ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ನಿರೀಕ್ಷೆ ಹುಸಿಗೊಳಿಸಲ್ಲ: ಶಾಸಕ ರುದ್ರಪ್ಪ ಲಮಾಣಿ

ಕೃತಜ್ಞತಾ ಸಮರ್ಪಣಾ ಸಮಾರಂಭ; ಶಾಸಕ ರುದ್ರಪ್ಪ ಲಮಾಣಿ ಹೇಳಿಕೆ
Published 2 ಜೂನ್ 2023, 14:01 IST
Last Updated 2 ಜೂನ್ 2023, 14:01 IST
ಅಕ್ಷರ ಗಾತ್ರ

ಹಾವೇರಿ: ಮತದಾರರ ನಿರೀಕ್ಷೆ ಹುಸಿಗೊಳಿಸದೇ ಅವರ ಋಣ ತೀರಿಸಲು ಸದಾ ಕ್ರಿಯಾಶೀಲನಾಗಿರುವೆ. ವಿಧಾನಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರಮಿಸಿರುವ ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞನಾಗಿರುವೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.

2018ರಲ್ಲಿ ನಾನು ಶಾಸಕ ಮತ್ತು ಸಚಿವನಾಗಿದ್ದ ಸಂದರ್ಭದಲ್ಲಿ ಮಾಡಿದ ಕೆಲಸಗಳು ಈ ಬಾರಿ ಕೈಹಿಡಿದಿವೆ. ಕಾಕತಾಳೀಯ ಎಂಬಂತೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ನಾನು ಈ ಬಾರಿ ಮತ್ತೆ ಸಚಿವನಾಗುವ ಅವಕಾಶ ಸ್ವಲ್ಪದರಲ್ಲೇ ತಪ್ಪಿದೆ. ಮುಂದಿನ ದಿನಗಳಲ್ಲಿ ಸುಯೋಗ ಬರಬಹುದು. ಸಚಿವನಾಗದಿದ್ದರೂ ಶಾಸಕನಾಗಿ ತಮ್ಮ ಜೊತೆಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ ಎಂದರು. 

ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಲೋಕಸಭಾ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗೋಣ ಎಂದು ಹೇಳಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಹಾವೇರಿ ಮೀಸಲು ವಿಧಾನಸಭೆ ಕ್ಷೇತ್ರಕ್ಕೆ ಪಕ್ಷ ಮುಂಚಿತವಾಗಿ ರುದ್ರಪ್ಪ ಲಮಾಣಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘಟನೆ ಮತ್ತು ಗ್ಯಾರಂಟಿ ಯೋಜನೆಗಳು ಮತದಾರರ ಆಕರ್ಷಣೆಗಳಿಗೆ ಕಾರಣವಾದ ಪರಿಣಾಮ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲು ಕಾರಣವಾಯಿತು ಎಂದರು.

ಮುಖಂಡರಾದ ಎಂ.ಎ.ಗಾಜಿಗೌಡ್ರ, ಡಾ.ಸಂಜಯ ಡಾಂಗೆ, ಜಯಶ್ರೀ ಶಿವಪುರ, ಈರಪ್ಪ ಲಮಾಣಿ, ಸಿ.ಬಿ. ಪಾಟೀಲ, ಚಂದ್ರಶೇಖರ ಮುದಕಣ್ಣವರ ಮಾತನಾಡಿದರು.

ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಶಾಸಕ ರುದ್ರಪ್ಪ ಲಮಾಣಿ ಅಭಿಮಾನಿಗಳು ಶಾಲು ಹೊದಿಸಿ, ಹೂಗುಚ್ಛ ಅರ್ಪಿಸಿ ಶುಭಾಶಯ ಕೋರಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಪ್ರಸನ್ನ ಹಿರೇಮಠ ಸ್ವಾಗತಿಸಿದರು. ಸತೀಶ ಈಳಗೇರ ನಿರೂಪಿಸಿ, ವಂದಿಸಿದರು. ಶಿವಕುಮಾರ ತಾವರಗಿ, ಜಗದೀಶ ಬೆಟಗೇರಿ, ಶಾಂತಕ್ಕ ಶಿರೂರ, ಶ್ರೀಧರ ದೊಡ್ಡಮನಿ, ಪ್ರಭುಗೌಡ ಬಿಷ್ಟನಗೌಡ್ರ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.

ಅನುಭವಗಳಿಂದ ಪಾಠ ಕಲಿತಿದ್ದೇನೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಚಿಂತಿಸುವ ಅಗತ್ಯವಿಲ್ಲ. ತಮ್ಮೊಂದಿಗೆ ಸದಾ ಬೆರೆತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ – ರುದ್ರಪ್ಪ ಲಮಾಣಿ ಶಾಸಕ

ಕಾರ್ಯಕರ್ತರು ಪಕ್ಷದ ಜೀವಾಳ. ಅವರು ಗಟ್ಟಿ ಇದ್ದರೆ ಮಾತ್ರ ಪಕ್ಷ ಗಟ್ಟಿಯಾಗಿರುತ್ತದೆ. ಮುಂಬರುವ ಚುನಾವಣೆಗಳಿಗೆ ಶ್ರಮಿಸಲು ಈಗಿನಿಂದಲೇ ಸಜ್ಜುಗೊಳ್ಳೋಣ – ಎಂ.ಎಂ. ಹಿರೇಮಠ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ಕಾಂಗ್ರೆಸ್ ಅಲೆ ಮತ್ತು ಗ್ಯಾರಂಟಿ ಯೋಜನೆಗಳಿಂದ ರುದ್ರಪ್ಪ ಲಮಾಣಿ ಅವರಿಗೆ ಗೆಲುವು ಸಾಧ್ಯವಾಗಿದೆ. ಆದರೆ ಹಾವೇರಿ ನಗರದಲ್ಲಿ 1341 ಮತಗಳು ಕಡಿಮೆ ಬಂದಿರುವುದು ಬೇಸರ ಮೂಡಿಸಿದೆ –

-ಸಂಜೀವಕುಮಾರ ನೀರಲಗಿ, ನಗರಸಭೆ ಮಾಜಿ ಅಧ್ಯಕ್ಷ

Cut-off box - ‘ತಪ್ಪು ಸರಿಪಡಿಸಿಕೊಂಡರೆ ಮಾತ್ರ ಗೆಲುವು’ ಯಲವಿಗಿ ಹತ್ತಿಮತ್ತೂರ ಮತ್ತು ಶಿರಬಡಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಗಿಂತ ಕಡಿಮೆ ಮತಗಳು ಚಲಾವಣೆ ಆಗಿವೆ. ಈ ತಪ್ಪುಗಳನ್ನು ಸರಿಪಡಿಸಿಕೊಂಡರೆ ಮಾತ್ರ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವು ಸಾಧ್ಯ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ‌ಹೇಳಿದರು. ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಗೆಲುವು ಸಾಧಿಸಿರುವ ರುದ್ರಪ್ಪ ಲಮಾಣಿ ಅವರು ಕಾರ್ಯಕರ್ತರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್.ಎಫ್.ಎನ್ ಗಾಜಿಗೌಡ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT