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.