ರಾಣೆಬೆನ್ನೂರು: ನಗರದ ರೈಲ್ವೆ ನಿಲ್ದಾಣಕ್ಕೆ ಧಾರವಾಡ- ಬೆಂಗಳೂರು ಒಂದೇ ಭಾರತ್ ಎಕ್ಸ್‌ಪ್ರೆಸ್ ನೂತನ ರೈಲ್ವೆ ಮಂಗಳವಾರ ರಾಣೆಬೆನ್ನೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಪ್ರಯಾಣಿಕರು, ಸಾರ್ವಜನಿಕರು ಮೊಬೈಲ್‌ನಲ್ಲಿ ಪೊಟೋ ಮತ್ತು ಚಿತ್ರೀಕರಣ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ವಿಧಾನ ಸಭೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಧಾರವಾಡದಿಂದ ಬೆಂಗಳೂರು ವರೆಗೆ ಮಂಗಳವಾರದಿಂದ ಆರಂಭವಾಗಿರುವ ಸುಸಜ್ಜಿತವಾದ ನೂತನ ಒಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ರಾಣೆಬೆನ್ನೂರ ನಗರಕ್ಕೆ ಆಗಮಿಸಿದಾಗ ಜನರು ರೈಲಿಗೆ ಮಾಲಾರ್ಪಣೆ ಮಾಡಿದರು. ರೈಲ್ವೆ ಅಧಿಕಾರಿಗಳನ್ನು ಸ್ವಾಗತಿಸಿದರು. ಅಲ್ಲಿ ನೆರೆದಿದ್ದ ತಾಲ್ಲೂಕಿನ ಜನರಿಗೆ ಸಿಹಿ ವಿತರಿಸಿದರು. ರೈಲ್ವೆ ಕಂಪಾರ್ಟ್ ಮೆಂಟ್ ಒಳಗಡೆ ಜನತೆ ಸುತ್ತಾಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದ ಜನರು ಅತ್ಯಂತ ಕಡಿಮೆ ಅವಧಿಯಲ್ಲಿ ವೇಗವಾಗಿ ಬೆಂಗಳೂರು ತಲುಪಲು ಅನುಕೂಲವಾಗಲಿದೆ. ಈ ಸೌಲಭ್ಯ ಒದಗಿಸಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಹಾಗೂ ರೈಲ್ವೆ ಅಧಿಕಾರಿಗಳಿಗೆ ಪ್ರಯಾಣಿಕರು ಅಭಿನಂದನೆ ಸಲ್ಲಿಸಿದರು.
ರಾಣೆಬೆನ್ನೂರಿನ ರೈಲ್ವೆ ನಿಲ್ದಾಣದಲ್ಲಿ ಒಂದೇ ಭಾರತ್ ಎಕ್ಸ್‌ಪ್ರೆಸ್ ನೂತನ ರೈಲ್ವೆ ರಾಣೆಬೆನ್ನೂರಿಗೆ ಆಗಮಿಸಿದ್ದಕ್ಕೆ ವಿಧಾನ ಸಭೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು