ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಿಧ ಸ್ಪರ್ಧೆಯಲ್ಲಿ ತ್ರಿವಿಕ್ರಮ ಸಾಧನೆ

ಈಜು, ಓಟ ಮತ್ತು ಸೈಕ್ಲಿಂಗ್‌ನಲ್ಲಿ ಮಿಂಚು ಹರಿಸಿದ ಸದಾನಂದ ಅಮರಾಪುರ
Last Updated 25 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸವಣೂರ: ತಾಲ್ಲೂಕು ಪಂಚಾಯ್ತಿಯ ‘ನರೇಗಾ’ ಸಹಾಯಕ ನಿರ್ದೇಶಕರಾದ ಸದಾನಂದ ಅಮರಾಪುರ ಅವರು ಕುಸ್ತಿ, ಸೈಕ್ಲಿಂಗ್, ಈಜು ಹಾಗೂ ಓಟ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ತಾಲ್ಲೂಕಿನ ಇಚ್ಚಂಗಿ ಗ್ರಾಮದವರಾದ ಸದಾನಂದ ಅವರುಬಿಎ ಪದವಿಯನ್ನು ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ವಿಟಿಯು ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಇವರ ತಂದೆಯವರಾದ ಹನುಮಂತಪ್ಪ ಅಮರಾಪೂರ ಉತ್ತಮ ಕುಸ್ತಿಪಟುವಾಗಿದ್ದರು. ಅಪ್ಪನ ಪಟ್ಟುಗಳನ್ನು ನೋಡಿದ ಮಗ ಕೂಡ ಕುಸ್ತಿ ಕಲೆಯತ್ತ ಆಕರ್ಷಿತರಾದರು.ಪಿಯುಸಿಯಿಂದ ಡಿಗ್ರಿಯವರೆಗೆ ಕುಸ್ತಿಪಟುವಾಗಿ ಹಲವಾರು ಭಾಗಗಳಲ್ಲಿ ಪ್ರದರ್ಶನವನ್ನು ನೀಡಿ ಪ್ರಶಸ್ತಿ ಪಡೆದಿದ್ದಾರೆ.

ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ನಡೆದ ಕುಸ್ತಿ ಕ್ರೀಡೆಯಲ್ಲಿ ವಿಜಯಶಾಲಿಗಳಾಗಿ ಪದಕಗಳಿಗೆ ಕೊರಳಿಡಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಕ್ರೀಡೆಯಲ್ಲೂ ಭಾಗವಹಿಸಿದ ಹೆಗ್ಗಳಿಕೆ ಇವರದ್ದು.

ಪದವಿ ಶಿಕ್ಷಣದ ಕೊನೆಯ ವರ್ಷದಲ್ಲಿದ್ದಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, 7 ತಿಂಗಳು ಮನೆಯಲ್ಲೇ ಉಳಿಯಬೇಕಾಯಿತು. ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ, ಕುಸ್ತಿ ತ್ಯಜಿಸಿ ಓಟ ಮತ್ತು ಈಜು ಕ್ರೀಡೆಯತ್ತ ಆಕರ್ಷಿತರಾದರು. 2010ರಿಂದ 2017ರವರೆಗೆ ಪಿಡಿಒ ಆಗಿ ಕಾರ್ಯನಿರ್ವಹಿಸಿದ ಇವರು ಕೆಲಸದ ಒತ್ತಡದ ಮಧ್ಯೆಯೂ ಅಧಿಕಾರಿಗಳ ಅನುಮತಿ ಪಡೆದು ಈಜು ಮತ್ತು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಧಾರವಾಡದ ಎಲುಬು ಮತ್ತು ಕೀಲು ತಜ್ಞರಾದ ಸಂದೀಪಪ್ರಭು ಅವರ ಮಾರ್ಗದರ್ಶನ ತೆಗೆದುಕೊಂಡು ಸೈಕ್ಲಿಂಗ್ ಕ್ರೀಡೆಯಲ್ಲಿ ತರಬೇತಿ ಪಡೆದರು.2017ರಲ್ಲಿ ಆಡೆಕ್ಸ್ ಇಂಟರ್‌ನ್ಯಾಷನಲ್‌ ಸ್ಪೋರ್ಟ್ಸ್‌ ಸಂಸ್ಥೆಯವರು ನಡೆಸಿದ ಸ್ಪರ್ಧೆಯಲ್ಲಿ ‘ಸೂಪರ್ ರೈಡರ್’ ಪ್ರಶಸ್ತಿ ಪಡೆದಿದ್ದಾರೆ.

‘ಹಾಫ್‌ಐರನ್‌ಮ್ಯಾನ್‌' ಕ್ರೀಡೆಯಲ್ಲಿ ತೇರ್ಗಡೆಯಾದ ಇವರು,3 ಕಿ.ಮೀ ಈಜು, 120 ಕಿ.ಮೀ. ಸೈಕ್ಲಿಂಗ್, 25 ಕಿ.ಮೀ. ರನ್ನಿಂಗ್ ಅನ್ನು 9 ಗಂಟೆ 13 ನಿಮಿಷದಲ್ಲಿ ಕ್ರಮಿಸಿ ‘ಟೈಗರ್‌ ಮ್ಯಾನ್‌’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘ಪ್ರಸಕ್ತ ವರ್ಷ ಐರನ್‌ ಮ್ಯಾನ್‌ ಪ್ರಶಸ್ತಿಪಡೆಯುವುದೇ ನನ್ನ ಮುಖ್ಯಗುರಿಯಾಗಿದೆ. ಆ ಪ್ರಶಸ್ತಿ ಪಡೆದು ನನ್ನ ತಂದೆಯವರಿಗೆ ಅರ್ಪಿಸುತ್ತೇನೆ. ಯುವಕರು ದುಶ್ಚಟಗಳಿಂದ ದೂರ ಉಳಿದು, ಉತ್ತಮ ಸಾಧನೆ ಮಾಡುವತ್ತ ಮನಸು ಮಾಡಬೇಕು’ ಎಂಬುದು ಸದಾನಂದ ಅವರ ಮನದಾಳದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT