ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಠಾಣೆಯಲ್ಲೇ ಹುಟ್ಟುಹಬ್ಬ; ಸಿಎಂ ತವರು ಜಿಲ್ಲೆಯಲ್ಲಿ ಐಜಿಪಿ ಆದೇಶ ಉಲ್ಲಂಘನೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ (ಹಾವೇರಿ): ತಾಲ್ಲೂಕಿನ ಬಂಕಾಪುರ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಸಂತೋಷ ಪಾಟೀಲ ಅವರು ನಾಗರಿಕರ ಜತೆ ಮಂಗಳವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಐಜಿಪಿ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

‘ಪೊಲೀಸ್‌ ಠಾಣೆ, ವೃತ್ತ ಕಚೇರಿ, ಉಪವಿಭಾಗದ ಕಚೇರಿಗಳು ಸಾರ್ವಜನಿಕ ಕಚೇರಿಗಳಾದ ಕಾರಣ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಮುಂತಾದ ಖಾಸಗಿ ಆಚರಣೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಇಂತಹ ಆಚರಣೆಗಳು ಪೊಲೀಸ್‌ ಇಲಾಖೆಗೆ ಶೋಭೆ ತರುವುದಿಲ್ಲ’ ಎಂದು ಡಿಜಿಪಿ ಪ್ರವೀಣ್‌ ಸೂದ್‌ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದರು.

‘ಸಮವಸ್ತ್ರದಲ್ಲಿರುವ ಪೊಲೀಸ್‌ ಅಧಿಕಾರಿಗಳ ವರ್ತನೆಯು ಇಡೀ ಪೊಲೀಸ್‌ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಪೊಲೀಸ್‌ ಅಧಿಕಾರಿಗಳು ಅರಿತಿರಬೇಕು. ಅಪರಾಧ ಹಿನ್ನೆಲೆ, ಸಮಾಜ ಘಾತುಕ ವ್ಯಕ್ತಿಗಳೊಂದಿಗೆ ಸ್ವಾಗತ, ಬೀಳ್ಕೊಡುಗೆ ಮುಂತಾದ ಕಾರ್ಯಕ್ರಮ ಆಚರಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಆಚರಣೆಗಳಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಪೊಲೀಸರ ಮೇಲೆ ಅಪನಂಬಿಕೆ ಬರುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು. 

ಆದರೆ, ಬಂಕಾಪುರ ಠಾಣೆಯಲ್ಲಿ ಯುವಕರ ಗುಂಪು ಪಿಎಸ್‌ಐ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿರುವ, ಹಾರ ಹಾಕಿರುವ, ಸಿಹಿ ತಿನಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

‘ಹುಟ್ಟುಹಬ್ಬ ಕಾರ್ಯಕ್ರಮವನ್ನು ಶಿಗ್ಗಾವಿ ತಾಲ್ಲೂಕಿನ ಬಿಸನಳ್ಳಿ ಕಾಶಿಪೀಠದ ಸಂಗೀತ, ವೇದ ಕಲಿಕೆ ಮಕ್ಕಳಿಗೆ (ವಟುಗಳಿಗೆ) ಸಿಹಿ ಹಂಚಿ ಆಚರಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಯಾವುದೇ ಜನ್ಮ ದಿನಾಚರಣೆ ಆಚರಿಸಿಕೊಂಡಿಲ್ಲ. ಕೆಲವು ಪ್ರಕರಣಗಳ ವಿಚಾರಣೆ ಅಂಗವಾಗಿ ಬಂದಿರುವ ಜನರು ಶುಭ ಕೋರಿದ್ದಾರೆಯೇ ವಿನಾ ಹುಟ್ಟುಹಬ್ಬ ಆಚರಿಸಿಲ್ಲ’ ಎಂದು ಬಂಕಾಪುರ ಪೊಲೀಸ್ ಠಾಣೆ ಪಿಎಸ್‌ಐ ಸಂತೋಷ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇನೆ
– ಹನುಮಂತರಾಯ, ಎಸ್ಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು