ರಾಣೆಬೆನ್ನೂರು: ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆ ಕಟಾವಿಗೆ ಬಂದಿದೆ. ಜಿಲ್ಲೆಯ ಹಲವು ತಾಲ್ಲೂಕು ಹಾಗೂ ಹೊರ ಜಿಲ್ಲೆಗಳ ರೈತರು ತಾವು ಬೆಳೆದಿರುವ ಮೆಕ್ಕೆಜೋಳವನ್ನು ಮಾರಾಟ ಮಾಡಲು ನಗರದ ಎಪಿಎಂಸಿಗೆ ತರುತ್ತಿದ್ದಾರೆ. ಬದಲಾದ ವಾತಾವರಣದಿಂದಾಗಿ ಮೆಕ್ಕೆಜೋಳದ ತೇವಾಂಶ ಹೆಚ್ಚಾಗಿದ್ದು, ಬೆಲೆಯಲ್ಲಿಯೂ ಕುಸಿತ ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ವಾರದಿಂದ ವಾತಾವರಣ ಹೆಚ್ಚು ತಂಪಾಗಿದ್ದು, ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಕೆಲ ರೈತರು, ಮೆಕ್ಕೆಜೋಳದ ತೆನೆ ಮುರಿದು ಅಲ್ಲಲ್ಲಿ ರಾಶಿ ಮಾಡಿ ಇರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೆಕ್ಕೆಜೋಳ ಕಟಾವು ಯಂತ್ರಗಳಿಗೆ ಬೇಡಿಕೆ ಬಂದಿದೆ. ರೈತರು ಹೊಲದಿಂದ ಮೆಕ್ಕೆಜೋಳ ಕಟಾವು ಮಾಡಿ ನೇರವಾಗಿ ಹಸಿ ಬಿಸಿ ಕಾಳುಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಎಪಿಎಂಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಈ ವಾರದಲ್ಲಿ ನಿತ್ಯವೂ 10ರಿಂದ 15ಸಾವಿರಕ್ಕೂ ಹೆಚ್ಚು ಮೆಕ್ಕೆಜೋಳದ ಚೀಲಗಳು ಆವಕವಾಗಿವೆ.
ತಾಲ್ಲೂಕಿನ ಹೂಲಿಹಳ್ಳಿ ಮೆಗಾ ಮಾರುಕಟ್ಟೆ, ಎಪಿಎಂಸಿ ಯಾರ್ಡ್ ಮತ್ತು ಹೆದ್ದಾರಿಯ ಸರ್ವೀಸ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆಕ್ಕೆಜೋಳ ಒಣಗಿಸಲು ಹಾಕಿರುವುದು ಕಂಡುಬರುತ್ತಿದೆ. ಮೆಕ್ಕೆಜೋಳದ ತೇವಾಂಶ ಹೆಚ್ಚಾಗಿದ್ದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಸದ್ಯಕ್ಕೆ ಕಡಿಮೆಯಾಗಿದೆ.
ನಗರದ ಪ್ರದೇಶದಲ್ಲಿ ಮೆಕ್ಕೆಜೋಳ ಒಣಗಿಸಲು ಹಂದಿಗಳ ಕಾಟವಿದೆ. ಎಪಿಎಂಸಿ ರಸ್ತೆಯಲ್ಲಿ ಹಾಕಿದರೆ ವಾಹನ ಸಂಚಾರಕ್ಕೆ ತೊಂದರೆ ಎಂದು ಜನರು ದೂರುತ್ತಿದ್ದಾರೆ. ಮೆಕ್ಕೆಜೋಳ ಒಣಗಿಸಲು ಸಹ ರೈತರು ಕಷ್ಟಪಡುವ ಸ್ಥಿತಿ ಇದೆ.
‘ಶೇ. 14ರಿಂದ ಶೇ. 15ರಷ್ಟು ತೇವಾಂಶ ಹೊಂದಿದ ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ₹ 2,600ರಿಂದ ₹2,700ರವರೆಗೆ ಈಗಲೂ ದರ ಇದೆ. ಶೇ. 17ರಿಂದ ಶೇ. 18 ತೇವಾಂಶ ಹೊಂದಿದ ಕಾಳುಗಳಿಗೆ ₹ 2,400ರಿಂದ ₹ 2,450ರವರೆಗೆ ದರವಿದೆ. ಎರಡು–ಮೂರು ದಿನಗಳಿಂದ ಸತತ ಮಳೆ ಬೀಳುತ್ತಿದ್ದರಿಂದ ಮಳೆಗೆ ತೋಯ್ದು ಶೇ. 26ರಷ್ಟು ತೇವಾಂಶ ಹೊಂದಿದ ಮೆಕ್ಕೆಜೋಳ ಮಾರುಕಟ್ಟೆಗೆ ಬರುವುದರಿಂದ ಕ್ವಿಂಟಲ್‌ಗೆ ₹ 1,800 ರಿಂದ ₹2,350ರವರೆಗೆ ದರ ಇದೆ‘ ಎಂದು ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ಹೇಳಿದರು.
‘ರಾಣೆಬೆನ್ನೂರು ಎಪಿಎಂಸಿ ಹಾಗೂ ನೆಹರು ಮಾರುಕಟ್ಟೆಗೆ ಕಾರವಾರ, ಸಿರಸಿ, ಗದಗ, ಶಿರಾಳಕೊಪ್ಪ, ಶಿಕಾರಿಪುರ, ಶಿವಮೊಗ್ಗ, ಹಿರೇಕೆರೂರು, ಹಾವೇರಿ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಸವಣೂರ, ವಿಜಯನಗರ, ಹರಪನಹಳ್ಳಿ, ಹಡಗಲಿ, ಹರಿಹರ, ದಾವಣಗೆರೆಯಿಂದ ರೈತರು ಮೆಕ್ಕೆಜೋಳ ತರುತ್ತಾರೆ‘ ಎಂದರು.
ವರ್ತಕ ಗುರುಪ್ರಕಾಶ ಜಂಬಿಗಿ, ‘ಮೆಕ್ಕೆಜೋಳವನ್ನು ಮಾರುಕಟ್ಟೆಯಲ್ಲಿ ಒಣಗಿಸಿ ಶೇ. 14ರಿಂದ ಶೇ 18ರಷ್ಟು ತೇವಾಂಶ ಪರಿಶೀಲಿಸಿ ತೂಕ ಮಾಡಿ 60 ಕೆ.ಜಿ ಚೀಲ ತುಂಬಲಾಗುವುದು. ನಿತ್ಯವೂ 15 ಸಾವಿರಕ್ಕೂ ಹೆಚ್ಚು ಮೆಕ್ಕೆಜೋಳವನ್ನು ಖರೀದಿ ಮಾಡಲಾಗುತ್ತಿದೆ’ ಎಂದರು.
ಮೈದೂರು ಗ್ರಾಮದ ರೈತ ಶಶಿಕಾಂತ ಸಾವುಕಾರ, ‘ಟ್ರ್ಯಾಕ್ಟರ್‌ನಿಂದ ಬಿತ್ತನೆ ಮಾಡಲಾಗುತ್ತದೆ. ಕ್ರಿಮಿನಾಶಕ ಕೂಡ ಯಂತ್ರದಿಂದ ಸಿಂಪಡಣೆ ಮಾಡಲಾಗುತ್ತದೆ. ಇಂದಿನ ಕೃಷಿ ದುಬಾರಿಯಾಗಿದೆ. ಮೆಕ್ಕೆಜೋಳ ಬೆಳೆದು ಮಾರುಕಟ್ಟೆಗೆ ತಂದರೆ, ತೇವಾಂಶ ಹೆಚ್ಚಿರುವುದಾಗಿ ಹೇಳಿ ಕಡಿಮೆ ದರ ನೀಡಲಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.
ಬ್ಯಾಡಗಿ ತಾಲ್ಲೂಕಿನ ತಡಸ ಗ್ರಾಮದ ರೈತ ಸೋಮನಗೌಡ ಪಾಟೀಲ, ‘ಈ ವರ್ಷ ಮುಂಗಾರು ಮಳೆ ಉತ್ತಮವಾಗಿದೆ. 10 ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆವು. ಬೀಜ, ಗೊಬ್ಬರ, ಕೂಲಿ ಕಾರ್ಮಿಕರು ಸೇರಿ ₹ 3 ಲಕ್ಷದವರೆಗೂ ಖರ್ಚಾಗಿದೆ. ಕನಿಷ್ಠ ಕ್ವಿಂಟಲ್‌ಗೆ ₹ 2,500 ದರ ಸಿಗಬೇಕು. ಅಂದಾಗ ಮಾತ್ರ ರೈತಿಗೆ ಸ್ವಲ್ಪ ಹಣ ಉಳಿಯುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.