ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ: ಖಾಸಗೀಕರಣ ಖಂಡಿಸಿ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ: ಹದಗೆಟ್ಟಿರುವ ದೇಶದ ಆರ್ಥಿಕ ಸ್ಥಿತಿ–ಆರೋಪ
Last Updated 4 ಫೆಬ್ರುವರಿ 2020, 12:41 IST
ಅಕ್ಷರ ಗಾತ್ರ

ಹಾವೇರಿ: ಭಾರತೀಯ ಜೀವ ವಿಮಾ ನಿಗಮವನ್ನು ಕೇಂದ್ರ ಸರ್ಕಾರ ಹಂತ– ಹಂತವಾಗಿ ಖಾಸಗೀಕರಣ ಮಾಡಿದ್ದನ್ನು ವಿರೋಧಿಸಿ ಹಾಗೂ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ ವಿಚಾರವನ್ನು ವಾಪಸ್‌ ಪಡೆಯಲು ಆಗ್ರಹಿಸಿ ಜಿಲ್ಲೆಯ ಎಲ್‌ಐಸಿ ಸಂಘದ ನೇತೃತ್ವದಲ್ಲಿ ಪಾಲಿಸಿದಾರರು, ಏಜೆಂಟರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಾಘವೇಂದ್ರ ಚಿಕ್ಕಳ್ಳಿ ಮಾತನಾಡಿ, ‘ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಎಲ್‌ಐಸಿಯನ್ನು ಷೇರು ಬಂಡವಾಳ ಮಾರುಕಟ್ಟೆಯಲ್ಲಿ ನೋಂದಾಯಿಸಿ, ಸ್ವಲ್ಪ ಪ್ರಮಾಣದ ಷೇರುಗಳನ್ನು ಖಾಸಗಿ ಕಂಪನಿಗಳಿಗೆ ವಿನಿಯೋಗಿಸಿ ಅದರಿಂದ ಬರುವ ಹಣದಿಂದ ತಮ್ಮ ವಿತ್ತೀಯ ಕೊರತೆಯನ್ನು ಸರಿದೂಗಿಸಲು ಹೊಂಚು ಹಾಕಿದ್ದಾರೆ. ಈ ಮೂಲಕ ಅವರು ಭಾರತೀಯ ಜೀವವಿಮಾ ನಿಗಮವನ್ನು ಹಂತ– ಹಂತವಾಗಿ ಖಾಸಗೀಕರಣ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹಿಂದಿನ ಆರು ವರ್ಷಗಳಲ್ಲಿ ಕೇಂದ್ರದ ಆರ್ಥಿಕ ನೀತಿಯಿಂದ ದೇಶದ ಜಿಡಿಪಿ ಪ್ರಮಾಣ ಪಾತಾಳಕ್ಕೆ ಕುಸಿದಿದೆ. ಸರ್ಕಾರದ ಹಣವೆಲ್ಲ ಸಾರ್ವಜನಿಕ ಉದ್ದಿಮೆಯಲ್ಲಿ ತೊಡಗಿಸಿದೆ. ಇವೆಲ್ಲವೂ ನಷ್ಟದಲ್ಲಿರುವ ಪರಿಣಾಮ ಎಲ್‌ಐಸಿಯನ್ನು ಮಾರಾಟ ಮಾಡಿ ಅದರ ಹಣವನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಲು ಚಿಂತನೆ ನಡೆಸಿದಂತಿದೆ ಎಂದು ದೂರಿದರು.

1956ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ₹5 ಕೋಟಿ ಬಂಡವಾಳ ಹಾಕಿ ಭಾರತೀಯ ಜೀವವಿಮಾ ನಿಗಮವನ್ನು ಆರಂಭಿಸಿದ್ದರು. ಈಗ ಅದು ಬೃಹದಾಕಾರವಾಗಿ ಬೆಳೆದಿದ್ದು, ಇದರ ಒಟ್ಟು ಆಸ್ತಿ ಮೌಲ್ಯ ₹31 ಲಕ್ಷ ಕೋಟಿ ಇದೆ. ಅಲ್ಲದೆ, ಪಂಚವಾರ್ಷಿಕ ಯೋಜನೆಗೂ ಸಹ ಎಲ್‌ಐಸಿ ಹಣ ನೀಡುತ್ತಾ ಬಂದಿದೆ. ದೇಶದಲ್ಲಿ ಒಟ್ಟು 1.20 ಲಕ್ಷ ನೌಕರರು, 12 ಲಕ್ಷ ಪ್ರತಿನಿಧಿಗಳು ಹಾಗೂ 30 ಕೋಟಿ ಪಾಲಿಸಿದಾರರಿದ್ದಾರೆ. ಈ ಸಂಸ್ಥೆಯನ್ನು ಖಾಸಗೀಕರಣ ಮಾಡಿದರೆ ಅನೇಕ ಕುಟುಂಬಗಳು ಬೀದಿಗೆ ಬಿದ್ದಂತಾಗುತ್ತದೆ ಎಂದರು.

ಕಾರ್ಯದರ್ಶಿ ಧರ್ಮರಾಜ ರಾಠೋಡ ಮಾತನಾಡಿ, ಸರ್ಕಾರದಿಂದ ಎಲ್‌ಐಸಿಗೆ ಯಾವುದೇ ಲಾಭವಿಲ್ಲ. ಬದಲಾಗಿ ಸರ್ಕಾರಕ್ಕೆ ಎಲ್‌ಐಸಿ ಬೆನ್ನೆಲುಬಾಗಿದೆ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ ಎಂದರು.

ಜನಾರ್ದನ, ಉಮೇಶ ದೊಡ್ಡಮನಿ, ಕೆ.ಸುರೇಶ, ನೇತ್ರಾವತಿ ಭಟ್ಟ, ಟಿ.ಸಂತೋಷ, ಶೇರ್ಲಿ ಟೋನಿ, ಪಾಲಿಸಿದಾರರು, ಏಜೆಂಟರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT