ಹಾವೇರಿ: ದಾಸಶ್ರೇಷ್ಠ ಸಂತ ಕನಕದಾಸರ ಜನ್ಮಭೂಮಿಯಾದ ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಸಚಿವ ಆರ್. ಅಶೋಕ್ ಅವರನ್ನು ಗ್ರಾಮಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ಚಕ್ಕಡಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅಶೋಕ್ ಅವರ ಮೆರವಣಿಗೆಯಲ್ಲಿ ಜೊತೆಯಾದರು.
200ಕ್ಕೂ ಅಧಿಕ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗುವ ಮೂಲಕ ಸಚಿವರಿಗೆ ಭವ್ಯ ಸ್ವಾಗತ ನೀಡಿದರು.
ಬಾಡ ಗ್ರಾಮದಲ್ಲಿ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಅಲಂಕೃತ ಬಂಡಿ ಏರಿದರು. ಸ್ವಲ್ಪ ಹೊತ್ತಿನ ನಂತರ ಬಂಡಿಯಿಂದ ಇಳಿದು ಅಲಂಕೃತ ಟ್ರ್ಯಾಕ್ಟರ್ ಮೂಲಕ ಸಾಗಿದರು.
ಡೊಳ್ಳು, ಕರಡಿ ವಾದ್ಯ ಮತ್ತು ಕಲಾತಂಡಗಳು ಮೆರವಣಿಗೆಗೆ ರಂಗು ತಂದವು.
ಮಳಿಗೆಗಳ ಉದ್ಘಾಟನೆ:ಕೇಂದ್ರ ವಾರ್ತಾ ಇಲಾಖೆ ಮತ್ತು ವಿವಿಧ ಇಲಾಖೆಗಳ 27 ಮಳಿಗೆಗಳಿಗೆ ಸಚಿವ ಅಶೋಕ್ ಚಾಲನೆ ನೀಡಿ, ಇಲಾಖೆಗಳ ಮಾಹಿತಿ ಮತ್ತು ಪ್ರದರ್ಶನವನ್ನು ವೀಕ್ಷಿಸಿದರು.
ವಿವಿಧ ಯೋಜನೆಗಳ 36 ಸಾವಿರ ಫಲಾನುಭವಿಗಳು, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು, ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.