ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲ್ಲೂಕು ಕೇಂದ್ರವಾಗಿ ಐದು ವರ್ಷಗಳು ಗತಿಸಿದರೂ ಇದುವರೆಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ಪ್ರತ್ಯೇಕವಾಗಿ ಜರುಗುತ್ತಿಲ್ಲ. ಅಖಂಡ ಹಿರೇಕೆರೂರು ತಾಲ್ಲೂಕು ಮಟ್ಟದಲ್ಲಿ ನಡೆಯುವುದರಿಂದ ತಾಲ್ಲೂಕಿನ ಪ್ರತಿಭಾವಂತ ಕ್ರೀಡಾಪಟುಗಳು, ಜಿಲ್ಲಾಮಟ್ಟಕ್ಕೆ ಅರ್ಹತೆ ಪಡೆಯದೆ ಅವಕಾಶ ವಂಚಿತರಾಗುತ್ತಿದ್ದಾರೆ. ಇಂತಹುದೇ ಸಮಸ್ಯೆಯನ್ನು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿಯೂ ಎದುರಿಸಲಾಗುತ್ತಿದೆ.
ಪದವಿ ಪೂರ್ವ ಕಾಲೇಜು ಕ್ರೀಡಾಕೂಟಗಳು ತಾಲ್ಲೂಕು ರಚನೆಯ ಆರಂಭದಿಂದಲೂ ರಟ್ಟೀಹಳ್ಳಿ ಹಾಗೂ ಹಿರೇಕೆರೂರು ಪ್ರತ್ಯೇಕ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ನಡೆಯುತ್ತಿವೆ.
ರಟ್ಟೀಹಳ್ಳಿ ತಾಲ್ಲೂಕು ಕೇಂದ್ರಕ್ಕೆ ಪ್ರತ್ಯೇಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಹಿರೇಕೆರೂರು- ರಟ್ಟೀಹಳ್ಳಿ ತಾಲ್ಲೂಕುಗಳ ಕ್ರೀಡಾಕೂಟಗಳನ್ನು ಪ್ರತ್ಯೇಕಿಸದೆ, ಒಂದೇ ತಾಲ್ಲೂಕು ಮಟ್ಟದ ಕ್ರೀಡೆಗಳ ಆಯೋಜನೆಯಿಂದ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಅವಕಾಶ ವಂಚಿತರಾಗುತ್ತಿದ್ದಾರೆ.
‘ರಟ್ಟೀಹಳ್ಳಿ ತಾಲ್ಲೂಕು ರಚನೆಯಾದ ನಂತರ ಪ್ರತ್ಯೇಕ ತಹಶೀಲ್ದಾರ್ ಕಚೇರಿ, ದಸರಾ ಕ್ರೀಡಾಕೂಟಗಳು, ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಹಲವಾರು ಸರ್ಕಾರಿ ಕಚೇರಿ ಕೆಲಸಗಳು ಮತ್ತು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತಿವೆ. ಹೀಗಿದ್ದೂ ಕ್ರೀಡಾ ಚಟುವಟಿಕೆಗೆ ಏಕೆ ಈ ಕಡಿವಾಣ’ ಎನ್ನುತ್ತಾರೆ ಇಲ್ಲಿನ ಹೊಯ್ಸಳ ಕ್ರೀಡಾ ಸಂಘದ ಅಧ್ಯಕ್ಷ ಸಿ.ಎಫ್. ಜಾಡರ.
‘ರಟ್ಟೀಹಳ್ಳಿ ತಾಲ್ಲೂಕಿನ ಪ್ರೌಢಶಾಲೆಯ 4, ಹಿರೇಕೆರೂರು ಪ್ರೌಢಶಾಲೆಗಳ 6 ವಲಯಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ರಟ್ಟೀಹಳ್ಳಿ ಹಾಗೂ ಹಿರೇಕೆರೂರು ಪ್ರತ್ಯೇಕ ತಾಲ್ಲೂಕುಮಟ್ಟದ ಕ್ರೀಡಾಕೂಟಗಳು ಆಯೋಜನೆಗೊಂಡರೆ, ಎರಡು ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಪಟುಗಳಿಗೆ ಜಿಲ್ಲಾಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ದೊರೆಯುತ್ತದೆ’ ಎಂಬುದು ತಾಲ್ಲೂಕು ಪ್ರೌಢಶಾಲೆಗಳ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಡಿ. ಪಾಟೀಲ ಅವರ ಅನಿಸಿಕೆ.
ಈ ಹಿಂದಿನಿಂದಲೂ ರಟ್ಟೀಹಳ್ಳಿ ಹಾಗೂ ಹಿರೇಕೆರೂರು ತಾಲ್ಲೂಕುಗಳ ಪ್ರತ್ಯೇಕ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳು, ಕ್ರೀಡಾ ತರಬೇತುದಾರರು, ಕ್ರೀಡಾಪ್ರೇಮಿಗಳು ಒತ್ತಾಯಿಸುತ್ತಾ ಬಂದಿದ್ದಾರೆ. ಸದ್ಯ ಪ್ರಾಥಮಿಕ ಶಾಲೆಗಳ ಸಿ.ಆರ್.ಸಿ. ಮಟ್ಟದ ಕ್ರೀಡೆಗಳು ಹಾಗೂ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟಗಳು ನಡೆಯುತ್ತಿದ್ದು, ಈ ಬಾರಿಯಾದರೂ ಶಿಕ್ಷಣ ಇಲಾಖೆಯವರು ರಟ್ಟೀಹಳ್ಳಿ ಹಾಗೂ ಹಿರೇಕೆರೂರು ತಾಲ್ಲೂಕುಗಳ ಪ್ರತ್ಯೇಕ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಕ್ರೀಡಾಪಟುಗಳ ಆಸೆಯನ್ನು ಈಡೇರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ರಟ್ಟೀಹಳ್ಳಿ ತಾಲ್ಲೂಕಿನಲ್ಲಿ 9 ಹಾಗೂ ಹಿರೇಕೆರೂರಿನಲ್ಲಿ 9 ಸಿ.ಆರ್.ಸಿ ಕೇಂದ್ರಗಳಿವೆ. ತಾಲ್ಲೂಕು ಮಟ್ಟದ ಕ್ರೀಡಾಕೂಟಗಳನ್ನು ಪ್ರತ್ಯೇಕವಾಗಿ ನಡೆಸಲು ಮನವಿ ಸಲ್ಲಿಸಲಾಗಿದೆ – ಎ.ಎಸ್.ಬಣಕಾರ ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ
ಅಗತ್ಯ ಕ್ರಮ ಕೈಗೊಳ್ಳುವೆ: ಶಾಸಕ ರಟ್ಟೀಹಳ್ಳಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳ ಬಹುದಿನಗಳ ಇಚ್ಛೆಯಂತೆ ರಟ್ಟೀಹಳ್ಳಿ ಹಾಗೂ ಹಿರೇಕೆರೂರು ತಾಲ್ಲೂಕು ಮಟ್ಟದ ಕ್ರೀಡಾಕೂಟಗಳ ಪ್ರತ್ಯೇಕ ಆಯೋಜನೆಗೆ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರೊಂದಿಗೆ ಚರ್ಚಿಸಿದ್ದು ಬಿಇಒ ಅವರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಯು.ಬಿ. ಬಣಕಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.