ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
Last Updated 2 ಮಾರ್ಚ್ 2021, 14:09 IST
ಅಕ್ಷರ ಗಾತ್ರ

ಹಾವೇರಿ: ‘ಪೊಲೀಸ್ ಸೇರಿದಂತೆ ಪ್ರತಿಯೊಬ್ಬ ಮನುಷ್ಯನ ದೇಹ ಹಾಗೂ ಮನಸ್ಸುಗಳ ಉತ್ತಮ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಸಹಕಾರಿ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೂರು ದಿನಗಳ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರಲು ಸಾಧ್ಯ ಎಂದರು.

ಪೊಲೀಸರು ನಾಗರಿಕ ಸಮಾಜದ ಅವಿಭಾಜ್ಯ ಅಂಗ. ಸಮಾಜದಲ್ಲಿನ ದುಷ್ಟಶಕ್ತಿಗಳಿಂದ, ಹಿಂಸಾತ್ಮಕ ಗಲಭೆಗಳು, ಆಂತರಿಕ ಕಲಹಗಳಿಂದ ನಮ್ಮನ್ನು ರಕ್ಷಣೆ ಮಾಡಲು ದಿನದ 24 ತಾಸು ದುಡಿಯುತ್ತಾರೆ. ಹಬ್ಬ ಹರಿದಿನಗಳಲ್ಲಿ ತನ್ನ ಕುಟುಂಬದಿಂದ ದೂರ ಉಳಿದು ನಾಗರಿಕರ ನೆಮ್ಮದಿಗಾಗಿ ಕೆಲಸ ಮಾಡುವ ಪೊಲೀಸರಿಗೆ ದೈಹಿಕ ಮತ್ತು ಮಾನಸಿಕ ದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ ಎಂದರು.

ಆಕರ್ಷಕ ಪಥಸಂಚಲನ:

ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ರಾಣೆಬೆನ್ನೂರು, ಹಾವೇರಿ, ಶಿಗ್ಗಾವಿ ಉಪವಿಭಾಗ ಹಾಗೂ ಡಿಎಆರ್ ತಂಡ ಹಾಗೂ ಮಹಿಳಾ ಪೊಲೀಸ್ ಕ್ರೀಡಾ ತಂಡಗಳು ಹಳದಿ, ಪಿಂಕ್, ಆರೇಂಜ್, ಕ್ರೀಮ್, ಮರೂನ್ ಬಣ್ಣದ ಟೀ ಶರ್ಟ್ ಧರಿಸಿ ಪಥಸಂಚಲನ ನಡೆಸಿದರು. ಡಿ.ಎ.ಆರ್ ತಂಡದ ಮುಖ್ಯಸ್ಥರಾದ ಮಾರುತಿ ಹೆಗಡೆ ನೇತೃತ್ವದಲ್ಲಿ ನಡೆದ ಪಥಸಂಚಲನ ಆಕರ್ಷಕವಾಗಿತ್ತು.

ಜಿಲ್ಲಾಧಿಕಾರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ, ಕಳೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ವೀರಾಗ್ರಣಿ ಪ್ರಶಸ್ತಿ ಪುರಸ್ಕೃತ ಪೊಲೀಸ್ ಕ್ರೀಡಾಪಟು ಸಂತೋಷ ಜ್ಯೋತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾಟೀಲ ಇದ್ದರು. ಡಿವೈಎಸ್ಪಿ ವಿಜಯಕುಮಾರ ಸಂತೋಷ ಸ್ವಾಗತಿಸಿದರು, ರಾಣೆಬೆನ್ನೂರು ಡಿವೈಎಸ್ಪಿ ಟಿ.ವಿ. ಸುರೇಶ ವಂದಿಸಿದರು.

ಸ್ಪರ್ಧೆಗಳು:

ಮೂರು ದಿನಗಳ ಕಾಲ ಶೂಟಿಂಗ್ ಸ್ಪರ್ಧೆ, ಓಟದ ಸ್ಪರ್ಧೆ, ಗುಂಡು ಎಸೆತ, ಉದ್ದಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ, ಹಗ್ಗ ಜಗ್ಗಾಟ, ಕಬ್ಬಡ್ಡಿ, ವಾಲಿಬಾಲ್, ಬ್ಯಾಡ್ಮಿಂಟನ್‌‌, ಥ್ರೋಬಾಲ್, ಶಾಟ್‌ಪಟ್‌, ಡಿಸ್ಕಸ್‌ ಥ್ರೋ, ಕ್ರಿಕೆಟ್ ಸೇರಿದಂತೆ ಹಲವು ಸ್ಪರ್ಧೆಗಳು ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಮಹಿಳಾ ವಿಭಾಗದಲ್ಲಿ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT