ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ವಿವಿ ಹುದ್ದೆಗಳ ಆಯ್ಕೆ ಕಾನೂನು ಬಾಹಿರ: ಬಸವರಾಜ ಗೊಬ್ಬಿ

Published 9 ಜುಲೈ 2023, 14:47 IST
Last Updated 9 ಜುಲೈ 2023, 14:47 IST
ಅಕ್ಷರ ಗಾತ್ರ

ಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ಕಾನೂನು ಬಾಹೀರವಾಗಿ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದ್ದು, ಕೂಡಲೇ ರಾಜ್ಯಪಾಲರು ಈ ನೇಮಕಾತಿ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಜಾನಪದ ವಿಶ್ವವಿದ್ಯಾಲಯದ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಗೊಬ್ಬಿ ಆಗ್ರಹಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ವಿಶ್ವವಿದ್ಯಾಲದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಎಲ್ಲಾ ದಾಖಲೆಗಳೊಂದಿಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಿದ್ದೇವೆ. ಅಲ್ಲದೇ ಈ ನೇಮಕಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಅವಕಾಶ ವಂಚಿತ ಅಭ್ಯರ್ಥಿಗಳು ಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ನೇಮಕಾತಿ ಅಕ್ರಮದ ಬಗ್ಗೆ ಪ್ರಶ್ನಿಸಿದರೆ ನಮ್ಮ ಮೇಲೆಯೇ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ದೂರಿದ ಅವರು ನಮ್ಮ ಟ್ರಸ್ಟ್ಅನ್ನು 2022 ರಲ್ಲೇ ನೋಂದಣಿ ಮಾಡಿಸಿಕೊಂಡಿದ್ದೇವೆ‘ ಎಂದು ಸ್ಪಷ್ಟಪಡಿಸಿದರು.

ಜಾನಪದ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ಜಾಹೀರಾತು ನೀಡಿ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಬೋಧಕ, ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆ ಮುಂದುವರೆಸಲು ಸರ್ಕಾರ 27 ಏಪ್ರಿಲ್‌ 2023ರಂದು ಅನುಮತಿ ನೀಡಿತ್ತು. ನೇಮಕಾತಿ ಪ್ರತಿಕ್ರಿಯೆಗಳನ್ನು ಸಂಪೂರ್ಣವಾಗಿ ಯುಜಿಸಿ ಪರನಿಯಮಾವಳಿ ಹಾಗೂ ಪ್ರಸ್ತುತ ಸರ್ಕಾರ ಕಾಲಕಾಲಕ್ಕೆ ಹೊರಡಿಸಿರುವ ಸುತ್ತೋಲೆಗಳನ್ನು ಪಾಲಿಸಿ ಅದರಂತೆ ಕ್ರಮವಹಿಸುವಂತೆ ಸೂಚಿಸಿತ್ತು. ಆದರೆ, ವಿಶ್ವವಿದ್ಯಾಲಯದ ಅಧಿಕಾರಿಗಳು 20 ಏಪ್ರಿಲ್‌ 2023ರಂದೇ ನೇಮಕಾತಿಯ ಪರೀಕ್ಷೆಯ ಪಠ್ಯಕ್ರಮ ಪ್ರಕಟಿಸಿದ್ದಾರೆ. ಸರ್ಕಾರ ನೇಮಕಾತಿಗೆ ಅನುಮತಿ ನೀಡುವ ಮೊದಲೇ ಪಠ್ಯಕ್ರಮ ಪ್ರಕಟಿಸಿರುವುದರ ಹಿಂದೆ ಸಾಕಷ್ಟು ಸಂಶಯ ಇದೆ ಎಂದು ಕಿಡಿಕಾರಿದರು.

ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮದ ಕುರಿತು ನಾವು ಸರ್ಕಾರದ ಗಮನಕ್ಕೆ ತಂದಾಗ ಸರ್ಕಾರ ಈ ನೇಮಕಾತಿಯಲ್ಲಿ ಅಪಾರ ಪ್ರಮಾಣದ ಅಕ್ರಮ ಹಾಗೂ ವಿಶ್ವವಿದ್ಯಾಲಯದ ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡಲಾಗಿದೆ. ಹೀಗಾಗಿ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನೀಡಿದ ನಿರ್ದೇಶನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ದೂರುಗಳ ಕುರಿತು ವಿಸ್ತೃತವಾದ ವರದಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸುವಂತೆ 26 ಮೇ 2023 ರಂದು ಸೂಚಿಸಿತ್ತು. ಆದರೆ, ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸದೇ 29 ಮೇ 2023 ರಂದು ಸಿಂಡಿಕೇಟಿನ ಸಭೆ ನಡೆಸಲಾಗಿದೆ. ಈ ಸಭೆಗೆ ಸರ್ಕಾರ ಸಂಬಂಧಿತ ಅಧಿಕಾರಿಗಳು ಪಾಲ್ಗೊಳ್ಳದಿದ್ದರೂ ಅವರ ಪರವಾಗಿ ಬೇರೆಯವರು ಸಹಿ ಮಾಡಿದ್ದಾರೆ. ಸಿಂಡಿಕೇಟ್ ಸಭೆಯ ದಿನವೇ ಅಭ್ಯರ್ಥಿಗಳ ಸಂದರ್ಶನ ನಡೆಸಿ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಹೀಗೆ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಮಾಡಿಕೊಂಡಿರುವುದರ ಹಿಂದೆ ಅಕ್ರಮದ ಶಂಕೆ ಇದೆ ಎಂದು ಆರೋಪಿಸಿದರು.

ನ್ಯಾಯವಾದಿ ಬಸವರಾಜ ಜೇಕ್ಕಿನಕಟ್ಟಿ ಮಾತನಾಡಿ, ವಿಶ್ವವಿದ್ಯಾಲಯದ ನೇಮಕಾತಿ ಸಂಪೂರ್ಣವಾಗಿ ಅಕ್ರಮದಿಂದ ಕೂಡಿದೆ. ಪರೀಕ್ಷಾ ಪ್ರವೇಶ ಪತ್ರಗಳನ್ನು ಸರಿಯಾಗಿ ಮುಟ್ಟಿಸಿಲ್ಲ, ಕೆಲ ಪ್ರವೇಶ ಪತ್ರಗಳ ಮೇಲೆ ಅಭ್ಯರ್ಥಿಗಳ ಭಾವಚಿತ್ರ ಇಲ್ಲ, ಕೆಲವರ ಭಾವಚಿತ್ರ ಇದ್ದರೂ ಅಧಿಕಾರಿಗಳ ಸಹಿ ಇಲ್ಲ, ಹಣಕಾಸಿನ ಒಪ್ಪಂದ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ರಾತ್ರೋರಾತ್ರಿ ಪ್ರವೇಶ ಪತ್ರ ಮುಟ್ಟಿಸಲಾಗಿದೆ. ಒಂದೇ ಪಠ್ಯಕ್ರಮದಲ್ಲಿ 3 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ. ವಿವಿಯ ಅಧಿಕಾರಿಗಳು ತಮ್ಮ ಸಂಬಂಧಿಕರಿಂದಲೇ ಲಕ್ಷಾಂತರ ಹಣ ಹೊಡೆದು ಅಕ್ರಮವಾಗಿ ನೇಮಕಾತಿ ಮಾಡಿಕೊಂಡಿದ್ದಾರೆ. ಹೀಗಾಗಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಕೂಡಲೇ ರಾಜ್ಯಪಾಲರು ತನಿಖೆ ನಡೆಸಿ ನೇಮಕಾತಿಯನ್ನು ಅಸಿಂಧುಗೊಳಿಸಬೇಕು ಎಂದು ಒತ್ತಾಯಿಸಿದರು.

ರುದ್ರಗೌಡ ಪೊಲೀಸ್‌ಗೌಡ್ರ,ಶಿವಪ್ಪ ಅಳವಂಡಿ, ಮಂಜುನಾಥ ಹಾವೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ನಿಯಮ ಪಾಲನೆ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಟಿ.ಎಂ.ಭಾಸ್ಕರ್ ಅವರ ಪ್ರತಿಕ್ರಿಯಿಸಿ ‘ಬಸವರಾಜ ಗೊಬ್ಬಿ ಅವರ ಆರೋಪ ಸತ್ಯಕ್ಕೆ ದೂರವಾಗಿದ್ದು ಅವರ ಆರೋಪದಲ್ಲಿ ಹುರುಳಿಲ್ಲ. ಸರ್ಕಾರದ ನಿಯಮಾವಳಿ ಹಾಗೂ ನಿರ್ದೇಶನದಂತೆ 2018 ರಲ್ಲಿ ನೋಟಿಫಿಕೇಶನ್ ಆಗಿತ್ತು. ಅದಕ್ಕೆ ಸಂಬಂಧಿಸಿದ ಪರವಾನಿಗೆ ಸಹ ದೊರೆತಿತ್ತು. ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ಅರ್ಹತೆ ಪಟ್ಟಿ ಮಾಡಿ ಸಕಾಲಕ್ಕೆ ಪರೀಕ್ಷೆ ನಡೆಸಿದ್ದೇವೆ. ಪರೀಕ್ಷಾ ಸಮಯದಲ್ಲಿ ಸರ್ಕಾರದ ನಿರ್ದೇಶನವನ್ನು ಹಾಗೂ ಚುನಾವಣೆ ನೀತಿಸಂಹಿತೆಗೆ ಸಂಬಂಧ ಪಟ್ಟ ಆದೇಶಗಳು ಪರೀಕ್ಷೆಗಳು ನಡೆಸಬೇಕು ಎನ್ನುವ ಹಿನ್ನೆಲೆ ನಿರ್ದೇಶನ ಇರುವುದರಿಂದ ಹಾಗೂ ಅದಕ್ಕೆ ಸಂಬಂಧಿಸಿದ ಆದೇಶಗಳು ಇರುವುದರಿಂದ ಪರೀಕ್ಷೆ ನಡೆಸಿದ್ದೇವೆ. ಅರ್ಹತೆ ಇರುವವರನ್ನೇ ಸಂದರ್ಶನ ಮಾಡಿ ಆಯ್ಕೆ ಮಾಡಿದ್ದೇವೆ. ಬಸವರಾಜ ಗೊಬ್ಬಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT