ಬುಧವಾರ, ಮೇ 27, 2020
27 °C

ಲಾಠಿ ಪ್ರಹಾರಕ್ಕೆ ಜನರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ಉದ್ದೇಶದಿಂದ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದೆ. ಆದರೆ, ದಿನಸಿ, ತರಕಾರಿ, ಹಾಲು ತರಲು ಹಾಗೂ ಆಸ್ಪತ್ರೆಗೆ ತೆರಳುವವರ ಮೇಲೂ ಪೊಲೀಸ್‌ ಸಿಬ್ಬಂದಿ ವಿಚಾರಣೆ ಮಾಡದೆ, ಲಾಠಿ ಪ್ರಹಾರ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. 

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಜನರು ಗುಂಪು ಸೇರಬಾರದು ಎಂಬ ಎಲ್ಲ ನಿಯಮಗಳನ್ನು ಪಾಲಿಸಲು ನಾವು ಸಿದ್ಧರಿದ್ದೇವೆ. ಅತ್ಯಗತ್ಯ ವಸ್ತುಗಳನ್ನು ಮಾರಾಟ ಮಾಡಲು ಸರ್ಕಾರವೇ ಅವಕಾಶ ಕಲ್ಪಿಸಿದೆ. ಇಂಥ ವಸ್ತುಗಳನ್ನು ಖರೀದಿಸಲು ಹೋಗುವವರ ಮೇಲೆ, ಆಸ್ಪತ್ರೆ ಮತ್ತು ಮೆಡಿಕಲ್‌ ಸ್ಟೋರ್‌ಗಳಿಗೆ ತೆರಳುವ ಮಂದಿಯ ಮೇಲೆ ಪೊಲೀಸರು ಮನಸೋ ಇಚ್ಛೆ ಲಾಠಿ ಬೀಸುತ್ತಿದ್ದಾರೆ. ಇದರಿಂದ ಹೊರಗಡೆ ಹೋಗಲು ಭಯವಾಗುತ್ತಿದೆ ಎಂದು ಬಸವೇಶ್ವರ ನಗರ ಮತ್ತು ವಿದ್ಯಾನಗರದ ನಿವಾಸಿಗಳು ಅಳಲು ತೋಡಿಕೊಂಡರು. 

ತರಕಾರಿ ಸಾಗಣೆಗೆ ತೊಡಕು: ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದ ತರಕಾರಿ ಮತ್ತು ಸೊಪ್ಪುಗಳನ್ನು ನಗರ ಪ್ರದೇಶಗಳಿಗೆ ಸಾಗಣೆ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಇದರಿಂದ ತರಕಾರಿ ಮತ್ತು ಸೊಪ್ಪುಗಳು ಹಾಳಾಗುತ್ತಿದ್ದು, ರಸ್ತೆ ಬದಿಗೆ ಸುರಿಯುವ ಪ್ರಸಂಗ ಎದುರಾಗಿದೆ. 

ನಗರ ಪ್ರದೇಶಗಳಲ್ಲಿ ತರಕಾರಿ ಮಾರುಕಟ್ಟೆಯನ್ನು ಬಂದ್‌ ಮಾಡಿದ್ದು, ವಾರ್ಡ್‌ಗಳ ಆಯ್ದ ಸ್ಥಳಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಪೂರೈಕೆ ಕಡಿಮೆಯಾಗಿರುವುದರಿಂದ ತರಕಾರಿ ಬೆಲೆ ದುಬಾರಿಯಾಗಿದೆ. 

ಸಾಮಾನ್ಯ ರೈತರ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ, ಅನುಮತಿ ಪಡೆಯುವುದು ಕಷ್ಟಕರ ಸಂಗತಿ. ಅದರ ಬದಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಮತಿ ಪತ್ರ ನೀಡಿದರೆ, ನಾವು ನಗರ ಪ್ರದೇಶಗಳಿಗೆ ಸಾಗಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ನಾಗನೂರು ಗ್ರಾಮದ ರೈತರು. 

ರೇಷ್ಮೆ ಗೂಡು: ಬ್ಯಾಡಗಿ ತಾಲ್ಲೂಕಿನಲ್ಲಿ 2 ಟನ್‌ ರೇಷ್ಮೆ ಗೂಡು ಮಾರಾಟಕ್ಕೆ ಸಿದ್ಧವಿದೆ. ಮೂರು ದಿನದೊಳಗೆ ಮಾರುಕಟ್ಟೆಗೆ ಹೋಗಬೇಕು. ಇಲ್ಲದಿದ್ದರೆ ಗೂಡುಗಳು ಹಾಳಾಗುತ್ತವೆ. ಈಗ ಕರ್ಫ್ಯೂ ಇರುವುದರಿಂದ ಸಾಗಣೆಗೆ ಅಡ್ಡಿಯಾಗಿದೆ. ಕೊರೊನಾ ಬರುವುದಕ್ಕೆ ಮುಂಚೆ ಕೆ.ಜಿ.ಗೆ ₹600 ದರವಿತ್ತು. ಈಗ ₹150ಕ್ಕೆ ಕೇಳುತ್ತಿದ್ದಾರೆ. ಹೀಗಾಗಿ ರೇಷ್ಮೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು. 

ಬೆಂಗಳೂರು, ರಾಮನಗರ, ಕೊಳ್ಳೇಗಾಲಕ್ಕೆ ರೇಷ್ಮೆ ಗೂಡು ಸಾಗಣೆ ಮಾಡಬೇಕು. ಆದರೆ ಜಿಲ್ಲೆಯಿಂದ ಜಿಲ್ಲೆಗೆ ಹೋಗಲು ಅನುಮತಿ ಸಿಗುತ್ತಿಲ್ಲ. ಹೀಗಾಗಿ ಹಾವೇರಿ, ಚಳಗೇರಿಯಲ್ಲಿರುವ ರೇಷ್ಮೆ ಮಿಲ್‌ಗಳಿಗೇ ಗೂಡುಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲಿ ಉತ್ತಮ ದರ ಸಿಗುತ್ತಿಲ್ಲ. ಕಾರಣ ಮಿಲ್‌ನವರು ಕಾರ್ಮಿಕರ ಕೊರತೆಯಿದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಲಾಕ್‌ಡೌನ್‌ನಿಂದ ರೈತರ ಸಂಕಷ್ಟ ಹೇಳತೀರದಾಗಿದೆ ಎಂದು ಮಲ್ಲಿಕಾರ್ಜುನ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು