ಶನಿವಾರ, ಅಕ್ಟೋಬರ್ 8, 2022
23 °C
ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮ

ಸೇವಾ ಪಾಕ್ಷಿಕ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆ.17ರಿಂದ ಅಕ್ಟೋಬರ್‌ 2ರವರೆಗೆ ‘ಸೇವಾ ಪಾಕ್ಷಿಕ’ ಕಾರ್ಯಕ್ರಮದಡಿ ಅನೇಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ತಿಳಿಸಿದರು. 

ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಸೆ.25ರಂದು ನಮ್ಮ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ದೀನದಯಾಳ್ ಉಪಾಧ್ಯಾಯರ ಜನ್ಮದಿನ. ಅ.2ರಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇವಾ ಪಾಕ್ಷಿಕವನ್ನು ಆಚರಿಸಲಿದ್ದಾರೆ. ಇದೇ 17ರಂದು ಯುವ ಮೋರ್ಚಾ ವತಿಯಿಂದ ದೇಶದಾದ್ಯಂತ ರಕ್ತದಾನ ಶಿಬಿರ ಏರ್ಪಡಿಸಲಾಗುವುದು. ಅಂಗವಿಕಲರಿಗೆ ಕೃತಕ ಅಂಗಾಂಗ ಜೋಡಣೆ ಶಿಬಿರ ಏರ್ಪಡಿಸಲಾಗುತ್ತದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಬಿಜೆಪಿ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವರು. ಸಸಿಗಳನ್ನೂ ನೆಡಲಿದ್ದಾರೆ. 2025ಕ್ಕೆ ಭಾರತವು ಕ್ಷಯ ರೋಗದಿಂದ ಮುಕ್ತ ಆಗಬೇಕೆಂಬುದು ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ಅದಕ್ಕಾಗಿ ಪ್ರತಿ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು 5 ಜನ ರೋಗಿಗಳಿಗೆ ಮಾರ್ಗದರ್ಶನ, ಚಿಕಿತ್ಸಾ ವ್ಯವಸ್ಥೆ, ಪೂರಕ ಬೆಂಬಲ ಕೊಡಲಿದ್ದಾರೆ.

8 ವರ್ಷಗಳಲ್ಲಿ ನರೇಂದ್ರ ಮೋದಿಯವರು ಸೇವಾ, ಸುಶಾಸನ, ಬಡವರ ಕಲ್ಯಾಣದ ಮೂಲಕ ನಿಜವಾದ ನಾಯಕತ್ವ ಏನೆಂಬುದನ್ನು ಪ್ರದರ್ಶಿಸಿದ್ದಾರೆ. 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟಿರುವುದು ಮಹಿಳೆಯರ ಘನತೆ ಹೆಚ್ಚಳಕ್ಕೆ ಕೊಟ್ಟ ಕೊಡುಗೆ. ಹಗರಣ ಮುಕ್ತ ಆಡಳಿತ ನೀಡಿದ್ದಾರೆ ಎಂದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ, ಶಶಿಧರ ಹೊಸಳ್ಳಿ, ಜಿಲ್ಲಾ ವಕ್ತಾರರಾದ ಪ್ರಭು ಹಿಟ್ನಳ್ಳಿ, ಜಿಲ್ಲಾ ಮಾಧ್ಯಮ ಸಂಚಾಲಕ ಕಿರಣ ಕೋಣನವರ, ಜಿಲ್ಲಾ ಮಾಧ್ಯಮ ಸಮಿತಿ ಸದಸ್ಯ ಮಧುಕೇಶ್ವರ ಹಂದ್ರಾಳ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.