ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಹದಗೆಟ್ಟ ರಸ್ತೆಗಳಿಗಿಲ್ಲ ದುರಸ್ತಿ ಭಾಗ್ಯ

ರಾಣೆಬೆನ್ನೂರು ನಗರದ ಗುಂಡಿ, ಕೆಸರುಗದ್ದೆಯಂಥ ರಸ್ತೆಗಳಲ್ಲಿ ಸಂಚಾರದ ಫಜೀತಿ
Published 21 ಆಗಸ್ಟ್ 2023, 5:54 IST
Last Updated 21 ಆಗಸ್ಟ್ 2023, 5:54 IST
ಅಕ್ಷರ ಗಾತ್ರ

ರಾಣೆಬೆನ್ನೂರು: ವಾಣಿಜ್ಯ ನಗರ ರಾಣೆಬೆನ್ನೂರು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ‘ಅಮೃತ’ ಯೋಜನೆಗೆ ಒಳಪಟ್ಟರೂ ವಿವಿಧ ಬಡಾವಣೆಗಳ ಮುಖ್ಯ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಸುಗಮ ಸಂಚಾರಕ್ಕೆ ತೊಡಕಾಗಿವೆ. 

ಹತ್ತಾರು ದಿನಗಳ ಕಾಲ ನಿರಂತರ ಸುರಿದ ಮಳೆಗೆ ನಗರದ ರಸ್ತೆಗಳೆಲ್ಲ ಹದಗೆಟ್ಟಿವೆ. ನಗರದಲ್ಲಿ 24x7 ಶುದ್ಧ ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ (ಯುಜಿಡಿ) ಕಾಮಗಾರಿಗೆ ತೆಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ. ಎಲ್ಲಿ ಬೇಕಲ್ಲಿ ರಸ್ತೆ ಕುಸಿದು ಸ್ಕೂಲ್‌ ಬಸ್‌ಗಳು ಸಿಕ್ಕಿಕೊಂಡ ಉದಾಹರಣೆಗಳಿವೆ. 

ಬೈಕ್‌ ಸವಾರರಿಗೆ ಫಜೀತಿ: ನಗರದ ಹಳೇ ಅಂತರವಳ್ಳಿ ಡಿವೈಡರ್‌ ರಸ್ತೆಯ ಎರಡು ಇಕ್ಕೆಲಗಳಲ್ಲಿ ಗುಂಡಿಗಳು ಬಿದ್ದಿವೆ.

ಕಳೆದ ಐದಾರು ವರ್ಷಗಳಿಂದ ಹದಗೆಟ್ಟ ರಸ್ತೆಯಲ್ಲಿಯೇ ಅಡ್ಡಾಡುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ನಗರಸಭೆ ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಡಿವೈಡರ್‌ ರಸ್ತೆ ಆದ ಮೇಲೆ ಒಂದು ಬಾರಿಯೂ ಡಾಂಬರ್‌ ಕಂಡಿಲ್ಲ. ಮಳೆಗಾಲದಲ್ಲಂತೂ ಬೈಕ್‌ ಸವಾರರ ಫಜೀತಿ ಹೇಳತೀರದು. 

ಈ ಬಡಾವಣೆ ನಿರ್ಮಾಣವಾಗಿ ಹತ್ತಾರು ವರ್ಷ ಕಳೆದರೂ ಮಾಗೋಡ ರಸ್ತೆಯಿಂದ ಬಸವ ಪಾರ್ಕ್‌ಗೆ ಹೋಗುವ ರಸ್ತೆಗಳು ಅಧ್ವಾನವಾಗಿವೆ. ಇಲ್ಲಿನ ಪ್ರಮುಖ ಮೂರು ರಸ್ತೆಗಳು ಗುಂಡಿಗಳಿಂದ ಕೂಡಿವೆ. ವಾಯು ವಿಹಾರಕ್ಕೆ ಹೋಗುವವರು ನಿತ್ಯ ಚುನಾಯಿತ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಶಾಲಾ, ಕಾಲೇಜಿನ ಬಸ್‌ಗಳು ಬರುವುದೇ ಇಲ್ಲ. ಬೈಕಿನಲ್ಲಿಯೇ ಮಕ್ಕಳನ್ನು ಶಾಲೆಗೆ ಬಿಡುವಂತಾಗಿದೆ.

‘ನಮ್ಮ ವಾರ್ಡ್‌ ಸದಸ್ಯರು ಚುನಾವಣೆ ಮುಗಿದ ಮೇಲೆ ಇತ್ತ ಕಡೆ ಹೊರಳಿ ನೋಡಿಲ್ಲ. ನಗರಸಭೆಗೆ ಪೌರಾಯುಕ್ತರು, ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ, ಏನೂ ಪ್ರಯೋಜನವಾಗಿಲ್ಲ’ ಎಂದು ಶಿವಬಸವ ಕೋರಿ ಹಾಗೂ ಮದಿಗೌಡ್ರ ದೂರಿದರು.  

ಹಳ್ಳ ಹಿಡಿದ ರಸ್ತೆಗಳು: ‘ಸಿದ್ದಾರೂಢನಗರ ಮತ್ತು ಶ್ರೀರಾಮನಗರದ 1ರಿಂದ 3ನೇ ಕ್ರಾಸ್‌ವರೆಗೆ ರಸ್ತೆಗಳು ಹಳ್ಳಹಿಡಿದಿವೆ. ಇಲ್ಲಿ ದಿ.ದೇವರಾಜ ಅರಸು, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಮಹಿಳಾ ವಸತಿ ನಿಲಯಗಳು ಇವೆ. ನಿತ್ಯ ವಿದ್ಯಾರ್ಥಿಗಳು ಎರಡು ಕಿ.ಮೀ ಹದಗೆಟ್ಟ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಾರೆ. ಯುಜಿಡಿ ಗುಂಡಿಗಳಿಗೆ ಮುಚ್ಚಿದ ಕಲ್ಲುಗಳು ಎತ್ತರವಾಗಿವೆ. ರಸ್ತೆಯ ಎರಡೂ ಬದಿಗೆ ಜಾಲಿ ಮುಳ್ಳಿನ ಕಂಠಿಗಳು ರಸ್ತೆಗೆ ಚಾಚಿಕೊಂಡಿವೆ. ರಾತ್ರಿ ಹೊತ್ತು ಬೀಳುವಂತಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು.  

ಇಲ್ಲಿನ ಪ್ರವಾಸಿಮಂದಿರದಿಂದ ಬನಶಂಕರಿ ನಗರಕ್ಕೆ ಹೋಗುವ ರಸ್ತೆ ಕಾಮಗಾರಿಯನ್ನು ಎರಡ್ಮೂರು ವರ್ಷಗಳ ಹಿಂದೆಯೇ ಕೈಗೊಂಡಿದ್ದು, ಇದುವರೆಗೂ ರಸ್ತೆ ದುರಸ್ತಿ ಕಂಡಿಲ್ಲ. ಅಪೂರ್ಣ ಕಾಂಕ್ರೀಟ್‌ ರಸ್ತೆ ಮಾಡಿದ್ದಾರೆ. ತಿರುಮಲ ಹೊಟೇಲ್‌ನಿಂದ ಸಣ್ಣ ನೀರಾವರಿ ಇಲಾಖೆಯಿಂದ ಬನಶಂಕರಿ ನಗರಕ್ಕೆ ಹೋಗುವ ರಸ್ತೆ ಹದಗೆಟ್ಟು ಅನೇಕ ವರ್ಷಗಳು ಗತಿಸಿವೆ.

ಕೆಂಪು ಕಲ್ಲು ಪುಡಿ ಹಾಕಿ ಹೋದ ಗುತ್ತಿಗೆದಾರ ಇತ್ತ ಮುಖ ಮಾಡಿಲ್ಲ. ಗುತ್ತಿಗೆದಾರ ಕೈಕೊಟ್ಟು ಹೋಗಿದ್ದಾರೆ ಎಂದು ನಗರಸಭೆ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಇದುವರೆಗೂ ರಸ್ತೆ ದುರಸ್ತಿ ಮಾಡಿಲ್ಲ, ಡಾಂಬರ್‌ ಹಾಕಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು.  

ವಿನಾಯಕನಗರ ಮತ್ತು ಮೃತ್ಯುಂಜಯನಗರ ಸಂಧಿಸುವ ಪೂರ್ವ ಬಡಾವಣೆ ಶಾಲೆ ಮುಂದಿನ ರಸ್ತೆ ಖನ್ನೂರು ಆಸ್ಪತ್ರೆವರೆಗೆ ಕಿತ್ತು ಹೋಗಿದೆ. ಶಾಲೆಯ ಮಕ್ಕಳು ಮಳೆಗಾಲದಲ್ಲಿ ಗುಂಡಿಯಲ್ಲಿ ಕೊಳಚೆ ನೀರಿನಲ್ಲಿ ಅಡ್ಡಾಡುವಂತಾಗಿದೆ ಎನ್ನುತ್ತಾರೆ ಮಕ್ಕಳ ಪಾಲಕರು.

ಚರಂಡಿ ವ್ಯವಸ್ಥೆಯಿಲ್ಲ: ನಗರದ ಹುಣಸೀಕಟ್ಟಿ ಕ್ರಾಸ್‌ನಿಂದ ಮೆಡ್ಲೇರಿಗೆ ಹೋಗುವ ರಸ್ತೆಯ ರೈಲ್ವೆ ಗೇಟ್‌ನಿಂದ ಗಂಗಾಜಲ ತಾಂಡಾಕ್ಕೆ ಹೋಗುವ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗದೇ ರಸ್ತೆಯಲ್ಲಿಯೇ ನಿಲ್ಲುತ್ತದೆ. ರಸ್ತೆಯ ಎರಡೂ ಕಡೆಗೆ ಚರಂಡಿ ವ್ಯವಸ್ಥೆ ಇಲ್ಲದೇ ಮಳೇ ನೀರು ಹರಿದು ಹೋಗದೇ ದೊಡ್ಡದೊಡ್ಡ ಗುಂಡಿಗಳು ಬಿದ್ದು ಹೊಂಡಗಳಾಗಿ ಮಾರ್ಪಟ್ಟಿವೆ.

ಕಾಟಾಚಾರಕ್ಕೆ ಕಲ್ಲು ಪುಡಿ ಹಾಕುತ್ತಾರೆ. ಭಾರಿ ಬಾಹನಗಳ ಓಡಾಟಕ್ಕೆ ಮತ್ತು ನೀರಿನ ರಭಸಕ್ಕೆ ಕಲ್ಲು ಕಿತ್ತು ಬಂದಿವೆ. ವಾಹನಗಳ ಟೈರ್‌ಗಳು ಪಂಕ್ಚರ್‌ ಆಗಿ ಕೆಟ್ಟು ನಿಂತ ಉದಾಹರಣೆಗಳಿವೆ. 

ರಾಣೆಬೆನ್ನೂರು ಪಟ್ಟಣದಿಂದ ಮೇಡ್ಲೇರಿ, ಹೀಲದಹಳ್ಳಿ, ಹಿರೇಬಿದರಿ, ಐರಣಿ, ಉದಗಟ್ಟಿ, ಬೇಲೂರು, ಕೋಣನತಂಬಿಗಿ, ಸೋಮಲಾಪುರ ಮುಂತಾದ ಗ್ರಾಮಗಳ ತುಂಗಭದ್ರಾ ನದಿ ತೀರದ ಪ್ರದೇಶಗಳಿಗೆ ಬೃಹತ್‌ ಗಾತ್ರದ ಟಿಪ್ಪರ್‌, ಭಾರಿ ಗೂಡ್ಸ್‌ ವಾಹನಗಳು ಮರಳು ಸಾಗಿಸಲು ಅಡ್ಡಾಡುವುದರಿಂದ ರಸ್ತೆ ಕಿತ್ತು ಹೋಗಿದೆ ಎನ್ನುತ್ತಾರೆ ನಾಗರಿಕರು.

ರಾಣೆಬೆನ್ನೂರಿನ ವಿನಾಯಕನಗರ ಮತ್ತು ಮೃತ್ಯುಂಜಯ ನಗರದ ಬಳಿ ಪೂರ್ವ ಬಡಾವಣೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು
ರಾಣೆಬೆನ್ನೂರಿನ ವಿನಾಯಕನಗರ ಮತ್ತು ಮೃತ್ಯುಂಜಯ ನಗರದ ಬಳಿ ಪೂರ್ವ ಬಡಾವಣೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು
ರಾಣೆಬೆನ್ನೂರಿನ ಮಾಗೋಡ ರಸ್ತೆಯಿಂದ ಬಸವ ಗ್ರೀನ್‌ ಪಾರ್ಕ್‌ ಬಡಾವಣೆಗೆ ಹೋಗುವ ರಸ್ತೆ ಕೆಸರುಮಯವಾಗಿರುವುದು
ರಾಣೆಬೆನ್ನೂರಿನ ಮಾಗೋಡ ರಸ್ತೆಯಿಂದ ಬಸವ ಗ್ರೀನ್‌ ಪಾರ್ಕ್‌ ಬಡಾವಣೆಗೆ ಹೋಗುವ ರಸ್ತೆ ಕೆಸರುಮಯವಾಗಿರುವುದು

ಏನಂತಾರೆ? (ಲೋಗೊ ಬಳಸಿ) ನಮ್ಮ ಏರಿಯಾಕ್ಕೆ ಆಟೊ ಬರಲ್ಲ! ನಮ್ಮ ಏರಿಯಾಗೆ ಆಟೊ ಪೇಪರ್‌ ಹಾಲು ಕೊಡುವ ಹುಡುಗರು ರಸ್ತೆ ಹದಗೆಟ್ಟ ಕಾರಣದಿಂದ ಬರುತ್ತಿಲ್ಲ. ಈಶ್ವರ ನಗರದ ವರಗೆ ಮಾತ್ರ ಆಟೊ ಬರುತ್ತವೆ. ಅಲ್ಲಿಂದ ಎರಡು ಕಿ.ಮೀ ನಡೆದುಕೊಂಡು ಹೋಗಬೇಕು. ಬೈಕ್‌ ಸವಾರರು ಹಗಲು ಹೊತ್ತಿನಲ್ಲಿಯೇ ಗುಂಡಿಯಲ್ಲಿ ಬಿದ್ದು ಏಳುವಂತಾಗಿದೆ. ಮಳೆಗಾಲದಲ್ಲಿ ವೃದ್ಧರು ಹೊರಗೆ ಬರುವಂತಿಲ್ಲ – ಅಶ್ವಿನ್‌ ಅಜ್ಜೋಡಿಮಠ ಅಧ್ಯಕ್ಷ ವಿನಯಾ ಹಳಿಂಗಳಿ ಕಾರ್ಯದರ್ಶಿ ಬಸವ ಗ್ರೀನ್‌ ಪಾರ್ಕ್‌ ನಿವಾಸಿಗಳ ಸಂಘ ರಾಣೆಬೆನ್ನೂರು ಹದಗೆಟ್ಟ ರಸ್ತೆಗಳ ದುರಸ್ತಿ ಯಾವಾಗ? ಹಲಗೇರಿ ಕ್ರಾಸ್‌ನಿಂದ ದೇವಿಕಾ ಸ್ಕೂಲ್‌ ಮೂಲಕ ಹಾದು ಹೋಗುವ ಹಳೇ ಮಾಗೋಡ ರಸ್ತೆ ಹೌಸಿಂಗ್‌ ಕಾಲೊನಿ ಮೊದಲ ಹಂತದ ರಸ್ತೆ ಹುಣಸೀಕಟ್ಟಿ ರಸ್ತೆ ಶ್ರೀರಾಮನಗರ ಬನಶಂಕರಿನಗರ ಶಾಂತಿನಗರ ನೇಕಾರನಗರ ಹೊಸ ಎಲ್‌ಐಸಿ ರಸ್ತೆ ನೇಕಾರ ನಗರದಿಂದ ಹುಣಸೀಕಟ್ಟಿ ಸೇರುವ ರಸ್ತೆ ಸಿದ್ಧಾರೂಢ ನಗರದ ಕೆಲ ರಸ್ತೆಗಳು ಇಂದಿಗೂ ದುರಸ್ತಿ ಭಾಗ್ಯ ಕಂಡಿಲ್ಲ. ಈ ರಸ್ತೆಗಳ ದುರಸ್ತಿ ಯಾವಾಗ? – ಶಿವಬಸವ ಕೆ. ವಿನಾಯಕ ಪಾಟೀಲ ಬಸವ ಪಾರ್ಕ್‌ ನಿವಾಸಿಗಳು 30 ರಸ್ತೆಗಳಲ್ಲಿ ದುರಸ್ತಿ ಕಾರ್ಯ ನಗರದಲ್ಲಿ ಈಗಾಗಲೇ ಗುಂಡಿ ಮುಚ್ಚುವ ಕೆಲಸ ಪ್ರಗತಿಯಲ್ಲಿದೆ. ನಗರದ ವ್ಯಾಪ್ತಿಯಲ್ಲಿ 30 ರಸ್ತೆ ಕಾಮಗರಿಗಳನ್ನು ದುರಸ್ತಿಗೆ ತೆಗೆದುಕೊಂಡಿದ್ದೇವೆ. ಬಸವ ಗ್ರೀನ್ ಪಾರ್ಕ್ ಅಭಿವೃದ್ಧಿ ಸಂಘದಿಂದ ರಸ್ತೆ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದಾರೆ. ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ.        – ಎನ್.ಎಚ್. ಕುಮ್ಮಣ್ಣನವರ ಪೌರಯುಕ್ತ ರಾಣೆಬೆನ್ನೂರು ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT