ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ: ಸಿಇಒ ಮೊಹಮ್ಮದ್‌ ರೋಶನ್‌

699 ಹಳ್ಳಿಗಳ ಮನೆ–ಮನೆಗೆ ನೀರಿನ ಸಂಪರ್ಕ
Last Updated 9 ಡಿಸೆಂಬರ್ 2020, 15:25 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಕಾಲಮಿತಿಯೊಳಗೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವೆ’ ಎಂದು ಜಿಲ್ಲಾ ಪಂಚಾಯಿತಿ ನೂತನ ಸಿಇಒ ಮೊಹಮ್ಮದ್‌ ರೋಶನ್ ತಿಳಿಸಿದರು.

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಜಲಜೀವನ ಮಿಷನ್’ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳ ಟೆಂಡರ್ ಕರೆಯಲು ಈಗಾಗಲೇ ರಾಜ್ಯ ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿದೆ ಎಂದರು.

275 ಗ್ರಾಮಗಳ ಸರ್ವೆ ಪೂರ್ಣ: ಜಲಜೀವನ ಮಿಷನ್ ಯೋಜನೆಯಡಿ ಜಿಲ್ಲೆಯ 699 ಹಳ್ಳಿಗಳಿಗೆ ಮನೆ– ಮನೆಗೆ ನೀರಿನ ಸಂಪರ್ಕ ಕಲ್ಪಿಸಬೇಕಾಗಿದೆ. 492 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 275 ಗ್ರಾಮಗಳ ಸರ್ವೆ ಕಾರ್ಯ ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಳಿದ ಗ್ರಾಮಗಳ ಸರ್ವೇ ಕಾರ್ಯಕ್ಕೆ ಬೇರೆ ಜಿಲ್ಲೆಯಿಂದ ಸರ್ವೆ ಏಜೆನ್ಸಿಯನ್ನು ಕರೆಸಿ, 10 ದಿನದೊಳಗಾಗಿ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ಈ ಯೋಜನೆಯಡಿ 16 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಒಳಗೊಂಡಿರುತ್ತವೆ. ಈ ವರ್ಷ 8 ಬಹುಗ್ರಾಮ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

ಜಲಜೀವನ ಮಿಷನ್ ಯೋಜನೆ ಅನುಷ್ಠಾನ ಕುರಿತಂತೆ ಸರ್ವೆ ತಂಡ ಗ್ರಾಮಗಳಿಗೆ ಬಂದಾಗ ಸ್ಥಳೀಯರು ಈ ತಂಡಗಳೊಂದಿಗೆ ಸಹಕರಿಸಿ ಅಂತರ್ಜಲ ಮಾಹಿತಿ ಹಾಗೂ ವಿನ್ಯಾಸದ ಕುರಿತಂತೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಉದ್ಯೋಗ ಖಾತ್ರಿ: ಉದ್ಯೋಗ ಖಾತ್ರಿ ಯೋಜನೆಯಡಿ 40 ಲಕ್ಷ ಮಾನವ ದಿನಗಳ ಸೃಜಿಸುವ ಗುರಿ ಪೈಕಿ ಈಗಾಗಲೇ 34 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಕೆರೆ ಹೂಳೆತ್ತುವ ಜೊತೆಗೆ ಸಂಪನ್ಮೂಲ ಸೃಜನೆಗೆ ಹೆಚ್ಚಿನ ಆದ್ಯತೆ ನೀಡುವ ಗುರಿ ಹೊಂದಿದ್ದೇನೆ.

ಮಾದರಿ ಶಾಲೆ ಅಭಿವೃದ್ಧಿ: ಜಿಲ್ಲೆಯ ಪ್ರತಿ ತಾಲ್ಲೂಕಿನ ತಲಾ ಐದು ಶಾಲೆಗಳನ್ನು ಆಯ್ಕೆ ಮಾಡಿ ಮಾದರಿ ಶಾಲೆಗಳಾಗಿ ಅಭಿವೃದ್ಧಿ ಪಡಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಪ್ರತಿ ಸರ್ಕಾರಿ ಶಾಲೆಗಳಿಗೆ ಆಟದ ಮೈದಾನ, ಕಾಂಪೌಂಡ್‌ ನಿರ್ಮಾಣ, ಮಳೆ ನೀರು ಸಂಗ್ರಹ, ಕೈತೋಟ ನಿರ್ಮಾಣ ಮಾಡಲಾಗುವುದು. ‘ವರದಾ ಸಿರಿ’ ಯೋಜನೆ ಅತ್ಯುತ್ತಮ ಯೋಜನೆಯಾಗಿದ್ದು, ಈ ಯೋಜನೆಯನ್ನು ಬದ್ಧತೆಯಿಂದ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ವಸತಿ: ಗ್ರಾಮಾಂತರ ಪ್ರದೇಶಗಳಲ್ಲಿ ಬಡವರಿಗೆ ನಿವೇಶನ ರಚಿಸಿ ಹಂಚಿಕೆ ಮಾಡಲು 65 ಎಕರೆ ಜಮೀನನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. 30 ಸಾವಿರ ನಿವೇಶನಗಳನ್ನು ರಚಿಸಿ ನಿಯಮಾನುಸಾರ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದರು.

ಕೋವಿಡ್‌ ಪರೀಕ್ಷೆ ದ್ವಿಗುಣ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಉತ್ತಮ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗಳನ್ನು ದ್ವಿಗುಣಗೊಳಿಸುವುದರ ಮೂಲಕ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣಕ್ಕೆ ಶ್ರಮವಹಿಸಲಾಗುವುದು. ರ‍್ಯಾಪಿಡ್‌ ಕಿಟ್ ಬಳಕೆ ಕಡಿಮೆ ಮಾಡಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒತ್ತು ನೀಡಲಾಗುವುದು ಎಂದರು.

‘ಸಕಾಲ’ದಡಿ ಅರ್ಜಿ ನೋಂದಣಿ ಕಡ್ಡಾಯ
ಹಾವೇರಿ: ಸಾರ್ವಜನಿಕ ಕುಂದುಕೊರತೆ ಹಾಗೂ ದೂರುಗಳನ್ನು ಕಡ್ಡಾಯವಾಗಿ ಸಕಾಲ ಯೋಜನೆಯಡಿ ನೋಂದಾಯಿಸಬೇಕು. ಈ ಕುರಿತಂತೆ ಎಲ್ಲ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸಿಇಒ ಮಹ್ಮದ್ ರೋಶನ್ ಹೇಳಿದರು.

ಪಂಚಾಯತ್ ರಾಜ್ ವ್ಯವಸ್ಥೆಯ ಆಡಳಿತ ಸುಧಾರಣೆಗೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಬಯೊಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಿ ಕೇಂದ್ರೀಕೃತ ನಿಗಾವಹಿಸಲಾಗುವುದು. ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಸಕಾಲದಲ್ಲಿ ಕಚೇರಿಗೆ ಆಗಮಿಸಲು ಕ್ರಮವಹಿಸಲಾಗುವುದು. ಪಂಚಾಯತಿಗಳಲ್ಲಿ ಖಾಲಿ ಇರುವ ಪಿಡಿಒ ಹುದ್ದೆಗಳನ್ನು ಸರ್ಕಾರದ ನಿಯಮಾನುಸಾರ ಬಡ್ತಿ ಮೂಲಕ ತುಂಬಲಾಗುವುದು ಎಂದರು.

‘72 ಗಂಟೆಯಲ್ಲಿ ನೀರಿನ ಘಟಕ ದುರಸ್ತಿ’
ಜಿಲ್ಲೆಯಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ಸಹಾಯವಾಣಿ ಸಂಖ್ಯೆಗಳನ್ನು ನಮೂದಿಸಲಾಗುವುದು. ಯಾವುದೇ ಆರ್.ಒಪ್ಲಾಂಟ್‍ಗಳು ದುರಸ್ತಿಗೆ ಬಂದಾಗ ಪರಿಹಾರ ಸಹಾಯವಾಣಿ ಸಂಖ್ಯೆಗೆ ಕರೆಮಾಡಿದರೆ ಕರೆ ಸ್ವೀಕರಿಸಿದ 72 ಗಂಟೆಯೊಳಗಾಗಿ ದುರಸ್ತಿಗೆ ಕ್ರಮವಹಿಸಲಾಗುವುದು ಎಂದು ಸಿಇಒ ಮೊಹಮ್ಮದ್‌ ರೋಶನ್‌ ತಿಳಿಸಿದರು.

15 ದಿನದಲ್ಲಿ ಸಂಪರ್ಕ
ಜಿಲ್ಲೆಯ 557 ಶಾಲೆಗಳಿಗೆ ಹಾಗೂ 1108 ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ನೇರ ಸಂಪರ್ಕ ಇಲ್ಲ. ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಇಲ್ಲದ ಶಾಲೆಗಳಿಗೆ 15 ದಿನಗಳಲ್ಲಿ ಹಾಗೂ ಸರ್ಕಾರಿ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ 50 ದಿನಗಳಲ್ಲಿ ಜಲಜೀವನ ಮಿಷನ್ ಯೋಜನೆ ಹಾಗೂ ಗ್ರಾಮ ಪಂಚಾಯಿತಿಯ 14–15ನೇ ಹಣಕಾಸು ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT