ಭಾನುವಾರ, ನವೆಂಬರ್ 28, 2021
19 °C

ಹಾನಗಲ್ ಜನ ಜಾಣರು, ಆಪತ್ಭಾಂದವನ ಕೈ ಹಿಡಿಯುತ್ತಾರೆ: ದೇಶಪಾಂಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್.ವಿ.ದೇಶಪಾಂಡೆ

ಅಕ್ಕಿಆಲೂರ: ‘ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಲು ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದಾರೆ. ಹಾನಗಲ್ ಜನ ಜಾಣರಿದ್ದಾರೆ. ಎಲ್ಲವನ್ನೂ ಅಳೆದು-ತೂಗುವ ಶಕ್ತಿ ಅವರಲ್ಲಿದೆ. ಈಗಾಗಲೇ ಕ್ಷೇತ್ರದಲ್ಲಿ ಶ್ರೀನಿವಾಸ ಮಾನೆ ಅವರ ಬಗೆಗೆ ಉತ್ತಮ ಅಭಿಪ್ರಾಯವಿದೆ. ಜನರಿಗೆ ಕಷ್ಟಕಾಲದಲ್ಲಿ ಸ್ಪಂದಿಸಿದ್ದಾರೆ ಎನ್ನುವ ಭಾವನೆ ಇದ್ದು, ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ’ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಕೈಗೊಳ್ಳಲು ಕ್ಷೇತ್ರಕ್ಕೆ ಭಾನುವಾರ ಆಗಮಿಸಿದ್ದ ಅವರು ಕತ್ರಿಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೊರೊನಾ ನೆಪ ಹೇಳಿ ಸರ್ಕಾರ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನಗಳೆಲ್ಲವನ್ನೂ ನಿಲ್ಲಿಸಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸಾಕಷ್ಟು ಅನುದಾನ ಪ್ರತಿಯೊಂದು ಕ್ಷೇತ್ರಗಳಿಗೂ ಹರಿದು ಬಂದ ಕಾರಣ ಅಭಿವೃದ್ಧಿ ಕಾರ್ಯಗಳು ಅನಷ್ಠಾನಗೊಳ್ಳುವಂತಾಯಿತು. ಆದರೆ ಮಾತಿನಲ್ಲೇ ಮನೆ ಕಟ್ಟುವ ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನೇ ನೀಡುತ್ತಿಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜನ ಸಿಟ್ಟು ತೀರಿಸಿಕೊಳ್ಳಲಿದ್ದಾರೆ:

‘ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬಸವಳಿದಿದ್ದಾರೆ. ಸುಶಿಕ್ಷಿತರೂ ಕೂಲಿ ಕೆಲಸಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರ ಬಗೆಗೆ ಬಿಜೆಪಿಗೆ ಕಾಳಜಿ ಇಲ್ಲದಂತಾಗಿದೆ. ಜನರ ಖರ್ಚು-ವೆಚ್ಚಗಳೆಲ್ಲವೂ ದುಬಾರಿಯಾಗಿದ್ದು, ಆದಾಯ ಗೋತಾ ಆಗಿದೆ. ಹೀಗಾದರೆ ಜನ ಬದುಕುವುದಾದೂ ಹೇಗೆ’ ಎಂದು ಪ್ರಶ್ನಿಸಿದ ಅವರು, ಸರ್ಕಾರದ ವಿರುದ್ಧ ಈ ಉಪ ಚುನಾವಣೆಯ ಮೂಲಕ ಜನ ಸಿಟ್ಟು ತೀರಿಸಿಕೊಳ್ಳಲಿದ್ದಾರೆ ಎಂದರು.

ಬಿಜೆಪಿ ಕುತಂತ್ರ ಫಲ ನೀಡಲ್ಲ:

‘ಸಿ.ಎಂ. ಉದಾಸಿ ಅವರಿಗೆ ಅನಾರೋಗ್ಯದಿಂದ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳಲಾಗಲಿಲ್ಲ. ಆದರೆ ಶ್ರೀನಿವಾಸ ಮಾನೆ ಕ್ರಿಯಾಶೀಲರಾಗಿ ಕ್ಷೇತ್ರದ ತುಂಬೆಲ್ಲಾ ಓಡಾಡಿ, ಜನಮನ ಗೆದ್ದಿದ್ದಾರೆ. ಸುಖ ಇದ್ದಾಗ ಎಲ್ಲರೂ ಓಡೋಡಿ ಬರುತ್ತಾರೆ. ಆದರೆ ಕಷ್ಟ ಇದ್ದಾಗ ಯಾರೂ ಬರಲ್ಲ. ಈ ಮಾತಿಗೆ ಶ್ರೀನಿವಾಸ ಮಾನೆ ಅಪವಾದ. ಕೊರೊನಾ ಸಂದರ್ಭದಲ್ಲಿ ಜನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಗ ಅವರ ನೆರವಿಗೆ ನಿಂತು ಆಪತ್ಭಾಂದವ ಎನಿಸಿದ್ದಾರೆ. ಶ್ರೀನಿವಾಸ ಮಾನೆ ಅವರ ಜನಪ್ರಿಯತೆ ಸಹಿಸದೇ ರೋಸಿ ಹೋಗಿರುವ ಬಿಜೆಪಿ ನಾಯಕರು ಕುತಂತ್ರದಲ್ಲಿ ನಿರತರಾಗಿದ್ದು, ಕುತಂತ್ರ ಯಾವವೂ ಫಲ ನೀಡಲ್ಲ. ಜನ ಬುದ್ಧಿವಂತರಿದ್ದು, ಆಪತ್‌ಕಾಲದಲ್ಲಿ ಜೊತೆಗಿದ್ದವನ ಕೈ ಹಿಡಿಲಿದ್ದಾರೆ’ ಎಂದು ಆರ್.ವಿ.ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು