ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಅಂದಿನ ಚಂಗೂರೇ ಇಂದಿನ ಸಂಗೂರ

Published 8 ಅಕ್ಟೋಬರ್ 2023, 5:21 IST
Last Updated 8 ಅಕ್ಟೋಬರ್ 2023, 5:21 IST
ಅಕ್ಷರ ಗಾತ್ರ

ಗುತ್ತಲ: ಹಾವೇರಿ ತಾಲ್ಲೂಕಿನ ಪಶ್ಚಿಮಕ್ಕೆ ಹಾನಗಲ್ ರಸ್ತೆಯ ಮಾರ್ಗವಾಗಿ 10 ಕಿ.ಮೀ ದೂರದಲ್ಲಿರುವ ಗ್ರಾಮವೇ ಸಂಗೂರ ಗ್ರಾಮ.

ಚಾಲುಕ್ಯರ ಮತ್ತು ರಾಷ್ಟ್ರಕೂಟರ ಶಾಸನಗಳಲ್ಲಿ ಇದನ್ನು ಚಂಗೂರು, ಚಂಗಾಪೂರ ಮತ್ತು ಸಂಗೂರು ಎಂದು ಕರೆಯಲಾಗಿದೆ. ಕ್ರಮೇಣ ಅದು ಚ ಕಾರಕ್ಕೆ ಬದಲಾಗಿ ಸ ಕಾರ ಆದೇಶವಾಗಿ ಸಂಗೂರ ಎಂದು ಕರೆಯಲ್ಪಡುತ್ತಿದೆ ಎಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.

ವರದಾ ನದಿಯ ದಡದಲ್ಲಿರುವ ಸಂಗೂರ ಗ್ರಾಮ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ. ಸ್ವಾತಂತ್ರ್ಯ  ಹೋರಾಟಗಾರ ಸಂಗೂರ ಕರಿಯಪ್ಪ ಸಂಗೂರ ಗ್ರಾಮದಲ್ಲಿ ಜನಿಸಿದವರು.

ಮಹಾತ್ಮಗಾಂಧೀಜಿ ಅವರ ಸಾಕು ಮಗಳು ವೀರಮ್ಮರನ್ನು ಕೈ ಹಿಡಿದವರೆ ಸಂಗೂರ ಕರಿಯಪ್ಪನವರು. ಗಾಂಧೀಜಿ ಅವರು ಹುತಾತ್ಮದ ನಂತರ ಅವರ ಚಿತಾಭಸ್ಮವನ್ನು ತಮ್ಮ ಸಾಕು ಮಗಳಾದ ವೀರಮ್ಮ ಮತ್ತು ಕರಿಯಪ್ಪ ದಂಪತಿಗೆ ಅಂದಿನ ಸರ್ಕಾರ ಕಳುಹಿಸಿ ಕೊಟ್ಟಿತ್ತು. ಚಿತಾಭಸ್ಮದ ಸ್ಥಳ ಈಗ ಗಾಂಧೀಜಿ ಸ್ಮಾರಕವಾಗಿ ರಾಜ್ಯ, ರಾಷ್ಟ್ರದಲ್ಲಿ ಹೆಸರು ಪಡೆದಿದೆ.

ಸಕ್ಕರೆ ಕಾರ್ಖಾನೆಯ ತ್ಯಾಜ್ಯ ವರದಾ ನದಿಯನ್ನು ಸೇರುತ್ತಿರುವುದರಿಂದ ಕಲುಷಿತವಾಗುತ್ತಿದೆ. ಗ್ರಾಮವನ್ನು ಶಾಸನಗಳು ಮತ್ತು ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಬೇಕು.
ಶ್ರೀನಿವಾಸ ಯರಿಸೀಮಿ, ನಿವೃತ್ತ ಯೋಧ, ಸಂಗೂರ

ವರದಾ ನದಿಯ ದಡದಲ್ಲಿರುವ ಕುಮಾರೇಶ್ವರ ಮಠದ ಜಾತ್ರೆ ಪ್ರತಿವರ್ಷ ಮಕರ ಸಂಕ್ರಾತಿ ದಿನದಂದು ಅದ್ಧೂರಿಯಾಗಿ ನಡೆಯುತ್ತಿದೆ. ಸಂಗೂರ ಗ್ರಾಮದಲ್ಲಿರುವ ಸಂಗೂರ ಸಕ್ಕೆರೆ ಕಾರ್ಖಾನೆ ಜಿಲ್ಲೆಗೆ ಏಕೈಕ ಕಾರ್ಖಾನೆಯಾಗಿತ್ತು. 30 ವರ್ಷಗಳ ಅವಧಿಯಲ್ಲಿ ಕಾರ್ಯರ್ವಹಿಸುತ್ತಿರುವ ಕಾರ್ಖಾನೆಯಿಂದಾಗಿ ಸಂಗೂರ ಗ್ರಾಮ ಎಲ್ಲಡೆ ಪ್ರಸಿದ್ದಿ ಪಡೆದಿದೆ.

ಗ್ರಾಮವು 1916 ಹೆಕ್ಟೇರ್ ಭೌಗೋಳಿಕ ಕ್ಷೇತ್ರವನ್ನು ಹೊಂದಿದೆ. 1600 ಹೆಕ್ಟೇರ್ಪ್ರದೇಶವು ಕೃಷಿ ಭೂಮಿಯನ್ನು ಹೊಂದಿದೆ. ಕೆಂಪು ಮಿಶ್ರಿತ ಕಪ್ಪು ಮಣ್ಣು ಹೊಂದಿದ ಭೂಮಿಯಲ್ಲಿ ಭತ್ತ, ಕಬ್ಬು, ಗೋವಿನಜೋಳ, ಹತ್ತಿ, ಮೆಣಸಿನಕಾಯಿ, ಬೆಳೆಗಳನ್ನು ಬೆಳೆಯುತ್ತಾರೆ. ಬೀದರಗಡ್ಡಿ, ದಿಡಗೂರ, ಗ್ರಾಮಗಳನ್ನು ಒಳಗೊಂಡಿರುವ ಸಂಗೂರ ಗ್ರಾಮ ಪಂಚಾಯತಿ 6 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ.

ಗ್ರಾಮದಲ್ಲಿರುವ ಗಾಂಧೀಜಿ ಅವರ ಚಿತಾಭಸ್ಮ ಸ್ಥಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜಿಲ್ಲಾಡಳಿತ ಈ ಜಾಗವನ್ನು ಅಭಿವೃದ್ಧಿ ಪಡಿಸಬೇಕು
ಚಿಕ್ಕಮ್ಮ ಆಡೂರ, ಮಹಾತ್ಮ ಗಾಂಧೀಜಿ ಮೊಮ್ಮಗಳು

ಕೃಷಿ ಪ್ರಧಾನ ಕಸಬು ಆಗಿರುವ ಸಂಗೂರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಗ್ರಾಮದಲ್ಲಿ 2 ಕೆರೆಗಳಿವೆ. ದ್ಯಾಮವ್ವ, ದುರ್ಗಾದೇವಿ, ಆಂಜನೇಯ, ಬೀರಲಿಂಗೇಶ್ವರ, ಬಸವೇಶ್ವರ ದೇವಸ್ಥಾನ ಗ್ರಾಮದ ಪ್ರಮುಖ ದೇವಾಲಯಗಳಾಗಿವೆ.

ಸಂಗೂರಿನ ರಾಮಲಿಂಗದೇವರು, ವೀರಭದ್ರ, ಈಶ್ವರ ಮತ್ತು ಕಲ್ಮೇಶ್ವರ, ದೇವಾಲಯಗಳು ಪ್ರಾಚೀನ ದೇವಾಲಯಗಳಾಗಿವೆ. ಇವೆಲ್ಲ ಕಲ್ಯಾಣ ಚಾಲುಕ್ಯರ ಕಾಲದ ಕಟ್ಟಡಗಳು.

ಗ್ರಾಮದಲ್ಲಿ ಒಟ್ಟು ಎಂಟು ಶಾಸನಗಳು ಸಿಕ್ಕಿವೆ. ಸಿಂಹ ಬೇಟೆ ವೀರಗಲ್ಲು, ರಾಷ್ಟ್ರಕೂಟ ಜಗತುಂಗನ ಕಾಲಕ್ಕೆ ಸೇರಿದ ವೀರಗಲ್ಲು, ಕಲಚೂರಿ ಬಿಜ್ಜಳನ ಕಾಲದ ಶಾಸನ, ಯಾದವ ಅರಸ ಮಾಹಾದೇವನ ಎರಡು ಶಾಸನ, 12ನೇ ಶತಮಾನದ ಜೈನ ಶಾಸನ, ರಾಷ್ಟ್ರಕೂಟರ ಕಾಲದ ನಾಲ್ಕು ಗೋಶಾಸನ ಶಿಲೆಗಳು ರಾಮಲಿಂಗ ದೇವಾಲಯದ ಹಿಂದೆ ಇವೆ.

ಮಹಾತ್ಮ ಗಾಂಧೀಜೀಯವರ ಚಿತಾಭಸ್ಮಇರುವ ಸ್ಥಳ
ಮಹಾತ್ಮ ಗಾಂಧೀಜೀಯವರ ಚಿತಾಭಸ್ಮಇರುವ ಸ್ಥಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT