ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಚಿಣ್ಣರನ್ನು ಅಚ್ಚರಿಗೊಳಿಸುವ ವಿಜ್ಞಾನ ಕೇಂದ್ರ

Published 22 ಫೆಬ್ರುವರಿ 2024, 5:05 IST
Last Updated 22 ಫೆಬ್ರುವರಿ 2024, 5:05 IST
ಅಕ್ಷರ ಗಾತ್ರ

ಹಾವೇರಿ: ಹಾವೇರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್ ಹಾಗೂ ಜಿಲ್ಲಾಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು ಭೇಟಿ ನೀಡಿ, ವಿಜ್ಞಾನ ಕೇಂದ್ರದ ಪ್ರಾಯೋಗಿಕ ಮಾದರಿಗಳನ್ನು ವೀಕ್ಷಣೆ ಮಾಡಿದರು.

ಫೆ.18ರಂದು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಉಪ ವಿಜ್ಞಾನ ಕೇಂದ್ರದ ಉದ್ಘಾಟಿಸಿದ್ದರು. ಬುಧವಾರ ವಿಜ್ಞಾನ ಕೇಂದ್ರ ವೀಕ್ಷಣೆ ಹಾಗೂ ತಾರಾಲಯ ವಿಭಾಗ ವೀಕ್ಷಣೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಚಾಲನೆ ನೀಡಿದರು.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಗಿರೀಶ್ ಪದಕಿ, ಎಸ್.ಎಸ್ ಅಡಿಗ, ಬಸನಗೌಡ ಪಾಟೀಲ್, ಮಂಜಪ್ಪ ಆರ್, ಸಿದ್ದರಾಮ ಅಜಗೊಂಡ್ರ, ಲತಾಮಣಿ ಇತರ ಅಧಿಕಾರಿಗಳು ಭಾಗವಹಿಸಿದ್ದರು.

₹7 ಕೋಟಿ ವೆಚ್ಚ

ಅಂದಾಜು ₹7 ಕೋಟಿ ವೆಚ್ಚದಲ್ಲಿ ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನಿರ್ಮಿತಿ ಕೇಂದ್ರ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣ ಕೈಗೊಂಡರೆ, ಒಳ ಆವರಣದ ವೈಜ್ಞಾನಿಕ ಮಾದರಿಗಳ ಅಳವಡಿಕೆಗೆ ಬೆಂಗಳೂರಿನ ಧೀನಬಂಧು ಸಂಸ್ಥೆ, ಪುಣೆಯ ಟಯೋಮಾ ಬಿಫಾಲ್ ಯು ಸಂಸ್ಥೆ ಹಾಗೂ ತಾರಾಲಯ ವಿಭಾಗವನ್ನು ನೋಯ್ಡಾದ ಫುಲ್‍ಡಾನ್ ಫ್ರೋ ಸಂಸ್ಥೆ ನಿರ್ವಹಿಸಿದೆ.

ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ಆಸಕ್ತರಿಗೆ ವೈಜ್ಞಾನಿಕ ಜಗತ್ತಿನ ಆಸಕ್ತಿದಾಯಕ ನೂರಾರು ಭೌತವಿಜ್ಞಾನ, ಖಗೋಳ, ತಾರಾಲಯ, ಬಾಹ್ಯಾಕಾಶ, ಮೋಜಿನ ಗ್ಯಾಲರಿಗಳು ಅಚ್ಚರಿಯ ಸಂಗತಿಗಳ ಪ್ರದರ್ಶನ, ಮಾದರಿ ಕುತೂಹಲ ಮೂಡಿಸುತ್ತಿವೆ.

ಆಕರ್ಷಕ ವಿಜ್ಞಾನ ಗ್ಯಾಲರಿ

ಈ ಗ್ಯಾಲರಿ ಒಟ್ಟು 40 ಒಳಾಂಗಣ ವಿಜ್ಞಾನ ಮಾದರಿಗಳನ್ನು ಹೊಂದಿದ್ದು, ಎಲ್ಲ ಮಾದರಿಗಳು ವಿಜ್ಞಾನ ಹಾಗೂ ಗಣಿತ ವಿಷಯದ ಪರಿಕಲ್ಪನೆ ಆಧಾರದ ಮೇಲೆ ಕಾರ್ಯನಿರ್ವಸುತ್ತದೆ. ಸಂವಾದಾತ್ಮಕ ಪ್ರದರ್ಶನಗಳನ್ನು ಒದಗಿಸುವ ಮೂಲಕ ಅಸಂಖ್ಯಾತ ಜನರ ಕುತೂಹಲವನ್ನು ಪ್ರಚೋದಿಸಲು ಮತ್ತು ಅವರ ಸೃಜನಶೀಲತೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ.

‘ಜ್ಞಾನಂ ವಿಜ್ಞಾನಂ ಸಹಿತಂ’ ಎನ್ನುವಂತೆ ವೈಜ್ಞಾನಿಕ ಲೋಕದ ಅಚ್ಚರಿಗಳನ್ನು ಮಕ್ಕಳಾದಿಯಾಗಿ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಲು ಜಿಲ್ಲಾಡಳಿತ ಭವನದ ಎದುರಿನ ದೇವಗಿರಿ ಗುಡ್ಡದಲ್ಲಿ ನಿರ್ಮಾಣ ಮಾಡಲಾದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಕ್ಕಳ ಹಾಗೂ ಪಾಲಕರ ವಿಜ್ಞಾನದ ತಿಳುವಳಿಕೆಗೆ ಅತ್ಯಂತ ಅರ್ಥಪೂರ್ಣ ಕೊಡುಗೆ ಎನ್ನಬಹುದು ಎನ್ನುತ್ತಾರೆ 

ಕಣ್ಮನ ಸೆಳೆಯುವ ತಾರಾಲಯ

ಕಣ್ಮನ ಸೆಳೆಯುವ ತಾರಾಲಯವು ಈ ವಿಜ್ಞಾನ ಕೇಂದ್ರದ ಅತ್ಯಾಕರ್ಷಣೆಯುಳ್ಳ ಗ್ಯಾಲರಿಯಾಗಿದೆ. ಇಲ್ಲಿ ಆಕಾಶದ ಬಗ್ಗೆ ಶೈಕ್ಷಣಿಕ ಮತ್ತು ಮನರಂಜನೆಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗುತ್ತದೆ. ಅಳತೆಯುಳ್ಳ ಗುಮ್ಮಟವನ್ನು ನಿರ್ಮಿಸಿದ್ದು ಪರದೆಯ ಮೇಲೆ 3ಡಿ ವೀಕ್ಷಣೆಯನ್ನು ಮಾಡಬಹುದು. ಹಲವಾರು ವಿಜ್ಞಾನ ಹಾಗೂ ಗಣಿತ ಮಾದರಿಗಳಿದ್ದು ಮಕ್ಕಳು ಪ್ರಾಯೋಗಿಕವಾಗಿ ಆಟದ ಮೂಲಕ ವಿಷಯವನ್ನು ಅರ್ಥೈಸಲು ಸಹಕಾರಿಯಾಗಿದೆ.

ಬಾಹ್ಯಾಕಾಶದ ಗ್ಯಾಲರಿ

ಬಾಹ್ಯಾಕಾಶದ ಚರಿತ್ರೆ ಹಾಗೂ ಅನ್ವೇಷಣೆಗಳನ್ನು ಒಳಗೊಂಡ ನಾಲ್ಕು ಮಾದರಿಗಳನ್ನು ಏರ್ಪಡಿಸಲಾಗಿದೆ ಹಾಗೂ ರಾಕೆಟ್ ತಂತ್ರಜ್ಞಾನದ ಮಾದರಿಗಳು ಮಕ್ಕಳನ್ನು ವಿಜ್ಞಾನದ ಪ್ರಪಂಚಕ್ಕೆ ಕರೆದೊಯ್ಯಲು ಸಹಕಾರಿಯಾಗಿದೆ. ನೈಸರ್ಗಿಕವಾಗಿ ಸಂಭವಿಸುವ ವಿಪತ್ತುಗಳ ಬಗ್ಗೆ ಮಾಹಿತಿಗಳನ್ನು ಹಾಗೂ ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಐದು ಪ್ರಾಯೋಗಿಕ ಮಾದರಿಗಳನ್ನು ಅಳವಡಿಸಿದ್ದು ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ.

ಪ‍್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬಾವಿ ಮಾದರಿಯನ್ನು ವೀಕ್ಷಿಸುತ್ತಿರುವ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ್‌. 
ಪ‍್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬಾವಿ ಮಾದರಿಯನ್ನು ವೀಕ್ಷಿಸುತ್ತಿರುವ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT