ಶುಕ್ರವಾರ, ಡಿಸೆಂಬರ್ 4, 2020
22 °C

ಅಪ್ಪನನ್ನು ಮೀರಿಸಿದ ಪುತ್ರ ದರ್ಶನ್‌ ಲಮಾಣಿ: ಶಾಸಕ ನೆಹರು ಓಲೇಕಾರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಮಾಜಿ ಸಚಿವ ಮತ್ತು ಕಾಂಗ್ರೆಸ್‌ ನಾಯಕ ರುದ್ರಪ್ಪ ಲಮಾಣಿ ಅವರ ಇತಿಹಾಸವೇ ಕ್ರಿಮಿನಲ್‌ ಚಟುವಟಿಕೆಗಳಿಗೆ ಸಂಬಂಧಪಟ್ಟಿದೆ. ಅವರ ಪುತ್ರ ದರ್ಶನ್‌ ಆರ್‌.ಲಮಾಣಿ ಡ್ರಗ್ಸ್‌ ಪ್ರಕರಣದಲ್ಲಿ ಬಂಧನವಾಗುವ ಮೂಲಕ ಅಪ್ಪನನ್ನೇ ಮೀರಿಸಿದ ಮಗ ಎನಿಸಿದ್ದಾನೆ’ ಎಂದು ಶಾಸಕ ನೆಹರು ಓಲೇಕಾರ ವ್ಯಂಗ್ಯವಾಡಿದರು. 

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಯುವತಿಯರನ್ನು ಕದ್ದು ಮಾರುವ ಪ್ರಕರಣದಲ್ಲಿ ರುದ್ರಪ್ಪ ಲಮಾಣಿ ಅವರ  ಹೆಸರು ಪತ್ರಿಕೆಗಳಲ್ಲಿ ಹಿಂದೆ ಪ್ರಕಟವಾಗಿತ್ತು. ಅವರ ಸಂಬಂಧಿಕರ 7 ಎಕರೆ ಎಲೆಬಳ್ಳಿ ತೋಟವನ್ನು ಕಡಿಸಿ ಹಾಕಿರುವ ಪ್ರಕರಣ ಇವರ ಮೇಲಿದೆ. 50 ಎಕರೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡಿರುವ ಪ್ರಕರಣ ಇನ್ನೂ ಜೀವಂತವಾಗಿದೆ’ ಎಂದು ಗಂಭೀರ ಆರೋಪ ಮಾಡಿದರು.

‘ಹಾವೇರಿ ನಗರದ ರಾಜಕಾಲುವೆಯನ್ನು ಮುಚ್ಚಿ ಮನೆ ಕಟ್ಟಿಕೊಂಡಿರುವುದರಿಂದ, ಮಳೆ ನೀರು ನಗರದ ಮುಖ್ಯರಸ್ತೆಗೆ ನುಗ್ಗಿ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಸಂಬಂಧ ಒತ್ತುವರಿ ಜಾಗ ತೆರವುಗೊಳಿಸುವಂತೆ ನಗರಸಭೆ ಈಚೆಗೆ ನೋಟಿಸ್ ನೀಡಿತ್ತು. ಆದರೆ ರುದ್ರಪ್ಪ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ತಡೆಯಾಜ್ಞೆ ತರುವ ಕೆಟ್ಟ ಕೆಲಸ ಮಾಡಿದ್ದಾರೆ’ ಎಂದು ಟೀಕಿಸಿದರು. 

‘ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ’ ರುದ್ರಪ್ಪ ಲಮಾಣಿ ಅವರು ತಾವು ದುಷ್ಕೃತ್ಯಗಳನ್ನು ಮಾಡಿ, ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ನೆಹರು ಓಲೇಕಾರ ಅವರು ತಮ್ಮ ವಿರೋಧಿಗಳ ವಿರುದ್ಧ ‘ಜಾತಿ ನಿಂದನೆ’ ಪ್ರಕರಣ ದಾಖಲಿಸುತ್ತಾರೆ ಎಂದು ರುದ್ರಪ್ಪ ಆರೋಪ ಮಾಡಿದ್ದರು. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ‘ಆಕಳ ಮುಖ ಕತ್ತಿ ಹೊದಿಕೆ’ ರೀತಿ ರುದ್ರಪ್ಪ ಅವರ ಚರಿತ್ರೆ ಇದ್ದು, ಇನ್ನಾದರೂ ಪಾಠ ಕಲಿಯಲಿ’ ಎಂದು ತಿರುಗೇಟು ನೀಡಿದರು. 

ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ಸೇರಿ ಮೂವರ ಬಂಧನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು