ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡಗಿ | ಮೈಲಾರ ಮಹದೇವಪ್ಪ ಪುಣ್ಯಸ್ಮರಣೆ ಇಂದು

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸ್ವಾತಂತ್ರ್ಯ ಸೇನಾನಿಯ ಹುತಾತ್ಮರಾಗಿ 81 ವರ್ಷ
Published : 1 ಏಪ್ರಿಲ್ 2024, 6:38 IST
Last Updated : 1 ಏಪ್ರಿಲ್ 2024, 6:38 IST
ಫಾಲೋ ಮಾಡಿ
Comments

ಬ್ಯಾಡಗಿ: ಸ್ವಾತಂತ್ರ್ಯ ಸೇನಾನಿ ಮಹದೇವ ಮೈಲಾರ ಅವರ 81ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಅವರ ಜನ್ಮಸ್ಥಳ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಏ.1 ರಂದು ಜರುಗಲಿದೆ.

ರೈತ ಕುಟುಂಬದ ಮಾರ್ತಂಡಪ್ಪ ಮತ್ತು ಬಸಮ್ಮ ಅವರ ಪುತ್ರನಾಗಿ 1911ರಲ್ಲಿ ಜನಿಸಿದ ಹುತಾತ್ಮ ಮಹದೇವ ಮೈಲಾರರು 1943ರಲ್ಲಿ ಹೊಸರಿತ್ತಿ ಗ್ರಾಮದ ಚಾವಡಿಯಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮರಾದವರಲ್ಲಿ ಪ್ರಮುಖರು. ಅಂದು ಬೆಳಿಗ್ಗೆ 8ಕ್ಕೆ ಶಾಲಾ ಮಕ್ಕಳಿಂದ ಸ್ವಾತಂತ್ರ್ಯ ಹೋರಾಟಗಾರ ಮಹದೇವ ಮೈಲಾರರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಸಾಗಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸಭಾ ಕಾರ್ಯಕ್ರಮಗಳು ಜರುಗಲಿವೆ.

ಹಿನ್ನೆಲೆ: ದೇಶದಲ್ಲಿ ಸ್ವಾತಂತ್ರ್ಯ ಚಳುವಳಿ ತೀವ್ರಗೊಂಡಾಗ ಸುಭಾಶ್‌ ಚಂದ್ರ ಬೋಸ್‌, ಭಗತಸಿಂಗ್, ಲಾಲಾ ಲಜಪತ್‌ರಾಯ್ ಮತ್ತು ಮಹಾತ್ಮ ಗಾಂಧಿ ಅವರಂತಹ ದೇಶ ಭಕ್ತರಿಂದ ಪ್ರಭಾವಿತರಾಗಿದ್ದ ಮಹದೇವ ಮೈಲಾರರು ತಮ್ಮ 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ್ದರು. ಪ್ರಾಥಮಿಕ ಶಿಕ್ಷಣವನ್ನು ಮೋಟೆಬೆನ್ನೂರು ಗ್ರಾಮದಲ್ಲಿ ಪೂರ್ಣಗೊಳಿಸಿದ ಬಳಿಕ ಸಮೀಪದ ಹಂಸಭಾವಿಗೆ ಪ್ರೌಢಶಿಕ್ಷಣ ಪಡೆಯಲು ತೆರಳಿದ್ದರು.

ಅಲ್ಲಿ ಕೆ.ಎಫ್.ಪಾಟೀಲ, ಟಿ.ಆರ್.ನೇಸ್ವಿ, ಸರ್ದಾರ ವೀರನಗೌಡ್ರ ಮಾರ್ಗದರ್ಶನದಲ್ಲಿ ಹರ್ಡೇಕರ ಮಂಜಪ್ಪನವರ ದೇಶಪ್ರೇಮಕ್ಕೆ ಮಾರು ಹೋಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾಲಿಟ್ಟರು. ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಸ್ವದೇಶಿ ಚಳುವಳಿಯ ಕುರಿತು ಅರಿವು ಮೂಡಿಸಿದರು. ಖಾದಿ ಉತ್ಪಾದನೆ ಹಾಗೂ ಹರಿಜನೋದ್ಧಾರದಂತಹ ಕಾಯಕದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಯುವಕರಲ್ಲಿ ಸ್ವಾತಂತ್ರ್ಯ ಕುರಿತು ಜಾಗೃತಿಯನ್ನು ಮೂಡಿಸಿದ್ದರು. 1930ರಲ್ಲಿ ಬ್ರಿಟಿಷ್‌ ಸರ್ಕಾರ ಉಪ್ಪಿನ ಮೇಲೆ ಕರ ವಿಧಿಸಿರುವುದನ್ನು ವಿರೋಧಿಸಿ ಗಾಂಧೀಜಿ ನಡೆಸಿದ ಉಪ್ಪಿನ ಸತ್ಯಾಗ್ರಹದಲ್ಲಿಯೂ ಮಹದೇವ ಮೈಲಾರರು ಪಾಲ್ಗೊಂಡಿದ್ದರು.

1936ರಲ್ಲಿ ವರದಾ ನದಿತೀರದ ಕೊರಡೂರ ಗ್ರಾಮದಲ್ಲಿ ‘ಸಬರಮತಿ ಆಶ್ರಮ’ದ ಮಾದರಿಯಲ್ಲಿಯೇ ‘ಗ್ರಾಮ ಸೇವಾಶ್ರಮ‘ ಸ್ಥಾಪಿಸಿದರು. ಹೊಸರಿತ್ತಿ ಇವರ ಚಳುವಳಿಯ ಕಾರ್ಯ ಕ್ಷೇತ್ರವಾಗಿತ್ತು. 1941ರಲ್ಲಿ ಸೆರೆಮನೆ ವಾಸ ಅನುಭವಿಸಿದರು. ಮುಂದೆ ಚಲೇಜಾವ್ ಚಳುವಳಿ ನಡೆದ ಕಾಲಕ್ಕೆ ಇವರ ನೇತೃತ್ವದ ಯುವಕರ ಪಡೆ ಬ್ರಿಟಿಷರ ವಿರುದ್ಧ ಉಗ್ರ ಹೋರಾಟಕ್ಕೆ ಸಿದ್ಧಗೊಂಡಿತು. ಚಾವಡಿ, ರೈಲ್ವೆ ನಿಲ್ದಾಣ ಹಾಗೂ ಅಂಚೆ ಪತ್ರಗಳ ಚೀಲಗಳನ್ನು ಸುಡುವುದರಲ್ಲಿ ಭಾಗಿಯಾಗಿದ್ದ ಅವರು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು.

1943ನೇ ಏ.1ರಂದು ಹೊಸರಿತ್ತಿಯಲ್ಲಿ ಕಂದಾಯ ಹಣದ ಲೂಟಿಗೆ ಮುಂದಾದ ಮಹದೇವ ಮೈಲಾರ ಮತ್ತು ಅವರ ಸಂಗಡಿಗರಾದ ತಿರಕಪ್ಪ ಮಡಿವಾಖಳರ ಹಾಗೂ ವೀರಯ್ಯ ಹಿರೇಮಠ ಬ್ರಿಟಿಷ್‌ ಪೊಲೀಸರ ಗುಂಡಿಗೆ ಹುತಾತ್ಮರಾದರು. ಅವರ ಬದುಕು, ದೇಶಪ್ರೇಮ ನಮ್ಮ ಇತಿಹಾಸದಲ್ಲಿ ಇನ್ನೂ ಅವಿಸ್ಮರಣೀಯವಾಗಿ ಉಳಿದಿವೆ.

ಉಪನ್ಯಾಸ ಸಾಂಸ್ಕೃತಿಕ ಕಾರ್ಯಕ್ರಮ

ಮೋಟೆಬೆನ್ನೂರ ಗ್ರಾಮದ ಮಹದೇವ ಮೈಲಾರ ಪ್ರೌಢಶಾಲಾ ಆವರಣದಲ್ಲಿ ಮಹದೇವ ಮೈಲಾರರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಏ.1ರಂದು ನಡೆಯಲಿದೆ. ಪ್ರಾಚಾರ್ಯ ಶಿವಾನಂದ ಬೆನ್ನೂರ ‌ಉಪನ್ಯಾಸ ನೀಡಲಿದ್ದು ಎಚ್‌.ಎಸ್‌. ಕಸ್ತೂರಮ್ಮ ಹುತಾತ್ಮ ಮಹದೇವ ಮೈಲಾರ ರಾಷ್ಟ್ರೀಯ ಟ್ರಸ್ಟ್‌ ಸದಸ್ಯರಾದ ವಿ.ಎನ್‌.ತಿಪ್ಪನಗೌಡ್ರ ಎಚ್.ಎಸ್‌.ಮಹದೇವ ಕೆಪಿಎಸ್‌ಸಿ ಸದಸ್ಯ ಡಾ.ಎಚ್‌.ಎಸ್‌.ನರೇಂದ್ರ ನಾಗೇಂದ್ರ ಕಡಕೋಳ ಸಲಹಾ ಸಮಿತಿ ಸದಸ್ಯರಾದ ನಾಗರಾಜ ಆನ್ವೇರಿ ಹದಿಗೆಯ್ಯ ಹಾವೇರಿಮಠ ಸತೀಶ ಪಾಟೀಲ ಪರಮೇಶಪ್ಪ ಮೈಲಾರ ಸಿ.ಪಿಐ ಮಹಾಂತೇಶ ಲಂಬಿ ಬಿಇಒ ಎಸ್‌.ಜಿ.ಕೋಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಡಿವೆಪ್ಪ ಕುರಿಯವರ ಫಕ್ಕಿರಪ್ಪ ಗೊರವರ ಎಫ್‌.ಎನ್‌.ಕರೇಗೌಡ್ರ ಹಾಗೂ ಮುಖ್ಯಶಿಕ್ಷಕ ಎಸ್‌.ಎನ್‌. ಅಮಾತಿಗೌಡ್ರ ಪಾಲ್ಗೊಳ್ಳುವರು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT